ಪಿಒಪಿ ಗಣೇಶ ಪ್ರತಿಷ್ಠಾಪನೆ: ಸೆಲೆಬ್ರಿಟಿಗಳಿಂದಲೂ ವಿರೋಧ

By Kannadaprabha NewsFirst Published Aug 31, 2019, 9:08 AM IST
Highlights

 ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿಯೇ ಮೊದಲ ದೇವರು. ಸಕಲ ಜೀವರಾಶಿಗೂ ಜೀವನಾಧಾರವಾಗಿರುವ ಈ ಪ್ರಕೃತಿಗೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಮೂರ್ತಿಗಳಿಂದ ತೀವ್ರ ಧಕ್ಕೆ ಉಂಟಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ದಿನದಿಂದ ದಿನಕ್ಕೆ ಜಾಗೃತಿ ಮೂಡುತ್ತಿರುವ ಪರಿಣಾಮ ‘ಪರಿಸರ ಸ್ನೇಹಿ’ ಗಣೇಶನ ಪ್ರತಿಷ್ಠಾಪನೆ ಹಾಗೂ ಆರಾಧನೆಯತ್ತ ಆಸಕ್ತಿ ಹೊರಳುತ್ತಿದೆ.

ಬೆಂಗಳೂರು (ಆ. 31): ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡುವ ‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌’ (ಪಿಒಪಿ) ಗಣೇಶ ಮೂರ್ತಿಗಳ ಮಾರಾಟ ಹಾಗೂ ಪ್ರತಿಷ್ಠಾಪನೆ ವಿರುದ್ಧದ ಕೂಗು ದಿನದಿಂದ ದಿನಕ್ಕೆ ಜೋರು ಪಡೆಯುತ್ತಿದೆ. ಬೆಂಗಳೂರಿನ ಹಲವಾರು ಸಂಘ-ಸಂಸ್ಥೆಗಳು, ಗಣೇಶ ಉತ್ಸವ ಸಮಿತಿಗಳು ಪರಿಸರ ಸ್ನೇಹಿ ಗಣೇಶನ ಪ್ರತಿಷ್ಠಾಪನೆ ಮೂಲಕ ಪರಿಸರ ಪ್ರೇಮ ಮೆರೆಯುತ್ತಿವೆ. ಜತೆಗೆ ಹತ್ತಾರು ಸಂಸ್ಥೆಗಳು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಉಪಯೋಗ ಹಾಗೂ ವಿಷಕಾರಿ ಪಿಒಪಿ ಮೂರ್ತಿಗಳಿಂದಾಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿವೆ.

ಈ ಸಾಲಿಗೆ ವಿವಿಧ ಕ್ಷೇತ್ರಗಳ ಗಣ್ಯರೂ ಸೇರ್ಪಡೆಯಾಗಿದ್ದು ಪರಿಸರ ಸ್ನೇಹಿ ಗಣಪನ ಆರಾಧನೆಗೆ ಕರೆ ನೀಡುತ್ತಿದ್ದಾರೆ. ಖ್ಯಾತ ಸಾಹಿತಿಗಳು, ಚಿತ್ರೋದ್ಯಮದ ಖ್ಯಾತ ತಾರೆಯರು, ರಾಜಕೀಯ ವಲಯದ ಆದರ್ಶ ನಾಯಕರು ಹೀಗೆ ಹಲವಾರು ಮಂದಿ ಪರಿಸರ ಸ್ನೇಹಿ ಗಣಪನ ಪರ ಬ್ಯಾಟ್‌ ಬೀಸುತ್ತಿದ್ದಾರೆ.

‘ಕನ್ನಡಪ್ರಭ’ ಪಿಒಪಿ ವಿರುದ್ಧ ಪ್ರಕಟಿಸುತ್ತಿರುವ ‘ಪಿಒಪಿ ನಿಷೇಧಿಸಿ’ ಸರಣಿ ವಿಶೇಷವನ್ನು ವೇದಿಕೆಯಾಗಿ ಬಳಸಿಕೊಂಡು ಇಂದು ಹಲವು ಗಣ್ಯರು ಪರಿಸರ ಸ್ನೇಹಿ ಗಣೇಶನ ಆಚರಣೆಗೆ ಕರೆ ನೀಡಿದ್ದಾರೆ. -ಪರಿಸರ ಸ್ನೇಹಿ ಗಣೇಶನ ಮೂಲಕ ಪರಿಸರ ಉಳಿಸುವ ಕುರಿತು ಗಣ್ಯರ ಗಣ್ಯ ಸಂದೇಶ ಹೀಗಿವೆ.

*ಪರಿಸರ ಗಣಪತಿಯನ್ನೇ ಪೂಜಿಸಿ: ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ

ಪಿಒಪಿ ಮೂರ್ತಿಗಳು ವಿಷಕಾರಕ. ಇವುಗಳಲ್ಲಿನ ರಾಸಾಯನಿಕ ಪದಾರ್ಥಗಳಿಂದ ಕೆರೆ-ಕುಂಟೆ, ನದಿಗಳು ಮಲಿನಗೊಂಡು ನೀರಿನಲ್ಲಿರುವ ಜಲಚರ, ವಿವಿಧ ಮೂಲಗಳಿಂದ ಆ ನೀರು ಸೇವಿಸುವ ಜಾನುವಾರು, ಪ್ರಾಣಿ-ಪಕ್ಷಿ ಹಾಗೂ ಮನುಷ್ಯರ ಜೀವಕ್ಕೂ ಕಂಟಕ. ಹೀಗಾಗಿ ಪ್ರತಿಯೊಬ್ಬರೂ ಪರಿಸರ ಸ್ನೇಹಿ ಗಣಪತಿಯನ್ನೇ ಪೂಜಿಸಿ, ಆರಾಧಿಸಬೇಕು. ಮೊದಲು ಪಿಒಪಿ ಮೂರ್ತಿಗಳ ತಯಾರಿಕೆ ತಡೆಗಟ್ಟಬೇಕು. ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಂಡರೆ, ಜನರೂ ಸಹ ಪರಿಸರ ಸ್ನೇಹಿ ಗಣಪತಿ ಆರಾಧನೆಯತ್ತ ಒಲವು ತೋರುತ್ತಾರೆ.

*ಮಣ್ಣಲ್ಲಿ ಮಣ್ಣಾಗುವ ಮೂರ್ತಿ ಪೂಜಿಸಿ: ಸಾಹಿತಿ ಎಚ್‌.ಎಸ್‌.ವೆಂಕಟೇಶಮೂರ್ತಿ

ಪರಿಸರ ಮತ್ತು ಕೆರೆ-ಬಾವಿಯಂತಹ ನೀರಿನ ಮೂಲಗಳ ಹಿತದೃಷ್ಟಿಯಿಂದ ಪಿಒಪಿ ಗಣಪತಿ ಪೂಜಿಸಬಾರದು. ಪಿಒಪಿ ಮೂರ್ತಿಗಳನ್ನು ಪರಿಸರದಲ್ಲಿ ಬೆರೆಸಿದರೆ ಅಪಾಯಕಾರಿ. ಗಣೇಶ ಮಣ್ಣಿನಿಂದಲೇ ಉದ್ಭವವಾಗಿರುವುದರಿಂದ ವಿಸರ್ಜನೆ ವೇಳೆ ನೀರು ಮತ್ತು ಮಣ್ಣಿನಲ್ಲಿಯೇ ಬೆರೆತುಹೋಗುವ ಗಣಪತಿಗಳನ್ನು ನಾವೆಲ್ಲರೂ ಪೂಜಿಸಬೇಕಿದೆ. ಭಕ್ತಿ ಜತೆಗೆ ವೈಜ್ಞಾನಿಕವಾಗಿಯೂ ಮಣ್ಣಿನಲ್ಲಿ ಮಣ್ಣಾಗುವ ಮೂರ್ತಿ ಪೂಜಿಸಿ, ಗಣೇಶ ಉತ್ಸವ ಆಚರಣೆ ಮಾಡುವುದು ನಡೆಯಬೇಕು.

