ಎಚ್‌ಡಿಕೆ ಮಾಡಿದ ವಿಶ್ವಾಸದ್ರೋಹದಿಂದ ಧರಂ ಸಾವು

Published : Jul 10, 2018, 08:46 AM IST
ಎಚ್‌ಡಿಕೆ ಮಾಡಿದ ವಿಶ್ವಾಸದ್ರೋಹದಿಂದ ಧರಂ ಸಾವು

ಸಾರಾಂಶ

ನೋವಿನಲ್ಲಿ ಕೊರಗಿ ಧರ್ಮಸಿಂಗ್  ಸಾವು : ಬಿಎಸ್ ವೈ ಟೀಕೆ ನೀವು ಕೂಡ ಭಾಗಿಯಾಗಿಲ್ಲವೆ ಎಂದ ಹೆಚ್ಡಿಕೆ

ಬೆಂಗಳೂರು[ಜು.10]: ನಂಬಿದವರಿಗೆ ವಿಶ್ವಾಸದ್ರೋಹ ಮಾಡುವುದು ನಿಮಗೆ ರಕ್ತಗತವಾಗಿದೆ ಎಂದು ವಿಪಕ್ಷ ನಾಯಕ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣ ಪ್ರಸ್ತಾವದ ಮೇಲೆ ನಡೆದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡುವ ವೇಳೆ ಕುಮಾರಸ್ವಾಮಿ ಅವರ ಪ್ರಸ್ತಾಪಕ್ಕೆ ಯಡಿಯೂರಪ್ಪ ಪ್ರತಿಕ್ರಿಯಿಸಿದರು.

ನೀವು ಹಿಂದೆ 2006ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಎನ್ .ಧರ್ಮಸಿಂಗ್ ಅವರ ಬೆನ್ನಿಗೆ ಚೂರಿ ಹಾಕಿ, ವಿಶ್ವಾಸದ್ರೋಹ ಬಗೆದು ನಮ್ಮೊಂದಿಗೆ (ಬಿಜೆಪಿ) ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದಿರಿ. ಅದೇ ನೋವಿನಲ್ಲಿ ಕೊರಗಿ ಧರ್ಮಸಿಂಗ್ ಅವರು ಸಾವನ್ನಪ್ಪಿದ್ದರು ಎಂದು ಆಪಾದಿಸಿದರು.

ಇದಕ್ಕೆ ಕುಮಾರಸ್ವಾಮಿ ಅವರು ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಈ ಹಂತದಲ್ಲಿ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮತ್ತು ಪ್ರತಿಪಕ್ಷ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆಯಿತು. ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಮತ್ತಿತರರೂ ಸೇರಿದಂತೆ ಅನೇಕ ಸದಸ್ಯರು ಯಡಿಯೂರಪ್ಪ ಅವರ ಹೇಳಿಕೆಯನ್ನು ವಿರೋಧಿಸಿದರು.

ನಂತರ ಸ್ಪೀಕರ್ ರಮೇಶ್‌ಕುಮಾರ್ ಅವರು ಮಧ್ಯೆ ಪ್ರವೇಶಿಸಿ, ಧರ್ಮಸಿಂಗ್ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಕೆಲವು ತಿಂಗಳುಗಳಲ್ಲೇ ಸಾವನ್ನಪ್ಪಿದ್ದರೆ ನೀವು ಹೇಳಿದ ಮಾತಿಗೆ ಪುಷ್ಟಿ ಸಿಗುತ್ತಿತ್ತು. ಆದರೆ, ಅದಾಗಿ ಹನ್ನೊಂದು ವರ್ಷಗಳ ನಂತರ ಅವರು ಸಾವನ್ನಪ್ಪಿದ್ದಾರೆ. ಹೀಗಾಗಿ, ಆ ಹೇಳಿಕೆ ಸಮಂಜಸವಲ್ಲ ಎಂದರು. ನಂತರ ಮಧ್ಯೆ ಪ್ರವೇಶಿಸಿದ ಕುಮಾರಸ್ವಾಮಿ, ಸ್ಪೀಕರ್ ಅವರಿಗೆ ನಾನು ಆಭಾರಿಯಾಗಿದ್ದೇನೆ. ಹಾಗೊಂದು ವೇಳೆ ಆಗಿದ್ದರೆ ಅದರಲ್ಲಿ ನೀವೂ ಭಾಗಿಯಲ್ಲವೇ ಎಂದು ಯಡಿಯೂರಪ್ಪ ಅವರನ್ನು ಉದ್ದೇಶಿಸಿ ತೀಕ್ಷ್ಣವಾಗಿ ಪ್ರಶ್ನಿಸಿದರು. 

ಆದರೆ ಕುಮಾರ ಸ್ವಾಮಿ ಮಾತನ್ನು ಲೆಕ್ಕಿಸದೆ ಮಾತು ಮುಂದುವರೆ ಸಿದ ಯಡಿಯೂರಪ್ಪ ಅವರು, ಕಾಂಗ್ರೆಸ್ ಜತೆ ಸೇರಿ ಬೆನ್ನಿಗೆ ಚೂರಿ ಹಾಕಿ, ದ್ರೋಹ ಎಸಗಿ ನಮ್ಮ ಜೊತೆ ಕೈಜೋಡಿಸಿ ದಿರಿ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ಆಗ ನಾನೇನೂ ನಿಮ್ಮ ಮನೆಗೆ ಬಂದಿರಲಿಲ್ಲ. ಎಲುಬಿಲ್ಲದ ನಾಲಿಗೆ ಎಂದು ಏನೇನೋ ಮಾತನಾಡುತ್ತಿದ್ದೀರಿ. ನನಗೂ ಮಾತನಾಡಲು ಬರುತ್ತದೆ ಎಂದು ಏರಿದ ಧ್ವನಿಯಲ್ಲಿ ಹೇಳಿದರು.

ಅದೇ ಧಾಟಿಯಲ್ಲಿ ತಿರುಗೇಟು ನೀಡಿದ ಯಡಿಯೂರಪ್ಪ, ನನ್ನದಲ್ಲ ನಿಮ್ಮದು ಎಲುಬಿಲ್ಲದ ನಾಲಿಗೆ ಎಂದರು. ಈ ಹಂತದಲ್ಲಿ ಉಭಯ ನಾಯಕರ ನಡುವೆ ವಾಕ್ಸಮರ ಆರಂಭವಾಗುತ್ತಿದಂತೆಯೇ ಮಧ್ಯೆ ಪ್ರವೇಶಸಿದ ಸ್ಪೀಕರ್ ರಮೇಶ್‌ಕುಮಾರ್, ಉದ್ವೇಗಕ್ಕೆ ಒಳಗಾಗುವುದು ಬೇಡ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅ.1ರಿಂದ ಜನವರಿ 31ರ ವರೆಗೆ ಟೋಲ್ ಸಂಗ್ರಹ ಸ್ಥಗಿತಗೊಳಿಸಲು ಸುಪ್ರೀಂ ಕೋರ್ಟ್ ಸೂಚನೆ
ಕಂದಾಯ ಸಚಿವ ಕೃಷ್ಣಬೈರೇಗೌಡ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಮಾಡಿರುವ ಗಂಭೀರ ಆರೋಪ