
ಬೆಂಗಳೂರು : ನಗರದ ಶ್ವಾನ ಪ್ರಿಯರು ಮತ್ತು ಪ್ರಾಣಿ ದಯಾಸಂಘಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ‘ಸಾಕು ನಾಯಿ ಕಡ್ಡಾಯ ಪರವಾನಗಿ’ಗೆ ಹೊಸ ನಿಯಮ ರೂಪಿಸಲು ಬಿಬಿಎಂಪಿ ಮುಂದಾಗಿದೆ.
ನಗರದಲ್ಲಿರುವ ಸಾಕು ನಾಯಿಗಳ ನಿಖರವಾದ ಮಾಹಿತಿ ಹಾಗೂ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸಿರುವ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಸಾಕು ನಾಯಿಗಳಿಗೆ ಪರವಾನಗಿ ಕಡ್ಡಾಯಗೊಳಿಸಿ ಕಳೆದ ವರ್ಷ ಬಿಬಿಎಂಪಿ ಶಿಫಾರಸಿನ ಮೇರೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿತ್ತು. ಆದರೆ, ಪ್ರಾಣಿ ದಯಾ ಸಂಘಗಳು ಹಾಗೂ ಪ್ರಾಣಿ ಪ್ರಿಯರಿಂದ ತೀವ್ರ ವಿರೋಧ ವ್ಯಕ್ತವಾಗುವುದರ ಜತೆಗೆ, ಕೆಲವರು ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಆದೇಶ ಹಿಂಪಡೆಯಲಾಗಿತ್ತು.
ಇದೀಗ ಬಿಬಿಎಂಪಿ ಪಶುಪಾಲನಾ ವಿಭಾಗ ಪ್ರಾಣಿ ದಯಾಸಂಘಗಳು, ಶ್ವಾನ ಪ್ರಿಯರು ಮತ್ತು ಸಾರ್ವಜನಿಕರೊಂದಿಗೆ ಚರ್ಚಿಸಿ ಹೊಸದಾಗಿ ನಿಯಮಾವಳಿ ರೂಪಿಸಲು ಮುಂದಾಗಿದೆ.
ವಿರೋಧಕ್ಕೆ ಕಾರಣವಾದ ನಿಯಮಗಳು:
ಈ ಹಿಂದೆ ಬಿಬಿಎಂಪಿ ಹೊರಡಿಸಿದ್ದ ಆದೇಶಕ್ಕೆ ಭಾರೀ ವಿರೋಧಕ್ಕೆ ಕಾರಣವಾದ ಪ್ರಮುಖ ನಿಯಮಗಳೆಂದರೆ, ಫ್ಲ್ಯಾಟ್‌ಗಳಲ್ಲಿ ವಾಸಿಸುವವರು ಒಂದು ನಾಯಿ ಹಾಗೂ ಮನೆಗಳಲ್ಲಿರುವವರು ಗರಿಷ್ಠ ಮೂರು ನಾಯಿ ಸಾಕಲು ಅವಕಾಶ ನೀಡಲಾಗಿತ್ತು. ಹೆಚ್ಚು ಸಂಖ್ಯೆಯ ನಾಯಿ ಸಾಕಿದರೆ ಪಾಲಿಕೆಯಿಂದ ನೋಟಿಸ್ ಜಾರಿ ಮಾಡಲಾಗುವುದು. ನೋಟಿಸ್‌ಗೆ ಉತ್ತರ ನೀಡದಿದ್ದ ಪಕ್ಷದಲ್ಲಿ ಮಾಲೀಕರಿಗೆ ಭಾರಿ ದಂಡ ಹಾಕಲಾಗುವುದು. ಪ್ರತಿ ನಾಯಿಗೆ ವಾರ್ಷಿಕ ಪಾಲಿಕೆಗೆ ಕಡ್ಡಾಯವಾಗಿ .110 ಪರವಾನಗಿ ಶುಲ್ಕ ಪಾವತಿಸಬೇಕು.
ತಪ್ಪದೆ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿಸಬೇಕು. ಈ ನಿಯಮ ಉಲ್ಲಂಘಿಸಿದವರಿಗೆ .1 ಸಾವಿರ ದಂಡ ಸೇರಿದಂತೆ ಹಲವಾರು ಷರತ್ತುಗಳನ್ನು ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಾಣಿ ದಯಾಸಂಘಟನೆಗಳು ಮತ್ತು ಶ್ವಾನ ಪ್ರಿಯರು ಆದೇಶದ ವಿರುದ್ಧ ತೀವ್ರಆಕ್ರೋಶಕ್ಕೆ ವ್ಯಕ್ತಪಡಿಸಿದ್ದರು. ಕೂಡಲೇ ಆದೇಶವನ್ನು ಬಿಬಿಎಂಪಿ ವಾಪಾಸ್ ಪಡೆದಿತ್ತು. ಇದೀಗ ಮತ್ತೆ ಹೊಸ ನಿಯಮ ರೂಪಿಸಲು ಮುಂದಾಗಿದೆ.
ಕೌನ್ಸಿಲ್ ಸಭೆಯಲ್ಲಿ ಮಂಡನೆ
ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ಆಯುಕ್ತ ಡಾ.ಆನಂದ್, ಸಾಕು ನಾಯಿಗಳಿಗೆ ಪರವಾನಗಿ ಕಡ್ಡಾಯಗೊಳಿಸುವ ಕಡತ ಸರ್ಕಾರದಿಂದ ವಾಪಸ್ ಬಂದಿದ್ದು, ಪ್ರಾಣಿ ಪ್ರಿಯರು ಹಾಗೂ ಸಂಘದ ಸದಸ್ಯರೊಂದಿಗೆ ಚರ್ಚಿಸಿ ನಿಯಮ ರೂಪಿಸಿ ಬಳಿಕ ಕೌನ್ಸಿಲ್ ಸಭೆಯಲ್ಲಿ ಮಂಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.