16ರ ಬಾಲಕಿ ಹೆಸರು ನೊಬೆಲ್ ಶಾಂತಿ ಪ್ರಶಸ್ತಿಗೆ!

By Web Desk  |  First Published Mar 18, 2019, 10:00 AM IST

16ರ ಬಾಲಕಿ ಹೆಸರು ನೊಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸು| ಹವಾಮಾನ ಬದಲಾವಣೆ ಬಗ್ಗೆ ಜಾಗೃತಿ| ಸ್ವೀಡನ್‌ ದೇಶದ ಬಾಲಕಿ ಗ್ರೇಟಾ ಸಾಧನೆ


ಕೋಪೆನ್‌ ಹೇಗನ್‌[ಮಾ.18]: ಹದಿನಾರರ ಹರೆಯದ ಪರಿಸರ ಹೋರಾಟಗಾರ್ತಿ, ಜಾಗತಿಕ ಹವಾಮಾನ ಬದಲಾವಣೆಯ ವಿರುದ್ಧ ಅಭಿಯಾನ ನಡೆಸುತ್ತಿರುವ ಸ್ವೀಡನ್‌ ದೇಶದ ಬಾಲಕಿ ಗ್ರೇಟಾ ತುಂಬರ್ಗ್‌ ಎಂಬಾಕೆಯ ಹೆಸರನ್ನು ಈ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ನಾರ್ವೆ ದೇಶದ ಸಂಸದರು ಆಕೆಯ ಸಾಧನೆಯನ್ನು ಗುರುತಿಸಿ ಅವಳ ಹೆಸರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಶಿಫಾರಸು ಮಾಡಿದ್ದಾರೆ.

2018ರ ಆಗಸ್ಟ್‌ನಲ್ಲಿ ಏಕಾಂಗಿಯಾಗಿ ಹೋರಾಟ ಪ್ರಾರಂಭಿಸಿದ ಗ್ರೇಟಾ ಇಂದು ಅನೇಕ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾಳೆ. ಕಳೆದ ವರ್ಷ ಸ್ವೀಡನ್‌ ಸಂಸತ್ತಿನ ಎದುರೇ ಮುಷ್ಕರ ನಡೆಸಿ ಸುದ್ದಿಯಾಗಿದ್ದ ಗ್ರೇಟಾ, ‘ಹವಾಮಾನಕ್ಕಾಗಿ ಶಾಲಾ ಮುಷ್ಕರ’ ಎಂಬ ಘೋಷಣೆ ಮೊಳಗಿಸಿದ್ದಳು.

Latest Videos

undefined

ಹವಾಮಾನ ಬದಲಾವಣೆಗೆ ಪರಿಹಾರೋಪಾಯ ಕಂಡುಹಿಡಿಯುವ ನಿಟ್ಟಿನಲ್ಲಿ ಶೀಘ್ರ ಕ್ರಮಕ್ಕೆ ಒತ್ತಾಯಿಸಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುವಂತೆ ವಿದ್ಯಾರ್ಥಿಗಳಿಗೆ ಗ್ರೇಟಾ ಕರೆ ನೀಡಿದ್ದಳು. ಸೈಕಲ್‌ ಮೂಲಕ ಸ್ವೀಡನ್‌ ಸಂಸತ್‌ ಭವನದತ್ತ ತೆರಳಿದ್ದ ಗ್ರೇಟಾಳ ಪ್ರತಿಭಟನೆ ವೈರಲ್‌ ಆಗಿತ್ತು.

ಈ ಬಾಲಕಿಯಿಂದ ಪ್ರೇರಣೆಯಿಂದಾಗಿ 105 ರಾಷ್ಟ್ರಗಳ 1600 ನಗರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಹವಾಮಾನ ವೈಪರೀತ್ಯ ತಡೆಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆಗಿಳಿದಿದ್ದರು.

ಪೋಲೆಂಡ್‌ ಹಾಗೂ ದಾವೋಸ್‌ನಲ್ಲಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಭಾಗವಹಿಸಿ ಗ್ರೇಟಾ ಭಾಷಣ ಮಾಡಿದ್ದಳು. ಇದರಿಂದ ಆಕೆಯ ಖ್ಯಾತಿ ವಿಶ್ವದಾದ್ಯಂತ ಪಸರಿಸಿತ್ತು.

2019ರ ನೊಬೆಲ್‌ ಶಾಂತಿ ಪುರಸ್ಕಾರಕ್ಕೆ 223 ವ್ಯಕ್ತಿಗಳು ಮತ್ತು 78 ಸಂಸ್ಥೆಗಳ ಹೆಸರನ್ನು ಶಿಫಾರಸು ಮಾಡಲಾಗಿದೆ. ಡಿಸೆಂಬರ್‌ನಲ್ಲಿ ನೊಬೆಲ್‌ ಶಾಂತಿ ಪುರಸ್ಕಾರ ಘೋಷಿಸಲಾಗುತ್ತದೆ.

click me!