ಗೋವಾ ಸರ್ಕಾರ ಉಳಿಯುತ್ತಾ : ಉರುಳುತ್ತಾ..?

Published : Mar 18, 2019, 09:08 AM IST
ಗೋವಾ ಸರ್ಕಾರ ಉಳಿಯುತ್ತಾ : ಉರುಳುತ್ತಾ..?

ಸಾರಾಂಶ

ಗೋವಾದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಕೇವಲ ‘ಮನೋಹರ್‌ ಪರ್ರಿಕರ್‌’ ಎಂಬ ‘ಫ್ಯಾಕ್ಟರ್‌’ ಮೇಲೆ ನಿಂತಿತ್ತು. ಇದೀಗ ಅವರ ನಿಧನದ ನಂತರ ರಾಜಕೀಯದಲ್ಲಿ ಅಸ್ಥಿರತೆ ಸೃಷ್ಟಿಯಾಗುವ ಲಕ್ಷಣಗಳು ಕಾಣುತ್ತಿವೆ. 

ಪಣಜಿ: ಗೋವಾದಲ್ಲಿ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ನಿಧನ ಹೊಂದುತ್ತಿದ್ದಂತೆಯೇ ರಾಜಕೀಯ ಅಸ್ಥಿರತೆ ತಲೆದೋರುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ಮುಖ್ಯಮಂತ್ರಿ ಬಗ್ಗೆ ಬಿಜೆಪಿ ಹಾಗೂ ಮಿತ್ರಪಕ್ಷಗಳಲ್ಲಿ ಕಚ್ಚಾಟ ತಲೆದೋರುವ ಸಂಭವವಿದೆ.

ಇಲ್ಲಿಯವರೆಗೆ ಗೋವಾದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಕೇವಲ ‘ಮನೋಹರ್‌ ಪರ್ರಿಕರ್‌’ ಎಂಬ ‘ಫ್ಯಾಕ್ಟರ್‌’ ಮೇಲೆ ನಿಂತಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಎದುರಾದಾಗ, ಕೇಂದ್ರ ಸಚಿವರಾಗಿದ್ದ ಪರ್ರಿಕರ್‌, ಅನಿವಾರ್ಯ ಪ್ರಸಂಗದಲ್ಲಿ ರಾಜ್ಯಕ್ಕೆ ಮರಳಿ ಮುಖ್ಯಮಂತ್ರಿಯಾಗಿದ್ದರು. ಪ್ರಮುಖ ಮಿತ್ರಪಕ್ಷ ಗೋವಾ ಫಾರ್ವರ್ಡ್‌ ಪಕ್ಷವು, ‘ಕೇವಲ ಮನೋಹರ್‌ ಪರ್ರಿಕರ್‌ ಅವರು ಮುಖ್ಯಮಂತ್ರಿ ಆಗಿರುವರೆಗೆ ನಮ್ಮ ಬೆಂಬಲ ಸರ್ಕಾರಕ್ಕೆ ಇರುತ್ತದೆ. ಆಮೇಲಿನದು ಹೇಳಲು ಆಗುವುದಿಲ್ಲ’ ಎಂದು ಷರತ್ತು ವಿಧಿಸಿತ್ತು. ಹೀಗಾಗಿ ಮೂವರು ಶಾಸಕರನ್ನು ಹೊಂದಿರುವ ಗೋವಾ ಫಾರ್ವರ್ಡ್‌ ಪಕ್ಷವು ಬೆಂಬಲ ಹಿಂತೆಗೆದುಕೊಂಡರೆ ಗತಿಯೇನು ಎಂಬ ಪ್ರಶ್ನೆ ಎದುರಾಗಿದೆ.

ಇದೇ ವೇಳೆ ಸರ್ಕಾರದ ಜತೆ ಅಷ್ಟೇನೂ ಸುಮಧುರ ಸಂಬಂಧ ಹೊಂದಿರದ ಇನ್ನೊಂದು ಮಿತ್ರಪಕ್ಷವಾದ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ಕೂಡ, ‘ಪರ್ರಿಕರ್‌’ ಎಂಬ ಕೊಂಡಿಯನ್ನು ಆಧರಿಸಿ ಸರ್ಕಾರದ ಜತೆಗೆ ನಿಂತುಕೊಂಡಿತ್ತು. ಪರ್ರಿಕರ್‌ ಎಂಬ ಆಯಸ್ಕಾಂತೀಯ ವ್ಯಕ್ತಿತ್ವವು ಉತ್ತರ ಧ್ರುವ-ದಕ್ಷಿಣ ಧ್ರುವದಂತಿದ್ದ ಪಕ್ಷಗಳನ್ನು ಸರ್ಕಾರದಲ್ಲಿ ಹಿಡಿದಿಟ್ಟುಕೊಂಡಿತ್ತು.

ಆದರೆ ಪರ್ರಿಕರ್‌ ಇಲ್ಲದ ಈ ಸಂದರ್ಭದಲ್ಲಿ ಸರ್ಕಾರವನ್ನು ಮುನ್ನಡೆಸುವ ಪರ್ರಿಕರ್‌ ಅವರಂಥ ಸಮರ್ಥ ನಾಯಕರ ಕೊರತೆ ರಾಜ್ಯ ಬಿಜೆಪಿಯಲ್ಲಿ ಎದ್ದು ಕಾಣುತ್ತಿದೆ. ಹೀಗಾಗಿ ಸರ್ಕಾರ ಉಳಿಯುತ್ತಾ? ಉರುಳುತ್ತಾ ಎಂಬ ಪ್ರಶ್ನೆ ಎದುರಾಗಿದೆ. ಅಲ್ಲದೆ, ಈಗಾಗಲೇ ಒಬ್ಬ ಶಾಸಕ ನಿಧನ ಹೊಂದಿದ ಕಾರಣ ಗೋವಾ ಸರ್ಕಾರ ಅಲ್ಪಮತಕ್ಕೆ ಇಳಿದಿದೆ ಎಂದು ಆರೋಪಿಸಿ, ಕಾಂಗ್ರೆಸ್‌ ಪಕ್ಷ ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದೆ. ಈಗ ಪರ್ರಿಕರ್‌ ಅವರ ನಿಧನದ ಕಾರಣ ಕಾಂಗ್ರೆಸ್‌ ವಾದಕ್ಕೆ ಮತ್ತಷ್ಟುಪ್ರಬಲ ಕಾರಣ ಸಿಗುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..