ವಂಚನೆ ಪ್ರಕರಣ: ಎಂಇಪಿ ಸಂಸ್ಥಾಪಕಿ ನೌಹೀರಾ ಬಂಧನ

By Web DeskFirst Published Mar 30, 2019, 8:40 AM IST
Highlights

ವಂಚನೆ ಪ್ರಕರಣಗಳಲ್ಲಿ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ (ಎಂಇಪಿ) ಸಂಸ್ಥಾಪಕ ಅಧ್ಯಕ್ಷೆ ನೌಹೇರಾ ಶೇಖ್‌ ಅವರನ್ನು ಬಂಧಿಸಲಾಗಿದೆ.

ಬೆಂಗಳೂರು :  ವಂಚನೆ ಪ್ರಕರಣಗಳಲ್ಲಿ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ (ಎಂಇಪಿ) ಸಂಸ್ಥಾಪಕ ಅಧ್ಯಕ್ಷೆ ನೌಹೇರಾ ಶೇಖ್‌ ಅವರನ್ನು ನಗರದ ಭಾರತೀನಗರ ಪೊಲೀಸರು 10 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ.

ಹೈದ್ರಾಬಾದ್‌ನಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಕಳೆದ ವರ್ಷ ಬಂಧಿತರಾಗಿದ್ದ ನೌಹೇರಾ ನ್ಯಾಯಾಂಗ ಬಂಧನದಲ್ಲಿದ್ದರು. ತಮ್ಮ ಪ್ರಕರಣದಲ್ಲಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಭಾರತೀನಗರ ಪೊಲೀಸರು ಹೈದ್ರಾಬಾದ್‌ ಕೋರ್ಟ್‌ಗೆ ಬಾಡಿ ವಾರೆಂಟ್‌ ಅರ್ಜಿ ಹಾಕಿದ್ದರು. ಕೋರ್ಟ್‌ ಅನುಮತಿ ಮೇರೆಗೆ ಇದೀಗ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೀರಾ ಗ್ರೂಪ್‌ ಆಫ್‌ ಕಂಪನೀಸ್‌ನ ಸಿಇಒ ಆಗಿರುವ ನೌಹೇರಾ ಶೇಖ್‌ ಹೈದ್ರಾಬಾದ್‌ನಲ್ಲಿ ಕೇಂದ್ರ ಕಚೇರಿ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಕೂಡ ತಮ್ಮ ಕಚೇರಿ ಹೊಂದಿದ್ದರು. ಜೇಬಾ ತಬಸ್ಸುಮ್‌ ಎಂಬುವರನ್ನು ಪರಿಚಯಿಸಿಕೊಂಡಿದ್ದ ನೌಹೇರಾ ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಬರಲಿದೆ ಎಂದು ಹೇಳಿ ನಂಬಿಸಿದ್ದರು. ನೌಹೇರಾ ಮಾತು ನಂಬಿದ ತಬಸ್ಸುಮ್‌ ಹಾಗೂ ತಮ್ಮ ಹೆಣ್ಣುಮಕ್ಕಳು ಕಂಪನಿಯಲ್ಲಿ 2015ರಲ್ಲಿ 40 ಲಕ್ಷ ಹೂಡಿಕೆ ಮಾಡಿದ್ದರು.

ಆದರೆ ಹೂಡಿಕೆ ಮಾಡಿದ ಹಣಕ್ಕೆ ತಿಂಗಳುಗಳು ಕಳೆದರೂ ಯಾವುದೇ ಲಾಭಾಂಶ ಬರಲಿಲ್ಲ. ಕೇಳಿದರೆ ಸಂಪೂರ್ಣ ಹಣವನ್ನು ತಮ್ಮ ಖಾತೆಗೆ ಜಮೆ ಮಾಡುವುದಾಗಿ ಹೇಳಿ ಕಾಲ ದೂಡುತ್ತಿದ್ದರು. ಈ ಹಿನ್ನೆಲೆಯಲ್ಲಿ 2018ರ ನ.9ರಂದು ಭಾರತೀನಗರ ಠಾಣೆಗೆ ದೂರು ನೀಡಿದ್ದರು. ಇದೀಗ ಪೊಲೀಸರು ಆರೋಪಿ ನೌಹೇರಾ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

click me!