
ಬೆಂಗಳೂರು (ಸೆ.13): ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಿದ್ದಗಂಗಾ ಶ್ರೀಗಳು ಒಪ್ಪಿಗೆ ಸೂಚಿಸಿದ್ದಾರೆ ಅಂತ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಸಚಿವ ಎಂ ಬಿ ಪಾಟೀಲರ ನಡೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಿದ್ದಗಂಗಾ ಶ್ರೀಗಳು ಒಪ್ಪಿಗೆ ಸೂಚಿಸಿದ್ದಾರೆ ಅಂತ ಹೇಳಿದ ಬೆನ್ನಲ್ಲೇ ಸ್ವತಃ ಸಿದ್ದಗಂಗಾ ಶ್ರೀಗಳೇ ನನ್ನ ಹೇಳಿಕೆಯನ್ನ ಎಂ.ಬಿ. ಪಾಟೀಲ್ ತಿರುಚಿದ್ದಾರೆ ಅಂತ ಪತ್ರಿಕಾ ಹೇಳಿಕೆ ಹೊರಡಿಸಿರುವುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿವಾದದ ಕೇಂದ್ರ ಬಿಂದುವಾಗಿರುವ ಸಚಿವ ಎಂ.ಬಿ. ಪಾಟೀಲ್ ಸಿದ್ದಗಂಗಾ ಶ್ರೀಗಳ ಪತ್ರಿಕಾ ಹೇಳಿಕೆಯ ನಂತರ ಭಾರೀ ಮುಜುಗರ ಎದುರಿಸುತಿದ್ದಾರೆ. ಇದರ ಮುಂದುವರಿದ ಭಾಗ ಎಂಬಂತೆ ಸಚಿವ ಸಂಪುಟ ಸಭೆಗೆ ಆಗಮಿಸಿದ್ದ ಎಂ.ಬಿ. ಪಾಟೀಲ್ ನಡೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಿಎಂ ಗರಂ
ಸಿದ್ದಗಂಗಾ ಶ್ರೀಗಳ ಬಗ್ಗೆ ಮಾದ್ಯಮ ಹೇಳಿಕೆ ನೀಡಿದ್ದೇಕೆ ಅಂತ ಪ್ರಶ್ನಿಸಿರುವ ಸಿಎಂ ಸಿದ್ದರಾಮಯ್ಯ, ಎಂ.ಬಿ. ಪಾಟೀಲರ ಅವಸರದ ಸುದ್ಧಿಗೋಷ್ಟಿಯಿಂದಾಗಿ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಭಾರೀ ಧಕ್ಕೆಯಾಗಿದೆ ಎಂದಿದ್ದಾರೆ. ಇದೇ ವೇಳೆ ಎಂ.ಬಿ. ಪಾಟೀಲರ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆಗಳ ನೀಡಿರುವ ಈಶ್ವರ ಖಂಡ್ರೆ ವಿರುದ್ಧವೂ ಅಸಮಧಾನ ವ್ಯಕ್ತಪಡಿಸಿರುವ ಸಿಎಂ, ಇಬ್ಬರೂ ಕುಳಿತು ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಆಗುತ್ತಿರುವ ಧಕ್ಕೆ ನಿಯಂತ್ರಿಸುವಂತೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಸಚಿವ ಎಂ.ಬಿ. ಪಾಟೀಲರು ಮಾತ್ರ ಇದನ್ನು ನಿರಾಕರಿಸಿದ್ದು, ಅಂತಹ ಯಾವುದೇ ಚರ್ಚೆ ನಡೆದಿಲ್ಲ, ಸಿಎಂ ತಮಗೆ ಯಾವುದೇ ನಿರ್ದೇಶನ ನೀಡಿಲ್ಲ ಅಂತ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.