ಚಿಂಚೋಳಿ ಉಪಸಮರ: ಖರ್ಗೆ ರಣತಂತ್ರ, ಜಾಧವ್‌ ಕುಟುಂಬದಲ್ಲಿ ತಿಕ್ಕಾಟ

Published : Apr 27, 2019, 07:47 AM ISTUpdated : Apr 27, 2019, 07:48 AM IST
ಚಿಂಚೋಳಿ ಉಪಸಮರ: ಖರ್ಗೆ ರಣತಂತ್ರ, ಜಾಧವ್‌ ಕುಟುಂಬದಲ್ಲಿ ತಿಕ್ಕಾಟ

ಸಾರಾಂಶ

ಚಿಂಚೋಳಿ ಉಪಸಮರ: ಜಾಧವ್‌ ಕುಟುಂಬ ತಿಕ್ಕಾಟ| ಅಣ್ಣನ ಬದಲು ಪುತ್ರನ ಕಣಕ್ಕಿಳಿಸಲು ಉಮೇಶ್‌ ಲಾಬಿ| ಸೋದರ ರಾಮಚಂದ್ರಗೆ ಅತೃಪ್ತಿ| ಕಾಂಗ್ರೆಸ್‌ ಸೇರ್ತಾರಾ?| ಕಾಂಗ್ರೆಸ್‌ ಶಾಸಕತ್ವ ತೊರೆದು ಬಿಜೆಪಿ ಸೇರಿ ಲೋಕಸಭೆಗೆ ಡಾ| ಉಮೇಶ್‌ ಜಾಧವ್‌ ಸ್ಪರ್ಧೆ| ಅವರು ಪ್ರತಿನಿಧಿಸುತ್ತಿದ್ದ ಚಿಂಚೋಳಿಯಲ್ಲಿ ಬಿಜೆಪಿ ಅಭ್ಯರ್ಥಿ ಅಂತಿಮಕ್ಕಾಗಿ ಕಸರತ್ತು| ಸೋದರ ರಾಮಚಂದ್ರ ಬದಲು ಪುತ್ರ ಅವಿನಾಶ್‌ಗೆ ಟಿಕೆಟ್‌ ಕೊಡಿಸಲು ಉಮೇಶ್‌ ಲಾಬಿ| ಇದರಿಂದ ರಾಮಚಂದ್ರಗೆ ಬೇಸರ. ಟಿಕೆಟ್‌ ಸಿಗದಿದ್ದರೆ ಕಾಂಗ್ರೆಸ್‌ನತ್ತ ವಾಲುವ ಸಾಧ್ಯತೆ

ಬೆಂಗಳೂರು[ಏ.27]: ಶಾಸಕ ಸ್ಥಾನ ತೊರೆದು ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದಿರುವ ಡಾ.ಉಮೇಶ್‌ ಜಾಧವ್‌ ಅವರ ಕುಟುಂಬದಲ್ಲಿ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್‌ ವಿಚಾರ ಆಂತರಿಕವಾಗಿ ಬಿರುಗಾಳಿಯನ್ನೇ ಸೃಷ್ಟಿಸುವ ಸಾಧ್ಯತೆಯಿದೆ.

ಮೇ 19ರಂದು ನಡೆಯುವ ಉಪಚುನಾವಣೆಗೆ ಉಮೇಶ್‌ ಜಾಧವ್‌ ಅವರು ತಮ್ಮ ಅಣ್ಣ ರಾಮಚಂದ್ರ ಜಾಧವ್‌ ಬದಲು ಪುತ್ರ ಡಾ.ಅವಿನಾಶ್‌ ಜಾಧವ್‌ ಅವರಿಗೆ ಟಿಕೆಟ್‌ ನೀಡಲು ಒತ್ತಡ ಹೇರಿದ್ದು, ಇದಕ್ಕೆ ರಾಜ್ಯ ಬಿಜೆಪಿ ನಾಯಕರು ಅನಿವಾರ್ಯವಾಗಿ ಅಸ್ತು ಎಂದಿದ್ದಾರೆ.

ಇದೀಗ ಅವಿನಾಶ್‌ ಜಾಧವ್‌ ಅವರಿಗೆ ಟಿಕೆಟ್‌ ನೀಡುವಂತೆ ಪಕ್ಷದ ರಾಜ್ಯ ಘಟಕದಿಂದ ರಾಷ್ಟ್ರೀಯ ಘಟಕಕ್ಕೆ ಶಿಫಾರಸು ಮಾಡಲಾಗಿದ್ದು, ಇದರ ಬೆನ್ನಲ್ಲೇ ರಾಮಚಂದ್ರ ಜಾಧವ್‌ ಅವರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಖರ್ಗೆ ತಂತ್ರಗಾರಿಕೆ:

ಈ ಅಸಮಾಧಾನದ ಲಾಭ ಪಡೆದುಕೊಳ್ಳಲು ಕಾಂಗ್ರೆಸ್‌ ಮುಂದಾಗಿದ್ದು, ಅದೇ ಕ್ಷೇತ್ರದ ಟಿಕೆಟ್‌ ನೀಡುವ ಆಮಿಷವೊಡ್ಡುತ್ತಿದೆ. ಉಮೇಶ್‌ ಜಾಧವ್‌ ಅವರ ನಡೆಯಿಂದ ಬೇಸರಗೊಂಡಿದ್ದ ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಅವರು ಈ ನಿಟ್ಟಿನಲ್ಲಿ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ತಮ್ಮ ವಿರುದ್ಧ ಧ್ವನಿ ಎತ್ತಿ ಹೊರ ಹೋಗಿರುವ ಉಮೇಶ್‌ ಜಾಧವ್‌ ಅವರಿಗೆ ಹೇಗಾದರೂ ಮಾಡಿ ಪಾಠ ಕಲಿಸಬೇಕು ಎಂದು ಹವಣಿಸುತ್ತಿದ್ದಾರೆ.

ಉಮೇಶ್‌ ಜಾಧವ್‌ ಅವರು ಎರಡು ಬಾರಿ ಶಾಸಕರಾಗುವುದಕ್ಕೆ ಸಹೋದರ ರಾಮಚಂದ್ರ ಜಾಧವ್‌ ಅವರ ಪಾತ್ರವೂ ದೊಡ್ಡದಾಗಿದೆ. ಕ್ಷೇತ್ರದ ಕಾರ್ಯಕರ್ತರು ಹಾಗೂ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರಾಮಚಂದ್ರ ಅವರು ಸಹಜವಾಗಿಯೇ ಈಗ ತಮಗೇ ಟಿಕೆಟ್‌ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಇದೀಗ ಒಂದು ವೇಳೆ ರಾಮಚಂದ್ರ ಜಾಧವ್‌ ಅವರು ಕಾಂಗ್ರೆಸ್‌ಗೆ ವಲಸೆ ಹೋಗಿ ಕಣಕ್ಕಿಳಿದಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಅವಿನಾಶ್‌ ಜಾಧವ್‌ ಅವರಿಗೆ ಪ್ರಬಲ ಪೈಪೋಟಿ ಏರ್ಪಡಬಹುದು ಎನ್ನಲಾಗಿದೆ.

ಬಿಎಸ್‌ವೈ ಭೇಟಿ ಮಾಡಿದ ಜಾಧವ್‌:

ಗುರುವಾರ ನಡೆದ ರಾಜ್ಯ ಬಿಜೆಪಿಯ ಕೋರ್‌ ಕಮಿಟಿ ಸಭೆಯಲ್ಲಿ ರಾಮಚಂದ್ರ ಜಾಧವ್‌ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಅದರ ಬೆನ್ನಲ್ಲೇ ಶುಕ್ರವಾರ ಬೆಳಗ್ಗೆ ಉಮೇಶ್‌ ಜಾಧವ್‌ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನಿವಾಸಕ್ಕೆ ತೆರಳಿ ಅಣ್ಣನ ಬದಲು ತಮ್ಮ ಪುತ್ರನಿಗೆ ಟಿಕೆಟ್‌ ನೀಡುವಂತೆ ದುಂಬಾಲು ಬಿದ್ದರು. ಕಾಂಗ್ರೆಸ್‌ ಪಕ್ಷ ಸಚಿವ ಸ್ಥಾನದ ಆಮಿಷ ಒಡ್ಡಿದರೂ ಅದನ್ನು ಲೆಕ್ಕಿಸದೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದೇನೆ. ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಬಲ ಸ್ಪರ್ಧೆಯನ್ನೂ ನೀಡಿದ್ದೇನೆ. ಗೆದ್ದರೆ ಸರಿ. ಒಂದು ವೇಳೆ ಸೋತರೆ ನನಗೆ ಏನು ಸಿಕ್ಕಂತಾಗುತ್ತದೆ? ಈಗ ನನ್ನ ಮಗನಿಗೆ ಟಿಕೆಟ್‌ ಕೊಟ್ಟರೆ ನಾನು ಬಿಜೆಪಿಗೆ ವಲಸೆ ಬಂದಿದ್ದಕ್ಕೂ ಸಾರ್ಥಕವಾಗುತ್ತದೆ. ಸಹೋದರನಿಗೆ ಟಿಕೆಟ್‌ ನೀಡುವುದು ಬೇಡ ಎಂಬ ಮಾತನ್ನು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಹುಶಃ ಶನಿವಾರ ಅಭ್ಯರ್ಥಿಗಳ ಹೆಸರು ರಾಷ್ಟ್ರೀಯ ಬಿಜೆಪಿಯಿಂದ ಅಧಿಕೃತವಾಗಿ ಪ್ರಕಟಗೊಳ್ಳುವ ಸಾಧ್ಯತೆಯಿದೆ. ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು