ಚೀನಾಕ್ಕೆ ಹೋಲಿಸಿದರೆ ಭಾರತ ಬಚ್ಚಾ; ಮಾತು ಕೇಳದಿದ್ದರೆ ಬೀಳುತ್ತೆ ದೊಣ್ಣೆಪೆಟ್ಟು; ಯುದ್ಧದ ಎಚ್ಚರಿಕೆ ನೀಡಿದ ಚೀನೀ ತಜ್ಞರು

By Suvarna Web DeskFirst Published Jul 4, 2017, 5:17 PM IST
Highlights

ಭಾರತವು ಚೀನಾವನ್ನು ತನ್ನ ಅತೀದೊಡ್ಡ ಪ್ರತಿಸ್ಪರ್ಧಿ ಅಥವಾ ಶತ್ರು ಎಂದು ಭಾವಿಸಿದ್ದರೂ, ಚೀನಾಗೆ ಭಾರತ ಯಾವ ಲೆಕ್ಕವೂ ಇಲ್ಲ ಎಂದು ಹು ಝಿಯೋಂಗ್ ಹಾಗೂ ಸೇನಾ ತಜ್ಞ ಸೋಂಗ್ ಝೋಂಗ್'ಪಿಂಗ್ ಅಭಿಪ್ರಾಯಪಡುತ್ತಾರೆ.

ಬೀಜಿಂಗ್(ಜುಲೈ 04): ಸಿಕ್ಕಿಂ ಗಡಿ ವಿವಾದದಲ್ಲಿ ಚೀನಾದ ಮಾತು ಕೇಳದಿದ್ದರೆ ಭಾರತಕ್ಕೆ ತಕ್ಕ ಶಾಸ್ತಿಯಾಗುತ್ತದೆ ಎಂದು ಚೀನೀ ಮಾಧ್ಯಮಗಳು ಹಾಗೂ ಚಿಂತಕರು ಎಚ್ಚರಿಸಿದ್ದಾರೆ. ದೋಕ್ಲಾಮ್ ಸೆಕ್ಟರ್'ನಲ್ಲಿ ಭಾರತ ಮತ್ತು ಚೀನಾ ಮಧ್ಯೆ ಉದ್ಭವಿಸಿರುವ ಬಿಕ್ಕಟ್ಟನ್ನು ಸರಿಯಾಗಿ ನಿರ್ವಹಿಸದೇ ಹೋದಲ್ಲಿ ಯುದ್ಧದ ಸಾಧ್ಯತೆ ಬಹಳಷ್ಟಿದೆ ಎಂದು ಚೀನೀ ತಜ್ಞರು ವಿಶ್ಲೇಷಿಸಿದ್ದಾರೆ.

ಈ ತಜ್ಞರ ಪ್ರಕಾರ, ಚೀನಾವು ಭಾರತಕ್ಕೆ ಮಕ್ಕಳಿಗೆ ಹೇಳಿದಂತೆ ಬುದ್ಧಿಮಾತು ಹೇಳುತ್ತಿದೆಯಂತೆ... ಚೀನಾಗೆ ಹೋಲಿಸಿದರೆ ಭಾರತ ಇನ್ನೂ ಬಚ್ಚಾ ಅಂತೆ... 1962ರಲ್ಲಿ ಭಾರತ ಮತ್ತು ಚೀನಾ ನಡುವೆ ಇದ್ದ ಶಕ್ತಿಯ ಅಂತರ ಈಗ ಇನ್ನೂ ಹೆಚ್ಚಾಗಿದೆಯಂತೆ.

"ಐತಿಹಾಸಿಕ ಪಾಠಗಳನ್ನು ಉಲ್ಲೇಖಿಸಿ ಭಾರತಕ್ಕೆ ತಿಳಿಹೇಳಲು ಚೀನಾ ಪ್ರಯತ್ನಿಸುತ್ತಿದೆ. ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಚೀನಾ ಪ್ರಾಮಾಣಿಕವಾಗಿದೆ. ಆದರೆ, ಭಾರತ ಇದನ್ನು ಕೇಳದೇ ಹೋದರೆ ಸಮಸ್ಯೆ ಬಗೆಹರಿಸಲು ಚೀನಾ ಯುದ್ಧ ಮಾಡಲೇಬೇಕಾಗುತ್ತದೆ," ಎಂದು ಶಾಂಘೈ ಅಕಾಡೆಮಿ ಆಫ್ ಸೋಷಿಯಲ್ ಸೈನ್ಸಸ್ ಸಂಸ್ಥೆಯ ರಿಸರ್ಚ್ ಫೆಲೋ ಹು ಝಿಯೋಂಗ್ ಅಭಿಪ್ರಾಯಪಟ್ಟಿದ್ದಾರೆ.

