ಅತೃಪ್ತ ಮುಖಂಡ ರಮೇಶ್ ಜಾರಕಿಹೊಳಿಗೆ ಹೊಸ ಆಫರ್

By Web DeskFirst Published Apr 26, 2019, 7:58 AM IST
Highlights

ಕಾಂಗ್ರೆಸ್ ಅತೃಪ್ತ ಮುಖಂಡ ರಮೇಶ್ ಜಾರಕಿಹೊಳಿಗೆ ಹೊಸ ಆಫರ್ ನೀಡಲಾಗಿದೆ. 

ಬೆಂಗಳೂರು :  ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಕಾಂಗ್ರೆಸ್‌ ತೊರೆಯುವುದಾಗಿ ಹೇಳಿರುವ ಕಾಂಗ್ರೆಸ್‌ ನಾಯಕ ರಮೇಶ್‌ ಜಾರಕಿಹೊಳಿ ಅವರಿಗೆ ಗಾಳ ಹಾಕಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿರುವುದು ತೀರಾ ಕಷ್ಟವಾದಲ್ಲಿ ಬಿಜೆಪಿಗೆ ವಲಸೆ ಹೋಗುವ ಬದಲು ಜೆಡಿಎಸ್‌ಗೆ ಬನ್ನಿ. ಸಚಿವ ಸ್ಥಾನ ನೀಡಲಾಗುವುದು ಎಂಬ ಪ್ರಸ್ತಾಪ ರೂಪದ ಆಹ್ವಾನವನ್ನು ಕುಮಾರಸ್ವಾಮಿ ಅವರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಇದಕ್ಕೆ ರಮೇಶ್‌ ಜಾರಕಿಹೊಳಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯೋಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಬುಧವಾರ ತಡರಾತ್ರಿ ಖಾಸಗಿ ಹೋಟೆಲ್‌ಗೆ ಕುಮಾರಸ್ವಾಮಿ ಅವರು ರಮೇಶ್‌ ಜಾರಕಿಹೊಳಿ ಅವರನ್ನು ಕರೆಸಿಕೊಂಡು ಸುಮಾರು ಒಂದೂವರೆ ಗಂಟೆ ಕಾಲ ಸಮಾಲೋಚನೆ ನಡೆಸಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಕೈಬಿಡುವಂತೆ ಕೋರಿದ್ದಾರೆ. ಸರ್ಕಾರದಿಂದ ಅಗತ್ಯ ಸಹಕಾರ ನೀಡುವ ಬಗ್ಗೆ ಆಶ್ವಾಸನೆ ನೀಡಿದ್ದಾರೆ. ಇದಲ್ಲದೇ, ಕಾಂಗ್ರೆಸ್‌ನಲ್ಲಿ ಇರುಸು-ಮುರುಸಾಗಿದ್ದರೆ ಜೆಡಿಎಸ್‌ಗೆ ಬರುವಂತೆ ಆಹ್ವಾನಿಸಿದ್ದಾರೆ.

ಜೆಡಿಎಸ್‌ನಲ್ಲಿ ಇನ್ನೂ ಎರಡು ಸಚಿವ ಸ್ಥಾನ ಖಾಲಿ ಇವೆ. ಆ ಪೈಕಿ ಒಂದು ಸ್ಥಾನವನ್ನು ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಮಿತ್ರ ಪಕ್ಷಗಳ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಲಾಗುತ್ತಿದೆ. ತಮ್ಮ ಹಾಗೂ ಬೆಳಗಾವಿ ಜಿಲ್ಲೆಗಳ ಸಮಸ್ಯೆಗಳನ್ನು ನಾನೇ ಖುದ್ದು ಬಗೆಹರಿಸುತ್ತೇನೆ ಎಂಬ ಮಾತು ಕೊಟ್ಟಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ವೇಳೆ ತಮ್ಮ ವಿರುದ್ಧ ತೊಡೆ ತಟ್ಟಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ಬೆಳಗಾವಿ ರಾಜಕೀಯ ವಿಚಾರದಲ್ಲಿ ತಲೆ ಹಾಕದಂತೆ ಎಚ್ಚರಿಕೆ ನೀಡುವಂತೆ ರಮೇಶ್‌ ಜಾರಕಿಹೊಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಹಮತ ವ್ಯಕ್ತಪಡಿಸಿರುವ ಕುಮಾರಸ್ವಾಮಿ ಅವರು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಯೋಚನೆಯನ್ನು ಕೈಬಿಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

click me!