
ಬೆಂಗಳೂರು (ಡಿ.27): ಭೂಪಸಂದ್ರದ 6.34 ಎಕರೆ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಪ್ರಾಸಿಕ್ಯೂಷನ್ ನೀಡುವಂತೆ ಬಿಜೆಪಿ ರಾಜಭವನದ ಕದ ತಟ್ಟಿದ ಬೆನ್ನಲ್ಲೇ, ವಿವಾದಿತ ಭೂಮಿಯ ಮಾಲೀಕರು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ಆರ್‌ಎಂವಿ 2 ನೇ ಹಂತದ ಯೋಜನೆಯ ಕ್ರಮಬದ್ಧತೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ನಡೆಸಿದ ಹೋರಾಟದಿಂದ ನಮ್ಮಿಂದ ಸ್ವಾಧೀನಪಡಿಸಿಕೊಂಡಿದ್ದ ಭೂಮಿ ನಮಗೆ ವಾಪಸ್ ದೊರೆತಿದೆಯೇ ಹೊರತು ಡಿನೋಟಿಫಿಕೇಷನ್'ನಿಂದಲ್ಲ. ಮೇಲಾಗಿ ಇದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧ ಇಲ್ಲ. ಹಾಗಾಗಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಾರದು ಎಂದು ಭೂಮಿಯ ಮಾಲೀಕ ಕೃಷ್ಣಪ್ರಸಾದ್ ಮಂಗಳವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಪೂರಕ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದರು.
ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು, ಭೂಪಸಂದ್ರದಲ್ಲಿರುವ ನಮ್ಮ ಒಡೆತನದ ಸರ್ವೆ ನಂ.20 ಮತ್ತು 21 ರ ಒಟ್ಟು 6.36 ಎಕರೆ ಭೂಮಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿನೋಟಿಫಿಕೇಷನ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ಸುಳ್ಳು ಆರೋಪ ಎಂದು ಹೇಳಿದರು. ಆರ್‌ಎಂವಿ ಬಡಾವಣೆ 2 ನೇ ಹಂತದ ಯೋಜನೆಗಾಗಿ ಬಿಡಿಎ ಸ್ವಾಧೀನಡಿಸಿ ಕೊಂಡಿದ್ದ 133 ಎಕರೆ ಭೂಮಿಯಲ್ಲಿ ನಮ್ಮ ಒಡೆತನದ ಭೂಮಿಯೂ ಸೇರಿತ್ತು. ಆದರೆ, ಸ್ವಾಧೀನ ಪಡಿಸಿಕೊಂಡಿದ್ದ ಭೂಮಿಯಲ್ಲಿ ಬಿಡಿಎ ಅಭಿವೃದ್ಧಿಪಡಿಸಿದ್ದು ಕೇವಲ 23 ಎಕರೆ ಮಾತ್ರ. ಸ್ವಾಧೀನವಾದ ಭೂಮಿಯನ್ನು ನಿಗದಿತ ಅವಧಿಯಲ್ಲಿ ಉದ್ದೇಶಿತ ಯೋಜನೆಗೆ ಬಳಸಿಕೊಳ್ಳದಿದ್ದರೆ ವಾಪಸ್ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಈ ಆಧಾರದ ಮೇಲೆ ಯೋಜನೆ ಕ್ರಮ ಬದ್ಧತೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ಸುದೀರ್ಘ ಹೋರಾಟ ನಡೆಸಿದ್ದರಿಂದ ನಮ್ಮ ಪರ ತೀರ್ಪು ಬಂತು. ಹಾಗಾಗಿ ಬಿಡಿಎ ಭೂಮಿಯನ್ನು ನಮಗೆ ವಾಪಸ್ ನೀಡಿದೆಯಷ್ಟೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.