
ನವದೆಹಲಿ(ಜುಲೈ 06): ಭೂತಾನ್ ಗಡಿ ವಿಚಾರದಲ್ಲಿ ಭಾರತ ಮತ್ತು ಚೀನೀ ಸೈನಿಕರ ನಡುವೆ ನಡೆಯುತ್ತಿರುವ ಸಂಘರ್ಷವು ಎರಡೂ ದೇಶಗಳ ನಾಯಕರ ಮುಖಾಮುಖಿಯ ಮೇಲೆ ಪರಿಣಾಮ ಬೀರಿದೆ. ಕೆಲವಾರು ದಿನಗಳಿಂದ ಭಾರತದ ಮೇಲೆ ಯುದ್ಧದ ಬೆದರಿಕೆ ಹಾಕುತ್ತಾ ಬಂದಿರುವ ಚೀನಾ ದೇಶವು ಈಗ ಭಾರತದ ಪ್ರಧಾನಿಯನ್ನ ಮುಖತಃ ಭೇಟಿಯಾಗಲು ನಿರಾಕರಿಸುತ್ತಿದೆ. ಜರ್ಮನಿಯ ಹ್ಯಾಂಬರ್ಗ್'ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸೀ ಜಿನ್'ಪಿಂಗ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗುವ ಸಾಧ್ಯತೆ ಇಲ್ಲವಾಗಿದೆ. ಪೂರಕ ವಾತಾವರಣ ಇಲ್ಲದಿರುವ ಹಿನ್ನೆಲೆಯಲ್ಲಿ ಎರಡೂ ದೇಶಗಳ ಮುಖಂಡರ ಭೇಟಿ ಸಾಧ್ಯವಾಗುವುದಿಲ್ಲ ಎಂದು ಚೀನಾ ಹೇಳಿದೆ. ಈ ಸಭೆಯಲ್ಲಿ ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವ ನಿರೀಕ್ಷೆ ಇತ್ತು. ಆದರೆ, ಕ್ಸೀ ಜಿನ್'ಪಿಂಗ್ ಮತ್ತು ನರೇಂದ್ರ ಮೋದಿ ಮಧ್ಯೆ ಅನೌಪಚಾರಿಕ ಭೇಟಿ ನಡೆಯುತ್ತಾ? ಅಥವಾ ಮುಗುಳ್ನಗೆಗೆ ಸೀಮಿತವಾಗುತ್ತಾ? ಎಂಬುದು ಗೊತ್ತಿಲ್ಲ. ಮೋದಿ ಇಂದು ಗುರುವಾರ ರಾತ್ರಿ ಇಸ್ರೇಲ್ ಪ್ರವಾಸ ಮುಗಿಸಿ ಜರ್ಮನಿಯನ್ನ ತಲುಪಲಿದ್ದಾರೆ.
ಹ್ಯಾಂಬರ್ಗ್'ನಲ್ಲಿ ಜಿ20 ಸಭೆಯ ಬಳಿಕ ಬ್ರಿಕ್ಸ್(BRICS) ರಾಷ್ಟ್ರಗಳ ನಡುವೆ ಪುಟ್ಟ ಸಭೆ ನಡೆಯುವ ನಿರೀಕ್ಷೆ ಇದೆ. ಪ್ರಮುಖ ಅಭಿವೃದ್ಧಿಶೀಲ ರಾಷ್ಟ್ರಗಳೆನಿಸಿರುವ ಬ್ರೆಜಿಲ್, ರಷ್ಯಾ, ಚೀನಾ, ಭಾರತ ಮತ್ತು ದಕ್ಷಿಣ ಆಫ್ರಿಕಾ ಅವರಿರುವ ಬ್ರಿಕ್ಸ್ ಗುಂಪಿನ ಈ ಸಭೆಯೂ ಕೂಡ ಪ್ರಮುಖವಾದುದು. ಇಲ್ಲಿಯೂ ಭಾರತ ಮತ್ತು ಚೀನಾ ದೇಶಗಳು ದ್ವಿಪಕ್ಷೀಯ ಮಾತುಕತೆ ನಡೆಸುವ ಅವಕಾಶವಿತ್ತು. ಆದರೆ, ಡೋಕ್ಲಾಮ್ ಸೆಕ್ಟರ್'ನಿಂದ ಭಾರತೀಯ ಸೇನೆ ಕಾಲ್ತೆಗೆಯುವವರೆಗೂ ಭಾರತದೊಂದಿಗೆ ಯಾವುದೇ ಮಾತುಕತೆ ಇಲ್ಲ ಎಂದು ಚೀನಾ ಪಟ್ಟುಹಿಡಿದಿದೆ. ಡೋಕ್ಲಾಮ್ ಭೂತಾನ್ ದೇಶಕ್ಕೆ ಸೇರಿದ್ದಾದ್ದರಿಂದ ಚೀನಾದವರು ಅಲ್ಲಿಂತ ವಾಪಸ್ ಹೋಗಬೇಕೆಂಬುದು ಭೂತಾನ್ ಮತ್ತು ಭಾರತದ ಒತ್ತಾಯವಾಗಿದೆ. ಡೋಕ್ಲಾಮ್ ಸೆಕ್ಟರ್ ಸಮೀಪದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಚೀನಾ ಮತ್ತು ಭಾರತದ ಸೇನೆಗಳು ಎದುರುಬದುರಾಗಿ ಯುದ್ಧಕ್ಕೆ ಸನ್ನದ್ಧವಾಗಿ ನಿಂತಿವೆ. ಸ್ವಲ್ಪ ಯಡವಟ್ಟಾದರೂ ಯಾವ ಕ್ಷಣದಲ್ಲಾದರೂ ಯುದ್ಧ ಸಂಭವಿಸುವಂತಹ ಅಪಾಯದ ಸ್ಥಿತಿ ಅಲ್ಲಿ ನಿರ್ಮಾಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.