
ನವದೆಹಲಿ(ಸೆ. 28): ಕಾವೇರಿ ಜಲ ವಿವಾದದಲ್ಲಿ ಕಡೆಗೂ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವ ಅನಿವಾರ್ಯ ಎದುರಾಗಿದೆ. ನಿನ್ನೆಯ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆ ನಡೆದಾಗ ನ್ಯಾಯಾಧೀಶರು ಕೇಂದ್ರ ಸರ್ಕಾರದ ಸಲಹೆ ಕೇಳಿದ್ದಾರೆ. ವಿಚಾರಣೆ ವೇಳೆ ಹಾಜರಿದ್ದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಕಾವೇರಿ ವಿಚಾರದಲ್ಲಿ ಮಧ್ಯಪ್ರವೇಶಿಸುವ ಭರವಸೆ ನೀಡಿದ್ದಾರೆ. ಆದ್ರೆ, ಕೇಂದ್ರದ ಪರವಾಗಿ ಯಾರು ಉಭಯ ರಾಜ್ಯಗಳ ಮಧ್ಯೆ ಸಂಧಾನಕ್ಕೆ ಮುಂದಾಗ್ತಾರೆ ಅನ್ನೋದೇ ಕುತೂಹಲ.
ಮಧ್ಯಸ್ಥಿಕೆ ವಹಿಸುವುದು ಯಾರು?
- ಪ್ರಧಾನ ಮಂತ್ರಿ ನರೇಂದ್ರ ಮೋದಿ
- ಜಲಸಂಪನ್ಮೂಲ ಸಚಿವೆ ಉಮಾ ಭಾರತಿ
- ಗೃಹ ಸಚಿವ ರಾಜನಾಥ್ ಸಿಂಗ್
- ಹಣಕಾಸು ಸಚಿವ ಅರುಣ್ ಜೇಟ್ಲಿ
- ನಾಳೆ ಉಭಯ ರಾಜ್ಯಗಳ ಸಿಎಂ ಸಭೆ
- ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ
ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಸೂಕ್ತ ಪ್ರತಿನಿಧಿಯೊಬ್ಬರು ಮಧ್ಯಸ್ಥಿಕೆ ವಹಿಸಿ 2 ರಾಜ್ಯಗಳ ನಡುವೆ ಮಾತುಕತೆ ನಡೆಸಬೇಕು ಅಂತ ಹೇಳಿದೆ. ಹೀಗಾಗಿ ಮಧ್ಯಸ್ಥಿಕೆ ಯಾರು ವಹಿಸಲಿದ್ದಾರೆ ಅನ್ನೋದು ಇನ್ನೂ ನಿಗೂಢ. ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆಗೆ ಸೂಕ್ತ ಅಂತ ಅಂದ್ರೂ 2 ದಿನದಲ್ಲಿ ಅಸಾಧ್ಯ ಅಂತ ಹೇಳಲಾಗ್ತಿದೆ. ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಹೆಸರು ತೇಲಿ ಬರುತ್ತಿದೆ. ಆದರೆ, ಕಾನೂನು ಸುವ್ಯವಸ್ಥೆಯ ಪ್ರಶ್ನೆ ಪ್ರಧಾನವಾಗಿಸಿಕೊಂಡು ಗೃಹ ಸಚಿವ ರಾಜನಾಥ್ ಸಿಂಗ್ ಮಧ್ಯಸ್ಥಿಕೆ ವಹಿಸಿದ್ರೆ ಸೂಕ್ತ ಎಂದು ಮುಕುಲ್ ರೋಹಟಗಿ ಅಭಿಪ್ರಾಯಪಟ್ಟಿದ್ದಾರೆ. ಅದೇ ರೀತಿ ಕಾನೂನು ಪರಿಣಿತಿಯ ಅರುಣ್ ಜೇಟ್ಲಿ ಉತ್ತಮ ಎಂಬ ಮಾತುಗಳೂ ಕೇಳಿ ಬಂದಿವೆ. ನಾಳೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಮಾತುಕತೆ ನಡೆಯಲಿದ್ದು ಕೇಂದ್ರ ಸಚಿವರು ಮಧ್ಯಸ್ಥಿಕೆ ವಹಿಸಬೇಕೋ ಅಥವಾ ಕೇಂದ್ರ ಜಲ ಸಂಪನ್ಮೂಲ ಇಲಾಖೆ ವಿಶೇಷ ಕಾರ್ಯದರ್ಶಿ ಮಾತನಾಡಬೇಕೋ ಅನ್ನೋದು ಅಂತಿಮವಾಗಿಲ್ಲ.
ನಾಳೆ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ
ಈ ಮಧ್ಯೆ ನಾಳೆ ಗುರುವಾರದ ಸಭೆಗೆ ಹಾಜರಾಗಿ ಎಂದು ಕೇಂದ್ರ ಜಲಸಂಪನ್ಮೂಲ ಇಲಾಖೆ ವಿಶೇಷ ಕಾರ್ಯದರ್ಶಿ ಶಶಿಶೇಖರ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ಗೆ ಪತ್ರ ಬರೆದಿದ್ದಾರೆ. ಡೆಲ್ಲಿಯ ಶಕ್ತಿಭವನದಲ್ಲಿ ನಡೆಯಲಿರುವ ಹೈವೋಲ್ಟೇಜ್ ಮೀಟಿಂಗ್'ನಲ್ಲಿ ತಮಿಳ್ನಾಡು ಸರ್ಕಾರದ ಪ್ರತಿನಿಧಿಯಾಗಿ ಲೋಕೋಪಯೋಗಿ ಸಚಿವರು ಹಾಗೂ ರಾಜ್ಯದ ಸಿಎಂ ಸಿದ್ರಾಮಯ್ಯ ಭಾಗವಹಿಸ್ತಿದ್ದಾರೆ. ಆದ್ರೆ, ಕೇಂದ್ರ ಸರ್ಕಾರದ ಪ್ರತಿನಿಧಿ ಯಾರು ಅನ್ನೋದು ಸ್ಪಷ್ಟವಾಗಿಲ್ಲ. ಒಟ್ನಲ್ಲಿ ಈ ಸಭೆಯಲ್ಲಿ ಯಾವ ನಿರ್ಧಾರ ಹೊರ ಬೀಳುತ್ತೋ ಗೊತ್ತಿಲ್ಲ.
ಬ್ಯೂರೋ ರಿಪೋರ್ಟ್, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.