*ಮುಂದಿನ ಪೀಳಿಗೆಗೆ ಶುದ್ಧ ಪ್ರಕೃತಿ ಉಳಿಸಿ: ನಟ ಪುನೀತ್‌ ರಾಜ್‌ಕುಮಾರ್‌

ಮುಂದಿನ ಪೀಳಿಗೆಗೆ ಪರಿಶುದ್ಧವಾದ ಪ್ರಕೃತಿಯನ್ನು ಉಳಿಸಿ ಹೋಗುವುದು ನಮ್ಮೆಲ್ಲರ ಜವಬ್ದಾರಿ. ಈ ನಿಟ್ಟಿನಲ್ಲಿ ನೀರು ಮಲಿನವಾಗದಂತೆ ತಡೆಯುವುದು ಬಹಳ ಮುಖ್ಯ. ಪಿಒಪಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡಬೇಡಿ. ಮಣ್ಣಿನ ಗಣೇಶÜ ಆರಾಧಿಸಿ ತಮ್ಮ ಮನೆಯ ಕೈತೋಟ ಅಥವಾ ತಮಗೆ ಅನುಕೂಲವಾದ ಕಡೆ ವಿಸರ್ಜನೆ ಮಾಡಿ. ಆ ಮಣ್ಣಿನಲ್ಲಿ ಒಂದು ಗಿಡ ನೆಡಿ. ಪ್ರಕೃತಿಗೆ ಪೂರಕವಾಗಿ ಹಬ್ಬವನ್ನು ಆಚರಿಸೋಣ. ಎಲ್ಲರೂ ಕಡ್ಡಾಯವಾಗಿ ಮಣ್ಣಿನ ಗಣೇಶನಿಂದಲೇ ಹಬ್ಬ ಆಚರಿಸೋಣ.

*ವಿಘ್ನ ನಿವಾರಕನಿಂದ ಪ್ರಕೃತಿಗೆ ವಿಘ್ನವಾಗದಿರಲಿ: ನಟ ಕಿಚ್ಚ ಸುದೀಪ್‌

ನಾವು ಪ್ರಕೃತಿಗೆ ಕೊಡುವ ನೋವನ್ನು ಪ್ರಕೃತಿಯು ತಿರುಗಿಸಿ ಮತ್ತೆ ನಮಗೆ ಕೊಡುತ್ತಿರುವುದನ್ನು ಈಗಾಗಲೇ ಅನುಭವಿಸುತ್ತಿದ್ದೇವೆ. ಹೀಗಾಗಿ, ಈ ಬಾರಿ ವಿಘ್ನ ನಿವಾರಕನ ಹಬ್ಬಕ್ಕೆ ಪಿಒಪಿ ಗಣೇಶ ಮೂರ್ತಿಗಳನ್ನು ಉಪಯೋಗಿಸದೆ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಮಾತ್ರ ಬಳಸಿ ಪ್ರಕೃತಿ ಮಾತೆಯನ್ನು ಕಾಪಾಡೋಣ. ಇದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಪಿಒಪಿ ಪೂಜಿಸಿದರೆ ಗಾಳಿ, ನೀರು ಮತ್ತು ಪ್ರಕೃತಿ ಹಾಳಾಗಲಿದೆ.

*ಮಣ್ಣಿನ ಮೂರ್ತಿ ನೆನಪಿನಲ್ಲಿ ಉಳಿಯುತ್ತದೆ: ನಟಿ ಹರಿಪ್ರಿಯಾ

ನಮಗೆ ಪ್ರತಿ ಹಬ್ಬ ಕೂಡ ನೆನಪಿನಲ್ಲಿ ಉಳಿಯುವಂತಾಗಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಮಣ್ಣಿನ ಗಣಪತಿ ಮೂರ್ತಿಗಳನ್ನು ಪೂಜಿಸಿ ನಂತರ ವಿಸರ್ಜನೆ ವೇಳೆ ಪಾಟ್‌ನಲ್ಲಿಯೇ ವಿಸರ್ಜಿಸಿ. ಅದರಲ್ಲಿ ಪರಿಮಳ ಬೀರುವ ಹೂವು, ಆರೋಗ್ಯಕ್ಕೆ ಉತ್ತಮವಾದ ಆಹಾರವಾಗುವ ಹಣ್ಣು ಅಥವಾ ಯಾವುದೇ ಮರದ ಬೀಜಗಳನ್ನು ನೆಡಿ. ನೀವು ಈ ನೆನಪು ಮೆಲಕು ಹಾಕುವಾಗಲೆಲ್ಲಾ ಗಣೇಶ ಹಬ್ಬ ನೆನಪಿನಲ್ಲಿ ಉಳಿಯುತ್ತದೆ. ಗಣೇಶನ ಜತೆಗೆ ಪ್ರಕೃತಿ ಮಾತೆಯನ್ನು ಪೂಜಿಸಿದ ಸಂತಸ ನಮ್ಮದಾಗುತ್ತದೆ.

