
ನವದೆಹಲಿ(ಡಿ.04): ಮೊಬೈಲ್ ಪೋರ್ಟಬಲಿಟಿ ಯೋಜನೆ ಮೂಲಕ ಸೂಕ್ತ ಸೇವೆ ನೀಡದ ಮೊಬೈಲ್ ಕಂಪನಿಗಳನ್ನು ಬದಲಿಸಲು ಗ್ರಾಹಕರಿಗೆ ಅವಕಾಶ ಕಲ್ಪಿಸಿದ್ದ ಕೇಂದ್ರ ಸರ್ಕಾರ, ಇದೀಗ ವಿದ್ಯುತ್ ವಲಯದಲ್ಲೂ ಇಂಥದ್ದೇ ಬದಲಾವಣೆಯ ಐತಿಹಾಸಿಕ ಯೋಜನೆ ಜಾರಿಗೆ ಮುಂದಾಗಿದೆ. ಸದ್ಯ ಕರಡು ರಚನೆ ಹಂತದಲ್ಲಿರುವ ಈ ಯೋಜನೆ ಜಾರಿಗೊಂಡಿದ್ದೇ ಆದಲ್ಲಿ, ವಿದ್ಯುತ್ ಪೂರೈಕೆ ಮತ್ತು ಹಂಚಿಕೆ ವಲಯದಲ್ಲಿನ ಸರ್ಕಾರಿ ಸ್ವಾಮ್ಯದ ಕಂಪನಿಗಳ ಏಕಸ್ವಾಮ್ಯ ಕೊನೆಗೊಳ್ಳಲಿದೆ. ಜೊತೆಗೆ ವಿದ್ಯುತ್ ಹಂಚಿಕೆ ಮಾಡುವ ಕಂಪನಿ ಸೂಕ್ತ ಸೇವೆ ನೀಡುತ್ತಿಲ್ಲ ಎಂದಾದಲ್ಲಿ ಗ್ರಾಹಕ ಬೇರೊಂದು ಕಂಪನಿಯಿಂದ ವಿದ್ಯುತ್ ಪಡೆದುಕೊಳ್ಳಬಹುದಾಗಿದೆ.
ಹಾಲಿ ಇರುವ ವಿದ್ಯುತ್ ಕಾಯ್ದೆ ಅನ್ವಯ, ದೇಶದ ಬಹುತೇಕ ರಾಜ್ಯಗಳಲ್ಲಿ ವಿದ್ಯುತ್ ಪೂರೈಕೆ ಮತ್ತು ಹಂಚಿಕೆಯಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳದ್ದೇ ಏಕಸ್ವಾಮ್ಯ. ಆದರೆ ವಿದ್ಯುತ್ ವಲಯದಲ್ಲಿ ಸುಧಾರಣೆ, ಪಾರದರ್ಶಕತೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ, ಹಾಲಿ ಇರುವ ವಿದ್ಯುತ್ ಕಾಯ್ದೆಗೆ ಬದಲಾವಣೆ ತರಲು ಉದ್ದೇಶಿಸಿದೆ. ಪ್ರಸ್ತಾವಿತ ಯೋಜನೆ ಅನ್ವಯ ವಿದ್ಯುತ್ ಪೂರೈಕೆ ಮತ್ತು ವಿತರಣಾ ವ್ಯವಸ್ಥೆಯನ್ನು ಪೂರ್ಣವಾಗಿ ಬೇರೆ ಬೇರೆ ಮಾಡಲಾಗುವುದು. ಬಳಿಕ ಎರಡೂ ವಲಯಗಳಲ್ಲಿ ಸರ್ಕಾರದ ಜೊತೆ ಖಾಸಗಿ ಕಂಪನಿಗಳಿಗೂ ಭಾಗಿಯಾಗಲು ಅವಕಾಶ ಕಲ್ಪಿಸಲಾಗುವುದು. ಹೀಗಾದಲ್ಲಿ ಕಂಪನಿಗಳ ನಡುವೆ ಸ್ಪರ್ಧೆ ಏರ್ಪಟ್ಟು ಅವು ಉತ್ತಮ ಸೇವೆ ನೀಡುವುದು ಅನಿವಾರ್ಯವಾಗಲಿದೆ.
