2019ಕ್ಕೆ ರಾಹುಲ್ ಗಾಂಧಿ ಪ್ರಧಾನಿ ಪಟ್ಟಕ್ಕೇರಲಿದ್ದಾರೆ

By Kannadaprabha NewsFirst Published Jul 12, 2018, 7:56 AM IST
Highlights

ಎಲ್ಲ ಜಾತ್ಯತೀತ ಶಕ್ತಿಗಳು ಮತೀಯ ಶಕ್ತಿಗಳನ್ನು ಸೋಲಿಸಲಿವೆ. ನರೇಂದ್ರ ಮೋದಿ ಅವರು 2019ಕ್ಕೆ ಸೋಲಲಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಪ್ರಧಾನಮಂತ್ರಿಯಾಗುವ ಲಕ್ಷಣ ಗೋಚರಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು :  ಲೋಕಸಭೆ ಚುನಾವಣೆಯನ್ನು 2019ರ ಮೇ ಬದಲಿಗೆ ಈ ವರ್ಷದ ನವೆಂಬರ್‌-ಡಿಸೆಂಬರ್‌ ತಿಂಗಳಲ್ಲೇ ನಡೆಸಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಬಿಜೆಪಿಯ ಸುಳ್ಳು ಪ್ರಚಾರಗಳನ್ನು ಸಮರ್ಥವಾಗಿ ಎದುರಿಸಿ ಜನರಿಗೆ ಸತ್ಯ ತಿಳಿಸಬೇಕು. ಈ ಮೂಲಕ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನು ಗೆಲ್ಲಲು ಸಜ್ಜಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕರ್ತರಿಗೆ ಕರೆ ನೀಡಿದರು.

ಬುಧವಾರ ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ದಿನೇಶ್‌ ಗುಂಡೂರಾವ್‌ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ್‌ ಖಂಡ್ರೆ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ನುಡಿದಂತೆ ನಡೆದು ಸಾಕಷ್ಟುಕಾರ್ಯಕ್ರಮ ನೀಡಿದರೂ ಬಿಜೆಪಿ ನಡೆಸಿದ ಅಪಪ್ರಚಾರ ಹಾಗೂ ಹಿಂದುತ್ವದ ಸುಳ್ಳು ಪ್ರಚಾರದಿಂದ ನಾವು ಸೋತಿದ್ದೇವೆ. 

ಅವರ ಸುಳ್ಳನ್ನು ಅಲ್ಲಗೆಳೆಯುವ ಪ್ರಯತ್ನವನ್ನು ನಾವು ಪ್ರಾಮಾಣಿಕವಾಗಿ ಮಾಡಿಲ್ಲ. ಇದೂ ಕೂಡ ನಮ್ಮ ಸೋಲಿಗೆ ಪ್ರಮುಖ ಕಾರಣ. ಪ್ರತಿ 30 ಜನ ಮತದಾರರಿಗೆ ಒಬ್ಬ ಕಾರ್ಯಕರ್ತನ ನೇಮಕ ಮಾಡಿ ನಿತ್ಯ ಸುಳ್ಳು ಬಿತ್ತುವ ಕೆಲಸ ಮಾಡಿದರು. ಅದಕ್ಕೆ ಪ್ರತ್ಯುತ್ತರ ನೀಡುವ ಕೆಲಸ ಮಾಡಿಲ್ಲ. ಇದೀಗ ಬಿಜೆಪಿ ಅಪಪ್ರಚಾರಕ್ಕೆ ಪ್ರತಿಯಾಗಿ ಜನರಿಗೆ ಸತ್ಯ ತಿಳಿಸುವ ಕೆಲಸಕ್ಕೆ ಮುಂದಾಗಿ ಎಂದರು.

ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರಮಟ್ಟದ ವಿಚಾರಗಳು ಪ್ರಮುಖವಾಗುತ್ತವೆ. ಹೀಗಾಗಿ ನರೇಂದ್ರ ಮೋದಿ ವೈಫಲ್ಯ ಹಾಗೂ ಅವರ ಸುಳ್ಳು ಭರವಸೆಯನ್ನು ಜನರಿಗೆ ಮುಟ್ಟಿಸಬೇಕು. ಹಿಂದುತ್ವ ಹಾಗೂ ಸುಳ್ಳು ಪ್ರಚಾರದ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿ ನರೇಂದ್ರ ಮೋದಿ ಇದ್ದಾರೆ. ಹೀಗಾಗಿ ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯಲು ಮುಂದಾಗುವ ಸಾಧ್ಯತೆ ಇದೆ. 

ಹೀಗಾಗಿ ಕೇಂದ್ರ ಮಟ್ಟದಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಲಿವೆ. ಎಲ್ಲ ಜಾತ್ಯತೀತ ಶಕ್ತಿಗಳು ಮತೀಯ ಶಕ್ತಿಗಳನ್ನು ಸೋಲಿಸಲಿವೆ. ನರೇಂದ್ರ ಮೋದಿ ಅವರು 2019ಕ್ಕೆ ಸೋಲಲಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಪ್ರಧಾನಮಂತ್ರಿಯಾಗುವ ಲಕ್ಷಣ ಗೋಚರಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

click me!