ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮುಂದುವರಿದ ಮಳೆ ಅಬ್ಬರ | ಕೃಷ್ಣಾ ನದಿಯಲ್ಲಿ ಹರಿಯುವ ನೀರಿನ ಪ್ರಮಾಣ ಇನ್ನಷ್ಟುಜಾಸ್ತಿ | ಬೆಳಗಾವಿ, ಬಾಗಲಕೋಟೆ, ರಾಯಚೂರು ಜಿಲ್ಲೆಯ ವಿವಿಧೆಡೆ ಪ್ರವಾಹ ಭೀತಿ
ಬೆಂಗಳೂರು (ಆ. 02): ರಾಜ್ಯಾದ್ಯಂತ ಮಳೆ ಗುರುವಾರ ಕ್ಷೀಣವಾಗಿದ್ದರೂ, ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಪರಿಣಾಮ ಕೃಷ್ಣಾ ನದಿಯಲ್ಲಿ ಹರಿಯುವ ನೀರಿನ ಪ್ರಮಾಣ ಇನ್ನಷ್ಟುಜಾಸ್ತಿಯಾಗಿದೆ. ಪರಿಣಾಮ ಬೆಳಗಾವಿ, ಬಾಗಲಕೋಟೆ, ರಾಯಚೂರು ಜಿಲ್ಲೆಯ ವಿವಿಧೆಡೆ ಪ್ರವಾಹ ಭೀತಿ ಎದುರಾಗಿದೆ.
ಚಿಕ್ಕೋಡಿ, ಅಥಣಿ ಹಾಗೂ ರಾಯಬಾಗ ತಾಲೂಕಿನ 14 ಸೇತುವೆ ಜಲಾವೃತವಾಗಿವೆ. ಚಿಕ್ಕೋಡಿ ತಾಲೂಕಾಡಳಿತ ಎರಡು ಬೋಟ್‌ಗಳ ಮೂಲಕ 25 ಕುಟುಂಬಗಳನ್ನು ಸ್ಥಳಾಂತರ ಮಾಡಿದೆ.
ಯುವಕನ ರಕ್ಷಣೆ:
ಚಿಕ್ಕೋಡಿ ತಾಲೂಕಿನ ಇಂಗಳಿ ಹತ್ತಿರ ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇಂಗಳಿ ಗ್ರಾಮದ ಮಳಿ ಭಾಗದ ತೋಟಪಟ್ಟಿಪ್ರದೇಶದ ಹಿನ್ನೀರಿನಲ್ಲಿ ಗಜಾನನ ಕೋಳಿ ಎಂಬ ವ್ಯಕ್ತಿ ನದಿ ಹಿನ್ನೀರಿನ ರಭಸಕ್ಕೆ ಕೊಚ್ಚಿಹೋಗುತ್ತಿರುವುದನ್ನು ನೋಡಿದ ಸ್ಥಳೀಯರು ತಕ್ಷಣ ಧಾವಿಸಿ ರಕ್ಷಿಸಿದ್ದಾರೆ.
ಪ್ರವಾಹ ಭೀತಿ:
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿಯೂ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ಸುಮಾರು 22 ಗ್ರಾಮಗಳು (ನದಿದಡ) ಪ್ರವಾಹ ಭೀತಿಯಲ್ಲಿವೆ. ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗವಾದ ಕುಡಚಿ ಸೇತುವೆ ಮೇಲೆ 10 ಅಡಿಯಷ್ಟುನೀರು ನಿಂತಿದ್ದರಿಂದ ಮಹಾರಾಷ್ಟ್ರಕ್ಕೆ ತೆರಳುವ ಜಮಖಂಡಿ-ಅಥಣಿ ಸಂಚಾರ ಸ್ಥಗಿತವಾಗಿದೆ. ವಿಜಯಪುರದಲ್ಲಿ ಸುಮಾರು 100 ಎಕರೆ ಜಮೀನಿಗೆ ನೀರು ನುಗ್ಗಿದೆ.
ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುತ್ತಿರುವುದರಿಂದ ರಾಯಚೂರು ಜಿಲ್ಲೆಯ ದೇವದುರ್ಗ, ಲಿಂಗಸುಗೂರು ಮತ್ತು ರಾಯಚೂರು ತಾಲೂಕುಗಳ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಮೇಲೆ ನದಿ ನೀರು ಹರಿಯುತ್ತಿರುವದರಿಂದ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಉಳಿದಂತೆ ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಧಾರವಾಡ, ಚಿಕ್ಕಮಗಳೂರು ಭಾಗದಲ್ಲಿ ಆಗಾಗ ಜಿಟಿ ಜಿಟಿ ಮಳೆಯಾಗಿದೆ.
ತಪ್ಪಿ ದೊಡ್ಡ ಅನಾಹುತ:
ಮಳೆಯಿಂದಾಗಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ (ಎಆರ್‌ಟಿಒ) ಕಚೇರಿ ಆವರಣದ ಗೋಡೆ ಕುಸಿದು ಬಿದ್ದಿದೆ. ಪಕ್ಕದಲ್ಲೇ ಕಾರ್ಮೆಲ್ ವಿದ್ಯಾವಿಕಾಸ ಆಂಗ್ಲಮಾಧÜ್ಯಮ ಶಾಲೆ ಇದ್ದು, ಅದೃಷ್ಟಾವಶಾತ್ ರಜೆ ಘೋಷಿಸಿರುವುದರಿಂದ ದೊಡ್ಡ ಅನುಹುತ ತಪ್ಪಿದೆ.