ಚೀನಾದಿಂದ ಗಡಿಯೊಳಗೆ ನುಗ್ಗುವ ಬೆದರಿಕೆ

By Suvarma Web DeskFirst Published Aug 23, 2017, 2:30 PM IST
Highlights

ಡೋಕ್ಲಾಮ್‌'ನಲ್ಲಿ ತನ್ನ ರಸ್ತೆ ನಿರ್ಮಾಣ ಯೋಜನೆ ತನಗೆ ಬೆದರಿಕೆ ಎಂಬಂತೆ ಭಾರತ ವಾದಿಸುತ್ತಿರುವುದು ಹಾಸ್ಯಾಸ್ಪದ ಮತ್ತು ದುರುದ್ದೇಶಪೂರಿತವಾದುದು ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಡೋಕ್ಲಾಂ(ಆ.23): ಡೋಕ್ಲಾಂನಲ್ಲಿ ಸೃಷ್ಟಿಯಾಗಿರುವ ಸೇನಾ ಬಿಕ್ಕಟ್ಟಿಗೆ ಸಂಬಂಧಿಸಿ, ಪದೇಪದೇ ಉದ್ರೇಕಕಾರಿ ಹೇಳಿಕೆ ನೀಡುತ್ತಾ ಬಂದಿರುವ ಚೀನಾ, ಇದೀಗ ಭಾರತದ ಗಡಿಯೊಳಗೆ ನುಗ್ಗುವ ಗಂಭೀರ ಬೆದರಿಕೆಯೊಡ್ಡಿದೆ.

ಗಡಿಯಲ್ಲಿನ ಬಿಕ್ಕಟ್ಟು ಬೀಜಿಂಗ್‌'ಗೆ ಬೆದರಿಕೆ ಎಂಬುದಾಗಿ ಪರಿಗಣಿಸಿ, ತಮ್ಮ ಸೇನೆ ಭಾರತದೊಳಗೆ ಪ್ರವೇಶಿಸಿದರೆ ಸಂಪೂರ್ಣ ಅಲ್ಲೋಲಕಲ್ಲೋಲವಾಗಲಿದೆ ಎಂದು ಚೀನಾ ಎಚ್ಚರಿಸಿದೆ. ಡೋಕ್ಲಾಮ್‌'ನಲ್ಲಿ ತನ್ನ ರಸ್ತೆ ನಿರ್ಮಾಣ ಯೋಜನೆ ತನಗೆ ಬೆದರಿಕೆ ಎಂಬಂತೆ ಭಾರತ ವಾದಿಸುತ್ತಿರುವುದು ಹಾಸ್ಯಾಸ್ಪದ ಮತ್ತು ದುರುದ್ದೇಶಪೂರಿತವಾದುದು ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ. ತಮ್ಮ ಭೂ ವ್ಯಾಪ್ತಿಯ ಪರಮಾಧಿಕಾರದ ಮೇಲೆ ಯಾವುದೇ ದೇಶ ಅಥವಾ ವ್ಯಕ್ತಿ ಅತಿಕ್ರಮಣ ನಡೆಸುವುದಕ್ಕೆ ಚೀನಾ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಚೀನಾ ಎಚ್ಚರಿಕೆ ನೀಡಿದೆ.

ಭಾರತದ ಗಡಿ ಪ್ರದೇಶದಲ್ಲಿ, ಬೃಹತ್ ಪ್ರಮಾಣದ ಮೂಲಭೂತ ಸೌಕರ್ಯ ನಿರ್ಮಾಣಗೊಳ್ಳುವಾಗ, ಅದೊಂದು ಬೆದರಿಕೆ ಎಂದು ಭಾವಿಸಿ, ಚೀನಾ ಭಾರತದ ಗಡಿಪ್ರವೇಶಿಸಬಹುದೇ? ಅದು ಸಂಪೂರ್ಣ ಅಸ್ತವ್ಯಸ್ತಕ್ಕೆ ಕಾರಣವಾಗುವುದಿಲ್ಲವೇ? ಎಂದು ಚೀನಾ ಪ್ರಶ್ನಿಸಿದೆ. ಭೂತಾನ್-ಚೀನಾ ಗಡಿ ಪ್ರದೇಶದ ಸಿಕ್ಕಿಂ ವಲಯದ ಡೋಕ್ಲಾಂನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಕೆಲವು ದಿನಗಳಿಂದ ಉದ್ವಿಘ್ನ ವಾತಾವರಣವಿದೆ.

click me!