ಸೂಕ್ಷ್ಮ ಕ್ಷಣಗಳಲ್ಲಿ ಪ್ರಬುದ್ಧ ನಿರ್ಧಾರ ಕೈಗೊಂಡ ಎಚ್‌ಡಿಕೆ

By Web DeskFirst Published Nov 27, 2018, 7:09 AM IST
Highlights

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಅತ್ಯಂತ ಸೂಕ್ಷ್ಮ ಕ್ಷಣಗಳಲ್ಲಿ ಪ್ರಬುದ್ಧ ನಿರ್ಧಾರ ಕೈಗೊಂಡು ನಟ ಅಂಬರಿಶ್ ಅವರ ಅಂತಿ ವಿಧಿ ವಿಧಾನಗಳನ್ನು ನಿರ್ವಹಿಸಿದ್ದಾರೆ. 

ಬೆಂಗಳೂರು :  ನಟ ಹಾಗೂ ಮಾಜಿ ಸಚಿವ ಅಂಬರೀಷ್‌ ನಿಧನದಿಂದ ಅಂತ್ಯಕ್ರಿಯೆವರೆಗೆ ಪ್ರತಿಯೊಂದು ಬೆಳವಣಿಗೆಯಲ್ಲೂ ಖುದ್ದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಮುಂದಾಳತ್ವ ವಹಿಸಿಕೊಳ್ಳುವ ಮೂಲಕ ಇಡೀ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ನೋಡಿಕೊಂಡಿದ್ದು ಪ್ರಶಂಸಾರ್ಹವಾಗಿತ್ತು.

ಕುಮಾರಸ್ವಾಮಿ ಅವರು ಅಧಿಕಾರಿಗಳ ಹೆಗಲಿಗೆ ಜವಾಬ್ದಾರಿ ವರ್ಗಾಯಿಸದೆ ತಮ್ಮ ಮನೆಯ ಸದಸ್ಯರೊಬ್ಬರನ್ನು ಕಳೆದುಕೊಂಡಾಗ ನಡೆದುಕೊಳ್ಳುವಂತೆ ತುಂಬಾ ಭಾವುಕತೆಯಿಂದ ಹಾಗೂ ಮುತುವರ್ಜಿಯಿಂದ ಎಲ್ಲೂ ಯಾವುದೇ ರೀತಿಯ ಅವ್ಯವಸ್ಥೆ ಆಗದಂತೆ ಎಚ್ಚರಿಕೆ ವಹಿಸಿದರು.

ಸೂಕ್ಷ್ಮವಾಗಿರುವ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಕುಮಾರಸ್ವಾಮಿ ಸತತ ಮೂರು ದಿನಗಳ ಕಾಲ ಅಂಬರೀಷ್‌ ಅವರ ನಿಧನಾನಂತರದ ಬೆಳವಣಿಗೆಗಳನ್ನು ಸಮರ್ಥವಾಗಿ ನಿಭಾಯಿಸಿದರು. ಮುಖ್ಯಮಂತ್ರಿಯೇ ನೇತೃತ್ವ ವಹಿಸಿಕೊಂಡಿದ್ದರಿಂದ ಸಹಜವಾಗಿಯೇ ಎಲ್ಲ ಅಧಿಕಾರಿಗಳೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಈ ಮೂಲಕ ಮುಖ್ಯಮಂತ್ರಿಯೊಬ್ಬ ಹೀಗೂ ಕೆಲಸ ಮಾಡಬಹುದು ಎಂಬುದನ್ನು ಕುಮಾರಸ್ವಾಮಿ ನಿರೂಪಿಸಿದರು.

ಶನಿವಾರ ಅಂಬರೀಷ್‌ ನಿಧನ ಹೊಂದಿದರು ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ರಾಜಧಾನಿ ಬೆಂಗಳೂರು ಸೇರಿದಂತೆ ಮಂಡ್ಯ ಮತ್ತಿತರ ಪ್ರದೇಶಗಳಲ್ಲಿ ಆತಂಕದ ಛಾಯೆ ಕಾಣಿಸಿಕೊಂಡಿತು. ಅಂಬರೀಷ್‌ ಅವರ ಅಭಿಮಾನಿಗಳ ಸಹನೆ ಕಟ್ಟೆಯೊಡೆದು ಬೀದಿಗಿಳಿದರೆ ಏನು ಎಂಬ ಚಿಂತೆಯೂ ಸರ್ಕಾರಕ್ಕಿತ್ತು. ಹೀಗಾಗಿಯೇ ತಕ್ಷಣ ಇಡೀ ಪರಿಸ್ಥಿತಿಯ ಅವಲೋಕನ ನಡೆಸಿದ ಕುಮಾರಸ್ವಾಮಿ ಅವರು ತಾವೇ ನೇತೃತ್ವ ವಹಿಸಿಕೊಂಡು ಅಂಬರೀಷ್‌ ಅವರ ಕುಟುಂಬ ಹಾಗೂ ಹಿರಿಯ ಸಚಿವರು-ಅಧಿಕಾರಿಗಳೊಂದಿಗೆ ಸತತ ಸಮಾಲೋಚನೆ ನಡೆಸುವ ಮೂಲಕ ಗಮನ ಸೆಳೆದರು.

