
ನವದೆಹಲಿ(ಜೂ.01): ಗಣಿತ ಎಂಬುದು ಕಬ್ಬಿಣದ ಕಡಲೆ ಎಂದು ದೂರುವ ವಿದ್ಯಾರ್ಥಿಗಳಿಗಾಗಿ ಪರಿಹಾರವೊಂದನ್ನು ಹುಡುಕಲು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ಇ) ಮುಂದಾಗಿದೆ. ಉನ್ನತ ಶಿಕ್ಷಣದಲ್ಲಿ ಗಣಿತ ವ್ಯಾಸಂಗ ಮಾಡುವ ಉದ್ದೇಶವಿಲ್ಲದ ವಿದ್ಯಾರ್ಥಿಗಳಿಗಾಗಿ ‘ಸುಲಭ’ ಹಾಗೂ ಗಣಿತವನ್ನೊಳಗೊಂಡ ಉನ್ನತ ಶಿಕ್ಷಣದ ಮೊರೆ ಹೋಗುವವರಿಗಾಗಿ ‘ಕಠಿಣ’ ಪ್ರಶ್ನೆಪತ್ರಿಕೆ ರೂಪಿಸಬೇಕೆಂಬ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಶೀಲಿಸುತ್ತಿದೆ.
ದೇಶದ ವಿವಿಧ ಶಾಲೆಗಳು ಹಾಗೂ ಪ್ರಾಂಶುಪಾಲರ ಮನವಿಯನ್ನು ಸ್ವೀಕರಿಸಿರುವ ಸಿಬಿಎಸ್ಇ, 9, 10, 11 ಹಾಗೂ 12ನೇ ತರಗತಿಯ ಗಣಿತ ಪರೀಕ್ಷೆ ವೇಳೆ ಎರಡು ರೀತಿಯ ಪ್ರಶ್ನೆ ಪತ್ರಿಕೆಗಳನ್ನು ರೂಪಿಸುವ ಕುರಿತು ಆಲೋಚನೆಯಲ್ಲಿ ತೊಡಗಿದೆ ಎಂದು ಮೂಲಗಳು ತಿಳಿಸಿವೆ.
ವೈದ್ಯಕೀಯ ಹಾಗೂ ಅರ್ಥಶಾಸ್ತ್ರದಂತಹ ಕೋರ್ಸ್ಗಳನ್ನು ಉನ್ನತ ಶಿಕ್ಷಣದಲ್ಲಿ ಕಲಿಯಬೇಕು ಎಂಬ ಉದ್ದೇಶ ಹೊಂದಿರುವವರಿಗೆ ಅತ್ಯುನ್ನತ ದರ್ಜೆಯ ಗಣಿತ ವ್ಯಾಸಂಗದ ಅಗತ್ಯವಿರುವುದಿಲ್ಲ. ಆದರೂ ಪ್ರೌಢಶಾಲಾ ಹಂತದಲ್ಲಿ ಒಂದೇ ರೀತಿಯ ಪ್ರಶ್ನೆಪತ್ರಿಕೆಗಳನ್ನು ರೂಪಿಸಲಾಗುತ್ತಿರುವುದರಿಂದ, ಗಣಿತದ ಬಗ್ಗೆ ಆಸಕ್ತಿ ಇಲ್ಲದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಬೇರೆಲ್ಲ ವಿಷಯಗಳಲ್ಲಿ ಉತ್ತಮ ಅಂಕ ಗಳಿಸಿದರೂ, ಗಣಿತದಲ್ಲಿ ಪಡೆಯುವ ಕಡಿಮೆ ಅಂಕಗಳಿಂದಾಗಿ ಅವರ ಒಟ್ಟಾರೆ ಸಾಧನೆಯೇ ತಗ್ಗುತ್ತಿದೆ. ಹೀಗಾಗಿ ಎರಡು ರೀತಿಯ ಪ್ರಶ್ನೆ ಪತ್ರಿಕೆಗಳನ್ನು ಪ್ರೌಢಶಾಲಾ ಹಂತದಲ್ಲಿ ರೂಪಿಸುವ ಕುರಿತು ಸಿಬಿಎಸ್ಇ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಈ ಕ್ರಮಕ್ಕೆ ಶಿಕ್ಷಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಎರಡು ರೀತಿಯ ಪ್ರಶ್ನೆಪತ್ರಿಕೆ ರೂಪಿಸಬೇಕೆಂದರೆ ಎರಡು ಪಠ್ಯಕ್ರಮವನ್ನೇ ಸಿದ್ಧಪಡಿಸಬೇಕಾಗುತ್ತದೆ ಎಂದು ಈ ವಿಷಯದ ಬಗ್ಗೆ ಮಾಹಿತಿ ಇರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.