'ನಳಿನ್ ಕುಮಾರ್ ಕುಡುಕರಂತೆ ಮಾತನಾಡುತ್ತಾರೆ'

By Web DeskFirst Published Oct 7, 2019, 7:58 AM IST
Highlights

ಕೇಂದ್ರದಿಂದ ಮತ್ತೆ ಪರಿಹಾರ ಬರಲ್ಲ: ಎಚ್‌ಡಿಕೆ| ನನ್ನ ಪ್ರಕಾರ ಇದೇ ಕೊನೆಯ ಕಂತು| ಬಿಜೆಪಿ ಕಾರ‍್ಯಕರ್ತರು, ಶಾಸಕರಿಂದ ಪರಿಹಾರ ಗುಳುಂ: ಮಾಜಿ ಸಿಎಂ

ಚಿಕ್ಕಮಗಳೂರು[ಅ.07]: ನೆರೆ ಪರಿಹಾರ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮತ್ತೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ‘ನಿಮ್ಮ ಮಂತ್ರಿಗಳಿಗೆ ಸರಿಯಾದ ರೀತಿಯಲ್ಲಿ ಕುಳಿತು ಕೆಲಸ ಮಾಡಲು ಹೇಳಿ. ಜನರ ಜತೆ ಹುಡುಗಾಟ ಆಡಬೇಡಿ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ತಾಕೀತು ಮಾಡಿದ್ದಾರೆ. ಜತೆಗೆ, ನೆರೆ ಪರಿಹಾರವಾಗಿ ಕೇಂದ್ರದಿಂದ ಮತ್ತಷ್ಟುಪರಿಹಾರ ಬರುವ ನಿರೀಕ್ಷೆ ಇಲ್ಲ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

ಮೂಡಿಗೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರಿಗಳಿಗೆ ಬೈಯುವುದರಿಂದ ಕೆಲಸ ಆಗುವುದಿಲ್ಲ. ನೆರೆ ಹಾವಳಿ ಹೆಸರಲ್ಲಿ ಬಿಜೆಪಿ ಕಾರ್ಯಕರ್ತರು, ಶಾಸಕರು ಹಣ ನುಂಗುವ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ತನಿಖೆ ಮಾಡಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜನರಲ್ಲಿ ವಿಶ್ವಾಸ ಮೂಡಿಸಲಿ. ಹಣ ಹೊಡೆಯುವ ಕೆಲಸ ಆಗದಂತೆ ನೋಡಿಕೊಳ್ಳಿ. ಜನರೊಂದಿಗೆ ಹುಡುಗಾಟ ಆಡಬೇಡಿ. ಮಂತ್ರಿಗಳಿಗೆ ಸರಿಯಾದ ರೀತಿಯಲ್ಲಿ ಕುಳಿತು ಕೆಲಸ ಮಾಡಲು ಹೇಳಿ ಎಂದು ತಾಕೀತು ಮಾಡಿದರು.

'ಪರಿಹಾರ ಬರಲ್ಲ ಎನ್ನಲು ಎಚ್‌ಡಿಕೆ ಏನು ಪ್ರಧಾನಿಯಾ?'

ದೇಶದಲ್ಲಿ ಪ್ರತಿ ವರ್ಷ ನೈಸರ್ಗಿಕ ಹಾವಳಿಗೆ ಪರಿಹಾರ ನೀಡಲು .35 ಸಾವಿರ ಕೋಟಿ ಇಟ್ಟಿರುತ್ತಾರೆ. ಇಡೀ ದೇಶಕ್ಕೆ ಹಣ ಕೊಡಬೇಕು. ಹೀಗಾಗಿ ನೆರೆ ಪರಿಹಾರವಾಗಿ ಕೇಂದ್ರದಿಂದ ಮತ್ತೆ ಅನುದಾನ ಸಿಗುವ ನಿರೀಕ್ಷೆ ಇಲ್ಲ. ನನಗೆ ತಿಳಿದಂತೆ ಈಗ ಬಿಡುಗಡೆಯಾಗಿದ್ದೇ ಕೊನೇ ಕಂತು ಎಂದು ಭವಿಷ್ಯ ನುಡಿದರು. ಜತೆಗೆ, ರಾಜ್ಯ ಸರ್ಕಾರ ಆರ್ಥಿಕವಾಗಿ ಸುಭದ್ರವಾಗಿದೆ. ಪರಿಹಾರ ನೀಡಲು ನಮ್ಮ ಖಜಾನೆಯಲ್ಲೇ ಹಣ ಇದೆ ಎಂದು ತಿಳಿಸಿದರು.