ಇಂಥ ಸಂದರ್ಭದಲ್ಲಿ ಯಾವುದೇ ಕಂಪನಿಯಿಂದ ತನಗೆ ಸೂಕ್ತ ಸೇವೆ ಸಿಗುತ್ತಿಲ್ಲ ಎಂದು ಗ್ರಾಹಕನಿಗೆ ಅನ್ನಿಸಿದಲ್ಲಿ ಆತ ತನ್ನ ಏರಿಯಾದಲ್ಲಿನ ಇತರೆ ಸೂಕ್ತವೆನಿಸಿದ ಕಂಪನಿಯಿಂದ ವಿದ್ಯುತ್ ಸೇವೆ ಪಡೆದುಕೊಳ್ಳಬಹುದು.
ಹಲವು ಕಂಪನಿಗಳಿಗೆ ಅವಕಾಶ: ಹೊಸ ಯೋಜನೆ ಅನ್ವಯ, ಒಂದೇ ಪ್ರದೇಶದಲ್ಲಿ ಹಲವು ಕಂಪನಿಗಳಿಗೆ ವಿದ್ಯುತ್ ಪೂರೈಕೆ ಮತ್ತು ಹಂಚಿಕೆಯ ಅವಕಾಶ ಕಲ್ಪಿಸಲಾಗುವುದು. ಹೀಗಾದಾಗ ಅಲ್ಲಿ ಏಕಸ್ವಾಮ್ಯ ತಪ್ಪುತ್ತದೆ. ಜೊತೆಗೆ ಸ್ಪರ್ಧೆಯ ಪರಿಣಾಮ ಗುಣಮಟ್ಟದ ಮತ್ತು ಅಗ್ಗದ ದರದಲ್ಲಿ ಗ್ರಾಹಕನಿಗೆ ವಿದ್ಯುತ್ ಲಭ್ಯವಾಗಲಿದೆ.
ದರದ ಮೇಲೂ ನಿಯಂತ್ರಣ: ಈ ಯೋಜನೆ ಅನ್ವಯ ವಿದ್ಯುತ್'ನ ಕನಿಷ್ಠ ಮತ್ತು ಗರಿಷ್ಠ ದರದ ನಡುವೆ ಶೇ.20ಕ್ಕಿಂತ ಹೆಚ್ಚಿನ ವ್ಯತ್ಯಾಸ ಇರಬಾರದು ಎಂಬ ನಿಯಮವನ್ನೂ ಹಾಕಲಾಗುವುದು. ಅಲ್ಲದೆ ಅಸಾಂಪ್ರದಾಯಿಕ ವಲಯಗಳಿಂದ ಉತ್ಪಾದಿತ ವಿದ್ಯುತ್ ಅನ್ನು ಸರ್ಕಾರಿ ಅಥವಾ ಖಾಸಗಿ ಕಂಪನಿಗಳು ಖರೀದಿಸುವುದನ್ನೂ ಕಡ್ಡಾಯ ಮಾಡಲಾಗುವುದು. ಈ ಕುರಿತ ಕರಡು ಮಸೂದೆ ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ. ಮುಂಬರುವ ಬಜೆಟ್ ಅಧಿವೇಶನದಲ್ಲಿ ಇಂಧನ ಸಚಿವಾಲಯ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಇಂಧನ ಮತ್ತು ಹೊಸ
ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ. ಸಿಂಗ್ ಹೇಳಿದ್ದಾರೆ. ಜೊತೆಗೆ ಯೋಜನೆಯನ್ನು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸುವ ಮುನ್ನ ಎಲ್ಲಾ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ, ಅವುಗಳ ಅಭಿಪ್ರಾಯ ಪಡೆಯಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ. ದೇಶದ ಎಲ್ಲಾ ಜನರಿಗೂ 2019ರ ಮಾರ್ಚ್'ನೊಳಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಗುರಿಯ ಅಂಗವಾಗಿ ಈ ಯೋಜನೆ ರೂಪುಗೊಳ್ಳುತ್ತಿದೆ. ಪ್ರಸಕ್ತ ಭಾರತದಲ್ಲಿ ತಲಾವಾರು ವಿದ್ಯುತ್ ಬಳಕೆ 1075 ಯುನಿಟ್'ಗಳಾಗಿದ್ದರೆ, ಯುರೋಪ್ ದೇಶಗಳಲ್ಲಿ 6000 ಯುನಿಟ್ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.