
ಮೈಸೂರು: ಜೆಡಿಎಸ್‌ಗೆ ಮತ ಹಾಕಿದರೆ ಅದು ಬಿಜೆಪಿಗೆ ಹಾಕಿದಂತೆ, ಕೋಮುವಾದಿ ಪಕ್ಷಕ್ಕೆ ಬೆಂಬಲ ನೀಡಿದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್‌ಗೆ ಮತ ಹಾಕಿದರೆ ಅದು ಕಾಂಗ್ರೆಸ್‌ಗೆ ಹಾಕಿದಂತೆ ಎಂದು ಅಮಿತ್ ಶಾ ಹೇಳಿದ್ದಾರೆ. ನಾನು ಹೇಳ್ತಿನಿ ಕೇಳಿ, ಜೆಡಿಎಸ್‌ಗೆ ಮತ ಹಾಕಿದರೆ ಅದು ಬಿಜೆಪಿಗೆ ಹಾಕಿದಂತೆ, ಕೋಮುವಾದಿ ಪಕ್ಷಕ್ಕೆ ಬೆಂಬಲ ನೀಡಿದಂತೆ’ ಎಂದರು.
ಜತೆಗೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾವು ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲಿದ್ದೇವೆ, ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಬಿರುಸಿನ ಪ್ರಚಾರ, ರೋಡ್ ಶೋ:
ಐದು ದಿನಗಳ ಮೈಸೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರವೂ ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ರೋಡ್ ಶೋ ನಡೆಸಿ ಮತಯಾಚಿಸಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ 5 ವರ್ಷದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇವೆ. ಆದರೆ ಬಿಜೆಪಿ ಮತ್ತು ಜೆಡಿಎಸ್‌ನವರು ಬರೀ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆಯೇ ವಿನಃ ಒಂದೇ ಒಂದು ಭ್ರಷ್ಟಾಚಾರ ಸಾಬೀತು ಮಾಡಿಲ್ಲ ಎಂದು ಕಿಡಿಕಾರಿದರು.
40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ನನಗೆ ಜನರ ನಾಡಿ ಮಿಡಿತ ಗೊತ್ತಿದೆ. ಅಲ್ಲದೆ, ನಾವು ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಲೆ ಎದ್ದಿದೆ ಎಂದ ಅವರು, ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು. ಜನರ ಆಶೀರ್ವಾದ ಯಾರ ಮೇಲಿರುತ್ತದೆಯೋ ಅವರೇ ಗೆಲ್ಲುತ್ತಾರೆಯೇ ಹೊರತು ಯಾರಿಂದಲೂ ಯಾರನ್ನೂ ಸೋಲಿಸಲು ಸಾಧ್ಯವಿಲ್ಲ ಎಂದರು.
2006ರ ಉಪ ಚುನಾವಣೆಯಲ್ಲಿ ನನಗೆ ರಾಜಕೀಯ ಮರುಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಮತ್ತೆ ಸ್ಪರ್ಧಿಸಿ ಗೆದ್ದು ನಿಮ್ಮ ಋುಣ ತೀರಿಸುತ್ತೇನೆ. ಇದು ನನ್ನ ಕೊನೇ ಚುನಾವಣೆ ಎಂದು ಸಿಎಂ ತಿಳಿಸಿದರು.
ರೆಸಾರ್ಟ್‌ನಲ್ಲಿ ಬಂಡಲ್‌ಗಟ್ಟಲೆ ಹಣ: ಎಚ್‌ಡಿಕೆಯದ್ದು ಅನುಭವದ ಮಾತು
ರೆಸಾರ್ಟ್‌ನಲ್ಲಿ ಮುಖ್ಯಮಂತ್ರಿ ಬಂಡಲ್‌ಗಟ್ಟಲೆ ಹಣ ಹಂಚಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅವರು ತಮ್ಮ ಅನುಭವದ ಮಾತು ಹೇಳಿದ್ದಾರೆ. ಅವರು ಮಾಡೋದನ್ನು ನಮಗೆ ಬೆರಳು ಮಾಡಿ ತೋರಿಸುತ್ತಾರೆ’ ಎಂದು ಟಾಂಗ್ ನೀಡಿದರು. ಹ್ಯೂಬ್ಲೆಟ್ ವಾಚ್, ಅರ್ಕಾವತಿ ಬಡಾವಣೆ ಸೇರಿ ನನ್ನ ವಿರುದ್ಧ 20 ದೂರುಗಳನ್ನು ಒಬ್ಬನೇ ನೀಡಿದ್ದಾನೆ. ಅಷ್ಟುದೂರಿನಲ್ಲಿ ಯಾವುದರಲ್ಲೂ ಹುರುಳಿಲ್ಲ. ಬಿಜೆಪಿಯವರು ಸುಳ್ಳು ಹೇಳಲು ಒಂದು ವ್ಯವಸ್ಥೆ ಸೃಷ್ಟಿಮಾಡಿದ್ದಾರೆ. ಬರೀ ಸುಳ್ಳು ಹೇಳಿಕೊಂಡು ಹೋದರೆ ಯಾರು ನಂಬುತ್ತಾರೆ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಹಾಲಪ್ಪಗೆ ಕ್ಲೀನ್‌ಚಿಟ್ ಸಿಕ್ಕಿದೆ, ಗಣಿ ರೆಡ್ಡಿ ಸಂಪರ್ಕದಲ್ಲಿಲ್ಲ
ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಖುಲಾಸೆ ಆಗಿದ್ದಾರೆ. ಒಂದೇ ಐಡಿಯಾಲಜಿ ಇರುವ ನಾಯಕರು ಪಕ್ಷಕ್ಕೆ ಬಂದರೆ ಸ್ವಾಗತ. ಮಾಲೀಕಯ್ಯ ಗುತ್ತೆದಾರ್ ಬಿಜೆಪಿಗೆ ಹೋದರೆ ಬಿಜೆಪಿ ನಾಯಕರು ಏನ್ ಮಾಡ್ತಾರೆ ಎಂದು ಸಿಎಂ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರಶ್ನೆಯೊಂದಕ್ಕೆ ಮರು ಪ್ರಶ್ನೆ ಎಸೆದರು. ಇದೇ ವೇಳೆ, ಮಾಜಿ ಸಚಿವ ಜನಾರ್ದನ ರೆಡ್ಡಿಯೊಂದಿಗೆ ಮಾತನಾಡಿ ಬಹಳ ವರ್ಷ ಆಗಿದೆ. ಪಕ್ಷ ಸೇರುವ ವಿಚಾರಕ್ಕೆ ಸಂಬಂಧಿಸಿ ಆತ ನನ್ನ ಜೊತೆ ಸಂಪರ್ಕದಲ್ಲಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.