ವಿಜಯೇಂದ್ರಗೂ ಸರ್ಕಾರಕ್ಕೂ ಏನು ಸಂಬಂಧ?

ಖಜಾನೆ ಖಾಲಿಯಾಗಿದೆ ಎಂಬ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಹೇಳಿಕೆ ಕುರಿತೂ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗನಿಗೂ, ಸರ್ಕಾರಕ್ಕೂ ಏನು ಸಂಬಂಧ? ರಾಜ್ಯ ಸರ್ಕಾರದಲ್ಲಿ ದುಡ್ಡಿನ ಸಮಸ್ಯೆ ಇಲ್ಲ, ಏನು ಬೇಕಾದರೂ ಮಾಡಲು ಸಾಧ್ಯವಿದೆ. ಯಡಿಯೂರಪ್ಪ ತಮ್ಮ ಮನೆಯಿಂದ ಹಣ ಕೊಡಬೇಕಾಗಿದೆಯಾ? ರಾಜ್ಯದ ಖಜಾನೆಯಲ್ಲಿ ಹಣ ಇಲ್ಲ ಎಂದು ಸಿಎಂ ಪುತ್ರ ಹೇಳಿದ್ದಾನೆ. ಆತ ಯಾವ ಲೆಕ್ಕಾಚಾರದಲ್ಲಿ ಹೇಳಿದ್ದಾನೋ ಗೊತ್ತಿಲ್ಲ. ಆತ ಶಾಸಕ ಅಲ್ಲ, ಸರ್ಕಾರಕ್ಕೂ ಆತನಿಗೂ ಯಾವುದೇ ಸಂಬಂಧ ಇಲ್ಲ. ಖಜಾನೆ ಬಗ್ಗೆ ಚರ್ಚಿಸಲು ಆತನಿಗೆ ಅಧಿಕಾರ ಕೊಟ್ಟವರು ಯಾರೆಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಯತ್ನಾಳಗೆ ಬಿಜೆಪಿ ವರಿಷ್ಠರಿಂದ ತಕ್ಕ ಪಾಠ​ ಎಂದ ಕೇಂದ್ರ ಸಚಿವ

ಕುಡುಕರ ರೀತಿ ನಳಿನ್‌ ಮಾತು: ಎಚ್‌ಡಿಕೆ

ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಹೇಳಿರುವ ಸಂಸದ ನಳಿನ್‌ಕುಮಾರ್‌ ಕಟೀಲ್‌ ಒಂದು ಪಕ್ಷದ ರಾಜ್ಯಾಧ್ಯಕ್ಷರು ಎಂಬುದನ್ನು ಮರೆಯಬಾರದು. ಹೆಂಡದ ಅಂಗಡಿ ಮುಂದೆ ಕುಡಿದು ಮಾತನಾಡುವ ರೀತಿಯಲ್ಲಿ ಅವರ ನಡವಳಿಕೆಯಿದೆ. ಇದು ಸರಿಯಲ್ಲ ಎಂದು ಕುಮಾರಸ್ವಾಮಿ ಗುಡುಗಿದರು. ನಳಿನ್‌ ಕುಮಾರ್‌ ದಾಖಲೆ ಸಹಿತ ಮಾತನಾಡಬೇಕು. ಮೈತ್ರಿ ಸರ್ಕಾರದಲ್ಲಿ ಖಜಾನೆ ಖಾಲಿ ಮಾಡಲು, ದರೋಡೆ ಮಾಡಲು ಉತ್ತೇಜನ ಕೊಟ್ಟಿದ್ದರೆ, ರಾಜಕೀಯವಾಗಿ ನಿವೃತ್ತಿ ಹೊಂದಲೂ ಸಿದ್ಧ ಎಂದು ಕುಮಾರಸ್ವಾಮಿ ಇದೇ ವೇಳೆ ಸವಾಲು ಹಾಕಿದರು.

ರಾಜ್ಯದ ಖಜಾನೆ ಯಾವ ರೀತಿ ಲೂಟಿಯಾಗಿದೆ ಎಂದು ಜನತೆ ಮುಂದೆ ಅವರು ಹೇಳಬೇಕು. ಟೆಲಿಪೋನ್‌ ಟ್ಯಾಪಿಂಗ್‌ ಸಿಬಿಐಗೆ ವಹಿಸಿದ ರೀತಿಯಲ್ಲೇ ಖಜಾನೆ ಖಾಲಿ ಮಾಡಿರುವ ಬಗ್ಗೆಯೂ ಸಿಬಿಐ ತನಿಖೆಗೆ ವಹಿಸಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಸೂಕ್ತ ಮಾಹಿತಿ ಸಂಗ್ರಹಿಸಿಲ್ಲ: ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಈವರೆಗೆ ಏನೂ ಮಾಡಿಲ್ಲ, ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇನೆ. ಮೂಡಿಗೆರೆ ತಾಲೂಕಿನ ರೈತ ಚಂದ್ರೇಗೌಡ ಅವರ ಜಮೀನು ಖಾತೆ ಹೊಂದಿರಲಿಲ್ಲ. ನೆರೆ ಪರಿಹಾರ ಸಿಗುವುದು ಅನುಮಾನ ಇದ್ದುದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೊಬ್ಬ ರೈತ ಚೆನ್ನಪ್ಪಗೌಡ ಅವರಿಗೂ ಇದೇ ಸಮಸ್ಯೆ ಇತ್ತು. ಈ ರೀತಿಯ ಸಮಸ್ಯೆಗಳು ಬೆಳಗಾವಿ, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳಲ್ಲೂ ಸಾಕಷ್ಟಿವೆ. ಕಬ್ಬು ಬೆಳೆಯುವ ಜನತೆ 2-3 ವರ್ಷ ಮತ್ತೆ ಚೇತರಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಭೂಮಿ ಸಂಪೂರ್ಣವಾಗಿ ನಾಶವಾಗಿದೆ. ರೈತರಿಗೆ ಪರಿಹಾರ ನೀಡಲು ಸರಿಯಾದ ಮಾಹಿತಿ ಸಂಗ್ರಹಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ದೂರಿದರು.

ಶಿವಮೊಗ್ಗ : ಸಿಎಂ ಕೊಟ್ಟ ಗೃಹಪ್ರವೇಶ ಮಾಡಿದ್ದ ಗಂಗಮ್ಮಜ್ಜಿಗೆ ಕಾದಿತ್ತು ಶಾಕ್

ಸಿದ್ದುಗೂ ಗುದ್ದು: ಕುಮಾರಸ್ವಾಮಿ ಸಿಎಂ ಆಗೋದಿಲ್ಲ, ರೈತರ ಸಾಲ ಎಲ್ಲಿಂದ ಮನ್ನಾ ಮಾಡ್ತಾರೆ ಎಂದು ಸಿದ್ದರಾಮಯ್ಯ ಟೀಕೆ ಮಾಡಿದ್ದರು. ಕಳೆದ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದಾಗ ರೈತರ .18 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇವೆ ಎಂದರು.

 

click me!