*ಪಿಒಪಿ ಪ್ರತಿಷ್ಠಾಪಿಸಿದರೆ ಗಣೇಶ ಸುಮ್ಮನೆ ಬಿಡಲ್ಲ: ನಟಿ ಮಾನ್ವಿತಾ ಹರೀಶ್‌

ನಾನು ಪಿಒಪಿ ಅಥವಾ ಮಣ್ಣಿನ ಗಣಪತಿಗಿಂತ ಹೆಚ್ಚಾಗಿ ಮನದಲ್ಲಿಯೇ ಪ್ರತಿ ದಿನ, ಪ್ರತಿ ಕ್ಷಣ ದೇವರನ್ನು ನೆನೆಯುತ್ತೇನೆ. ಪ್ರತಿದಿನ ನನ್ನ ಮನಸ್ಸು ಮತ್ತು ಗಣೇಶ ಮಾತಾಡಿಕೊಳ್ಳುತ್ತೇವೆ. ಗಣೇಶ ಕೆಟ್ಟದ್ದನ್ನು ಸಹಿಸುವುದಿಲ್ಲ. ಹೀಗಿದ್ದಾಗ ರಸ್ತೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ, ಶಬ್ದ ಮಾಲಿನ್ಯ ಮಾಡಿ ಕೊನೆಗೆ ಕೊಳಚೆ ನೀರಿನಲ್ಲಿ ವಿಸರ್ಜನೆ ಮಾಡಿದರೆ ಸುಮ್ಮನೆ ಬಿಡುತ್ತಾ? ಆದ್ದರಿಂದ ಈಗಲಾದರೂ ಎಚ್ಚೆತ್ತುಕೊಂಡು ಎಲ್ಲರೂ ಪ್ರಕೃತಿ ಗೌರವಿಸಿ ಮಣ್ಣಿನ ಗಣಪತಿಯನ್ನು ಆರಾಧಿಸೋಣ.

*ಪರಿಸರ ಸ್ನೇಹಿಯಾಗಿ ಬದುಕೋಣ: ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌

ಪರಿಸರ ಸ್ನೇಹಿಯಾಗಿರಿ ಹಾಗೂ ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪರಿಸರ ಉಳಿಸಿ. ನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಆದರೆ, ಪರಿಸರಕ್ಕೆ ಮಾರಕವಾಗುವ ಗಣಪತಿಗಳನ್ನು ಹೊರತುಪಡಿಸಿ, ಮಣ್ಣಿನ ಗಣಪತಿಗಳನ್ನು ಪೂಜಿಸೋಣ. ಇತ್ತೀಚಿನ ದಿನಗಳಲ್ಲಿ ನಗರದ ಕೆರೆಗಳು ಹಾಳಾಗುತ್ತಿವೆ. ಪಿಒಪಿ ಗಣಪತಿಗಳ ಆಚರಣೆಯಿಂದ ನೀರು ಮತ್ತಷ್ಟುಕಲುಷಿತವಾಗಲಿದೆ. ಇದನ್ನು ತಪ್ಪಿಸುವುದಕ್ಕಾಗಿ ನಾವೆಲ್ಲರೂ ಶ್ರಮಿಸೋಣ.

*ಪರಿಸರ ಗಣಪನ ಮೂಲಕ ಪಾವಿತ್ರ್ಯತೆ ಕಾಪಾಡಿ: ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ

ಹಬ್ಬ ಮತ್ತು ಪರಿಸರದ ಪಾವಿತ್ರ್ಯತೆ ಕಾಪಾಡುವುದಕ್ಕಾಗಿ ಪ್ರತಿಯೊಬ್ಬರೂ ಪರಿಸರ ಸ್ನೇಹಿ ಗಣಪತಿಯನ್ನು ಆಚರಿಸಬೇಕು. ಪಿಒಪಿ ಗಣಪತಿಯನ್ನು ಬಳಸುವುದರಿಂದ ಪ್ರಕೃತಿ, ನೀರು ಮತ್ತು ನೀರಿನಲ್ಲಿ ವಾಸಿಸುವ ಜಲಚರಗಳ ಪ್ರಾಣಕ್ಕೆ ಹಾನಿಯಾಗಲಿದೆ. ಪಿಒಪಿ ಮೂರ್ತಿಗಳು ವಿಸರ್ಜನೆ ಬಳಿಕ ಊನವಾಗಿ ಬಿದ್ದಿರುತ್ತವೆ. ಇವನ್ನು ಗಮನಿಸಿದರೆ ನಾವು ಪೂಜಿಸಿದ ಗಣಪತಿ ಮೂರ್ತಿಗಳಾ ಇವು ಎನ್ನುವಷ್ಟರ ಮಟ್ಟಿಗೆ ಮನಸ್ಸಿಗೆ ಬೇಸರವಾಗುತ್ತದೆ. ಹೀಗಾಗಿ, ಜನರು ಎಚ್ಚೆತ್ತುಕೊಂಡು ಪರಿಸರ ಗಣಪತಿಗಳನ್ನೇ ಪೂಜಿಸಬೇಕು.

click me!