ಅತೃಪ್ತರ ಅಖಾಡಕ್ಕೆ ಸಿಎಂ ಜೊತೆ ಟ್ರಬಲ್ ಶೂಟರ್ ಡಿಕೆಶಿ ಎಂಟ್ರಿ

By Web DeskFirst Published Apr 26, 2019, 7:42 AM IST
Highlights

ರಾಜ್ಯದಲ್ಲಿ ಮತ್ತೆ ಅತೃಪ್ತರ ಅಸಮಾಧಾನ ಭುಗಿಲೆದ್ದಿದೆ. ಸರ್ಕಾರಕ್ಕೂ ಕಂಟಕವಾಗುವ ಬಗ್ಗೆ ಮಾತುಗಳು ಕೇಳಿ ಬಂದಿವೆ. ಈ ನಿಟ್ಟಿನಲ್ಲಿ ಈ ಅಖಾಡಕ್ಕೆ ಇದೀಗ ಹಿರಿಯ ನಾಐಕರು ಎಂಟ್ರಿಯಾಗಿದ್ದಾರೆ. 

ಬೆಂಗಳೂರು :  ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ತಣ್ಣಗಾಗಿದ್ದ ರಾಜ್ಯ ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಪ್ರಯತ್ನವು ಮತ್ತೆ ಗರಿಗೆದರುತ್ತಿದ್ದಂತೆ ಅದನ್ನು ಚಿವುಟಿ ಹಾಕಲು ಖುದ್ದು ಅಖಾಡಕ್ಕೆ ಧುಮುಕಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಇನ್ನಿಲ್ಲದ ಕಸರತ್ತಿಗೆ ಮುಂದಾಗಿದ್ದಾರೆ. ಸರ್ಕಾರ ಪತನಗೊಳ್ಳುವ ಭೀತಿಯಿಂದಾಗಿ ಬಂಡಾಯ ಕಾಂಗ್ರೆಸ್ಸಿಗರನ್ನು ಕರೆಸಿಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರೊಂದಿಗೆ ಗುರುತಿಸಿಕೊಂಡಿರುವ ಕಾಗವಾಡ ಶಾಸಕ ಶ್ರೀಮಂತ್‌ ಪಾಟೀಲ್‌ ಜತೆ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರೂ ಈ ಪ್ರಯತ್ನಕ್ಕೆ ಸಾಥ್‌ ನೀಡಿದ್ದಾರೆ.

ಗುರುವಾರ ತಮ್ಮ ಜೆ.ಪಿ.ನಗರದಲ್ಲಿನ ನಿವಾಸಕ್ಕೆ ಪರಮೇಶ್ವರ್‌ ಹಾಗೂ ಡಿಕೆಶಿ ಜೊತೆಗೆ ಬಂದ ಶ್ರೀಮಂತ್‌ ಪಾಟೀಲ್‌ ಅವರೊಂದಿಗೆ ಕೆಲಹೊತ್ತು ಸಮಾಲೋಚನೆ ನಡೆಸಿದ ಕುಮಾರಸ್ವಾಮಿ, ಶಾಸಕರ ಅಹವಾಲುಗಳನ್ನು ಆಲಿಸಿದರು. ಮಾತ್ರವಲ್ಲ, ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಹೆಚ್ಚಿನ ಅನುದಾನ ನೀಡುವ ಆಶ್ವಾಸನೆ ಸಹ ನೀಡಿದರು ಎನ್ನಲಾಗಿದೆ.

ಶ್ರೀಮಂತ್‌ ಪಾಟೀಲ್‌ ಸೇರಿದಂತೆ ಶಾಸಕರಾದ ಮಹೇಶ್‌ ಕುಮಟಳ್ಳಿ, ಬಿ.ನಾಗೇಂದ್ರ ಮತ್ತು ಭೀಮಾ ನಾಯ್ಕ ಸಹ ರಮೇಶ್‌ ಜಾರಕಿಹೊಳಿ ಜತೆಗೆ ಗುರುತಿಸಿಕೊಂಡಿದ್ದರು. ಆದರೆ ಅವರು ಬಿಜೆಪಿಗೆ ಹೋಗುವ ಬಗ್ಗೆ ಸ್ಪಷ್ಟವಾಗಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಎದುರಾಗಬಹುದಾದ ತಲೆಬಿಸಿ ದೂರವಾದಂತಾಗಿದೆ. ಆದರೂ ಯಾವುದೇ ಕ್ಷಣದಲ್ಲಿ ರಾಜಕೀಯದಲ್ಲಿ ಯಾವ ಬದಲಾವಣೆಯಾದರೂ ಅಚ್ಚರಿ ಇಲ್ಲ ಎಂಬುದನ್ನು ಅರಿತು ಅವರೊಂದಿಗೂ ಮಾತುಕತೆ ನಡೆಸುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಲೋಚನೆ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಪರಂ, ಡಿಕೆಶಿ ಜೊತೆ ಎಚ್‌ಡಿಕೆ ಚರ್ಚೆ:  ಈ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಕಳೆದ ಒಂದು ತಿಂಗಳಿನಿಂದ ಲೋಕಸಭೆ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಕಾಂಗ್ರೆಸ್‌ನಲ್ಲಿನ ಅತೃಪ್ತಿಯ ಕುರಿತು ಕುಮಾರಸ್ವಾಮಿ ಹೆಚ್ಚಿನ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಚುನಾವಣೆಯ ಬಿಸಿ ತಣ್ಣಗಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಅಸ್ಥಿರಗೊಳ್ಳದಂತೆ ಕಾರ್ಯತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದಾರೆ. ಕುಮಾರಸ್ವಾಮಿ ಕಾರ್ಯತಂತ್ರ ಎಷ್ಟು ಫಲಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

click me!