ಟ್ರಂಪ್ ಜಾಣ:
ಭಾರತದ ವಿಚಾರದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿರುವ ಅಭಿಪ್ರಾಯದಲ್ಲಿನ ವ್ಯತ್ಯಾಸದ ಕುರಿತು ಹು ಝಿಯೋಂಗ್ ತಮ್ಮದೇ ವಿಶ್ಲೇಷಣೆ ಮಾಡಿದ್ದಾರೆ.

"ಭಾರತ ಮತ್ತು ಅಮೆರಿಕ ದೇಶಗಳು ಒಂದೇ ರೀತಿಯ ಮೌಲ್ಯ ಹೊಂದಿರುವುದರಿಂದ ಒಬಾಮಾ ಅವರು ಭಾರತಕ್ಕೆ ಬೆಲೆ ಕೊಡುತ್ತಾರೆ. ಆದರೆ, ಡೊನಾಲ್ಡ್ ಟ್ರಂಪ್ ಬುದ್ಧಿವಂತ. ಚೀನಾದ ಎದುರು ಭಾರತ ತೀರಾ ದುರ್ಬಲವಾಗಿರುವುದರಿಂದ ಭಾರತವನ್ನು ಅಮೆರಿಕದ ಪ್ರಮುಖ ಮಿತ್ರನೆಂದು ಟ್ರಂಪ್ ಪರಿಗಣಿಸುವುದಿಲ್ಲ," ಎಂದವರು ಹೇಳಿದ್ದಾರೆ.

ಭಾರತ ಸಾಟಿ ಇಲ್ಲ:
ಭಾರತವು ಚೀನಾವನ್ನು ತನ್ನ ಅತೀದೊಡ್ಡ ಪ್ರತಿಸ್ಪರ್ಧಿ ಅಥವಾ ಶತ್ರು ಎಂದು ಭಾವಿಸಿದ್ದರೂ, ಚೀನಾಗೆ ಭಾರತ ಯಾವ ಲೆಕ್ಕವೂ ಇಲ್ಲ ಎಂದು ಹು ಝಿಯೋಂಗ್ ಹಾಗೂ ಸೇನಾ ತಜ್ಞ ಸೋಂಗ್ ಝೋಂಗ್'ಪಿಂಗ್ ಅಭಿಪ್ರಾಯಪಡುತ್ತಾರೆ. 1962ರ ಭಾರತಕ್ಕೂ 2017ರ ಭಾರತಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ನೀಡಿದ ಹೇಳಿಕೆಯನ್ನು ಚೀನೀಯರು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ ಎಂದು ಇವರು ಹೇಳುತ್ತಾರೆ. ಕೆಣಕಿ ಮೈ ಸುಟ್ಟುಕೊಳ್ಳುವುದದನ್ನು ಬಿಟ್ಟು ಭಾರತ ಬಾಯಿ ಮುಚ್ಚಿಕೊಂಡಿರುವುದು ಒಳಿತು ಎಂದು ಇವರು ಎಚ್ಚರಿಸಿದ್ದಾರೆ.

"1962ರಲ್ಲಿ ಭಾರತ ಮತ್ತು ಚೀನಾ ನಡುವೆ ಇದ್ದ ಮಿಲಿಟರಿ ವ್ಯತ್ಯಾಸ ಈಗ ಇನ್ನೂ ಬೃಹತ್ತಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸುಮ್ಮನಿದ್ದು ಬಿಟ್ಟರೆ ಅದಕ್ಕೇ ಒಳ್ಳೆಯದು," ಎಂದು ಹೂ ಝಿಯೋಂಗ್ ಕಿವಿಮಾತು ಹೇಳುತ್ತಾರೆ.

click me!