ಬಿಜೆಪಿಗೆ ಸಿಎಂ ಆಹ್ವಾನ : ತಿರಸ್ಕರಿಸಿದ ನಾಯಕರು

By Web DeskFirst Published Jun 17, 2019, 9:49 AM IST
Highlights

ಮುಖ್ಯಮಂತ್ರಿ ಎಚ್  ಡಿ ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ಪತ್ರ ಬರೆದಿದ್ದಾರೆ. ಪತ್ರದ ಮೂಲಕ ಆಹ್ವಾನ ನೀಡಿದ್ದು ಆದರೆ ಈ ಆಹ್ವಾನವನ್ನು ಬಿಜೆಪಿಗರು ತಿರಸ್ಕರಿಸಿದ್ದಾರೆ. 

ಬೆಂಗಳೂರು [ಜೂ.17] :  ಭಾನುವಾರ  ಬಿಜೆಪಿ ನಾಯಕರು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಕ್ಕೆ ಮುತ್ತಿಗೆ ಹಾಕಲು ಹೊರಡುವ ಕೆಲ ನಿಮಿಷಗಳ ಮುನ್ನ ಮುಖ್ಯಮಂತ್ರಿಗಳು ಸಚಿವ ವೆಂಕಟರಾವ್ ನಾಡಗೌಡ ಅವರ ಮೂಲಕ ಪತ್ರ ಕಳುಹಿಸಿ ಜಿಂದಾಲ್‌ಗೆ ಭೂಮಿ ನೀಡುವ ವಿಚಾರವಾಗಿ ತಮ್ಮೊಂದಿಗೆ ಚರ್ಚಿಸಲು ಸಿದ್ಧನಿದ್ದೇನೆ ಎಂದು ಆಹ್ವಾನ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಸಚಿವ ವೆಂಕಟರಾವ್ ನಾಡಗೌಡ, ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಅವರು ಕೊಟ್ಟು ಕಳುಹಿಸಿದ್ದ ಪತ್ರವನ್ನು ಹಸ್ತಾಂತರಿಸಿ ತಮ್ಮ ಎಲ್ಲ ಬೇಡಿಕೆಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದ್ದು ಮುಖ್ಯಮಂತ್ರಿ ಅವರ ಆಹ್ವಾನದಂತೆ ಮಾತುಕತೆಗೆ ಬರುವಂತೆ ಆಹ್ವಾನಿಸಿದರು. ಆದರೆ, ಇದಕ್ಕೆ ಬಿಜೆಪಿ ನಾಯಕರು ಒಪ್ಪಲಿಲ್ಲ. 

ಎರಡು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಅಥವಾ ಮುಖ್ಯಮಂತ್ರಿ ಅವರ ಗಮನಕ್ಕೆ ಬಂದಿರಲಿಲ್ಲವಾ? ಈಗ ಎಚ್ಚೆತ್ತುಕೊಂಡಿದ್ದಾರಾ? ಮುಖ್ಯಮಂತ್ರಿಗಳ ಮನೆ ಬಾಗಿಲಿಗೇ ಹೋಗಿ ಮಾತನಾಡುತ್ತೇವೆ ಎಂದು ಹೇಳಿ ತಮ್ಮ ಹೋರಾಟ ಮುಂದುವರೆಸಿದರು. ಸಚಿವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವೆಂಕಟರಾವ್ ನಾಡಗೌಡ, ಸರ್ಕಾರದ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿದ್ದೇನೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೂರವಾಣಿ ಕರೆ ಮಾಡಿ ಪ್ರತಿಭಟನಾ ಸ್ಥಳಕ್ಕೆ ತೆರಳಿ ಅವರ ಪತ್ರ ನೀಡುವಂತೆ ಸೂಚಿಸಿದರು. ಅದರಂತೆ ನಾನು ಇಲ್ಲಿಗೆ ಬಂದು ಪತ್ರ ನೀಡಿದ್ದೇನೆ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದರು.

click me!