ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣ : ಸಿಬಿಐಗೆ ವಹಿಸಲು ಆಗ್ರಹ

By Web DeskFirst Published Aug 2, 2019, 9:29 AM IST
Highlights

ಕಾಫಿ ಡೇ ಸಾಮ್ರಾಜ್ಯದ ಮಾಲಿಕ ಸಿದ್ಧಾರ್ಥ ಅವರು ಆತ್ಮಹತ್ಯೆಗೆ ಶರಣಾಗಿದ್ದು, ಇದರ ಸುತ್ತ ಹಲವು ಅನುಮಾನಗಳು ಇದೆ. ಈ ನಿಟ್ಟಿನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಲಾಗಿದೆ. 

ಬೆಂಗಳೂರು [ಆ.02]:  ಕೆಫೆ ಕಾಫಿ ಡೇ ಮಾಲಿಕ ವಿ.ಜಿ.ಸಿದ್ಧಾರ್ಥ ಅವರ ಸಾವಿನ ಕುರಿತು ಸಿಬಿಐ ತನಿಖೆ ನಡೆಸಬೇಕು ಹಾಗೂ ತೆರಿಗೆ ವಿಚಾರಣೆ ವೇಳೆ ಕಿರುಕುಳ ನೀಡಿದ ಐಟಿ, ಇಡಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ವಕೀಲರ ಸಂಘ ಆಗ್ರಹಿಸಿದೆ.

ನಗರದ ಆನಂದರಾವ್‌ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗ ಗುರುವಾರ ನಡೆಸಿದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌, ಸಾವಿರಾರು ಕೋಟಿ ರುಪಾಯಿ ಮೋಸ ಮಾಡಿರುವ ಗುಜರಾತಿನ ವಜ್ರದ ವ್ಯಾಪಾರಿಗಳು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿ ಉದ್ಯಮ ಮಾಡುತ್ತಿದ್ದ ಸಿದ್ಧಾರ್ಥ ಅವರಿಗೆ ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಿರುಕುಳ ನೀಡಿರುವುದು ಖಂಡನೀಯ ಎಂದರು.

ರಾಜ್ಯದ 50 ಸಾವಿರಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ ನೀಡಿ ರಾಜ್ಯದ ಕಾಫಿ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿ ನಡೆಸುತ್ತಿದ್ದ ಸಿದ್ಧಾರ್ಥ ಅವರ ಸಾವು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬರ ಸಾವು ಸಂಭವಿಸಿ ಡೆತ್‌ ನೋಟ್‌ ಬರೆದಿಟ್ಟರೆ, ಸಂಬಂಧಪಟ್ಟವ್ಯಕ್ತಿಗಳ ಮೇಲೆ ಎಫ್‌ಐಆರ್‌ ದಾಖಲಿಸುವ ಪೊಲೀಸ್‌ ಇಲಾಖೆ, ಸಿದ್ಧಾರ್ಥ ಸಾವು ಸಂಭವಿಸಿ ಮೂರು ದಿನಗಳು ಕಳೆದಿದ್ದರೂ ಇಲ್ಲಿಯವರೆಗೂ ಯಾರೊಬ್ಬರ ಮೇಲೂ ಪ್ರಕರಣ ದಾಖಲಿಸದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರಯ್ಯ ಮಾತನಾಡಿ, ಒಂದೆಡೆ ಉದ್ಯಮಿಗಳು ಬೆಳೆಯಬೇಕು ಎಂಬ ಉದ್ದೇಶದಿಂದ ಪ್ರೋತ್ಸಾಹ ನೀಡುವ ಸರ್ಕಾರ ಮತ್ತೊಂದೆಡೆ, ತೆರಿಗೆ ಅಧಿಕಾರಿಗಳ ಮೂಲಕ ಮಾನಸಿಕ ಹಿಂಸೆ ನೀಡುತ್ತಿರುವುದು ಮತ್ತು ಬ್ಲ್ಯಾಕ್‌ಮೇಲ್‌ ತಂತ್ರ ಅನುಸರಿಸಿ ಮಾನಸಿಕವಾಗಿ ಕುಗ್ಗಿಸಲಾಗುತ್ತಿದೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಿರಿಯ ವಕೀಲ ಅಮೃತೇಶ್‌ ಮಾತನಾಡಿ, ಸಿದ್ಧಾರ್ಥ ಅವರ ಸಾವಿನ ಹಿಂದೆ ದೊಡ್ಡ ಜಾಲ ಇದೆ. ರಾಜ್ಯದಲ್ಲಿ ಕಾಫಿಯನ್ನು ದೊಡ್ಡ ಉದ್ಯಮವಾಗಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಅವರಿಗೆ ಅಧಿಕಾರಿಗಳ ಮಾನಸಿಕ ಕಿರುಕುಳ ಹಾಗೂ ಲೇವಾದೇವಿದಾರರ ಒತ್ತಡದಿಂದ ಸಾವು ಸಂಭವಿಸಿರಬಹುದು. ಹೀಗಾಗಿ, ಡೆತ್‌ ನೋಟ್‌ ಆಧಾರದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿದರೆ ನಿಜಾಂಶ ಬೆಳಕಿಗೆ ಬರಲಿದೆ ಎಂದು ಒತ್ತಾಯಿಸಿದರು. ಈ ವೇಳೆ ಸಂಘದ ಹಲವು ಪದಾಧಿಕಾರಿಗಳು ಪಾಲ್ಗೊಂಡಿದ್ದರು.

click me!