ಅಂಬರೀಷ್‌ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಿ ವಾಪಸ್‌ ತರುವುದು ದೊಡ್ಡ ಸವಾಲೇ ಆಗಿತ್ತು. ಅಂಬರೀಷ್‌ ಅವರ ತವರು ಜಿಲ್ಲೆಯಾಗಿದ್ದರಿಂದ ಅಲ್ಲಿನ ಜನ ಭಾವನಾತ್ಮಕವಾಗಿ ಸಿಡಿದೆದ್ದು ಇಲ್ಲಿಯೇ ಅಂತ್ಯ ಸಂಸ್ಕಾರವಾಗಲಿ ಎಂಬ ಪಟ್ಟು ಹಿಡಿದರೆ ಏನು ಮಾಡುವುದು ಎಂಬುದು ಪೊಲೀಸರ ಚಿಂತೆಯಾಗಿತ್ತು. ಆದರೆ, ಕುಮಾರಸ್ವಾಮಿ ಅವರು ತಮ್ಮ ಮಾತಿನ ಚಾತುರ್ಯದ ಮೂಲಕ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದರು. ಆ ಮೂಲಕ ಅಂಬರೀಷ್‌ ಅಭಿಮಾನಿಗಳನ್ನೂ ಸಮಾಧಾನಪಡಿಸಿದರು.

2006ರಲ್ಲಿ ವರನಟ ಡಾ.ರಾಜ್‌ಕುಮಾರ್‌ ನಿಧನ ಹೊಂದಿದ ವೇಳೆ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದರು. ಆಗ ರಾಜ್‌ಕುಮಾರ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ವೇಳೆ ಗೋಲಿಬಾರ್‌ ನಡೆದು ಹಲವಾರು ಮಂದಿ ಸಾವನ್ನಪ್ಪಿದ್ದರು ಮತ್ತು ಗಾಯಗೊಂಡಿದ್ದರು. ಸಾಕಷ್ಟುಆಸ್ತಿಪಾಸ್ತಿಗೆ ನಷ್ಟಉಂಟಾಗಿತ್ತು. ಆಗ ಕುಮಾರಸ್ವಾಮಿ ಅವರಿಗೆ ಅನುಭವವೂ ಕಡಿಮೆಯಿತ್ತು. ಇದನ್ನು ಮನದಲ್ಲಿ ಇರಿಸಿಕೊಂಡಿದ್ದ ಕುಮಾರಸ್ವಾಮಿ ಅವರು ಈಗ ಆಡಳಿತದ ಅನುಭವದ ಮೂಸೆಯಿಂದಲೇ ನಿರ್ಧಾರ ಕೈಗೊಂಡು ಇಡೀ ಸನ್ನಿವೇಶವನ್ನು ತಮ್ಮ ಹತೋಟಿಗೆ ತೆಗೆದುಕೊಂಡರು. ಇದರಿಂದಾಗಿ ಸರ್ಕಾರ ನಿಟ್ಟುಸಿರು ಬಿಡುವಂತಾಯಿತು.

ಸೋಮವಾರ ಕಂಠೀರವ ಕ್ರೀಡಾಂಗಣದಿಂದ ಅಂಬರೀಷ್‌ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಗೆ ಚಾಲನೆ ನೀಡಿದ ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಜಾಫರ್‌ ಷರೀಫ್‌ ಅವರ ಅಂತ್ಯಕ್ರಿಯೆಯಲ್ಲೂ ಭಾಗಿಯಾದರು. ಅಲ್ಲಿಂದ ಅಂಬರೀಷ್‌ ಅವರ ಅಂತ್ಯಕ್ರಿಯೆ ಸ್ಥಳಕ್ಕೆ ತೆರಳಿ ಅವಲೋಕನ ನಡೆಸಿದ್ದಲ್ಲದೆ ಸಕ್ರಿಯವಾಗಿ ಪಾಲ್ಗೊಂಡರು.

click me!