ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ ರಾಜ್ಯ ಸರ್ಕಾರ..?

First Published Jun 24, 2018, 7:30 AM IST
Highlights

ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿ ರಚನೆ ವಿಷಯವು ಕರ್ನಾಟಕ, ತಮಿಳುನಾಡು ಹಾಗೂ ಕೇಂದ್ರ ಸರ್ಕಾರದ ನಡುವೆ ಇನ್ನೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಬೆಂಗಳೂರು : ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿ ರಚನೆ ವಿಷಯವು ಕರ್ನಾಟಕ, ತಮಿಳುನಾಡು ಹಾಗೂ ಕೇಂದ್ರ ಸರ್ಕಾರದ ನಡುವೆ ಇನ್ನೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಈ ಸಂಬಂಧ ಕರ್ನಾಟಕವು ಸರ್ವೋಚ್ಚ ನ್ಯಾಯಾಲಯದ ಕದ ಬಡಿಯುವ ಬಗ್ಗೆ ಚರ್ಚೆ ನಡೆಸಿದೆ.

ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಪ್ರಾಧಿಕಾರ ಹಾಗೂ ಸಮಿತಿ ರಚನೆಯಾಗಿರುವುದರಿಂದ ಕೂಡಲೇ ರಾಜ್ಯದ ಪ್ರತಿನಿಧಿಗಳ ನೇಮಕ ಮಾಡುವ ಮೂಲಕ ಸರ್ಕಾರವು ಕೇಂದ್ರದ ಆದೇಶ ಪಾಲನೆ ಮಾಡಲಿದೆ. ಆದರೆ ಇದರ ಜತೆಜತೆಗೇ, ಸುಪ್ರೀಂ ಕೋರ್ಟ್‌ನಲ್ಲಿ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸುವ ಬಗ್ಗೆಯೂ ಸಿದ್ಧತೆ ನಡೆಸಿದ್ದು ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯ ಅಡ್ವೊಕೇಟ್‌ ಜನರಲ್‌ ಉದಯ್‌ ಹೊಳ್ಳ ಅವರೊಂದಿಗೆ ಶನಿವಾರ ಮಾತುಕತೆ ನಡೆಸಿದ್ದಾರೆ.

ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ, ಯಾವುದೇ ಕಾರಣಕ್ಕೂ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ರಚನೆ ಮಾಡಬಾರದು. ನ್ಯಾಯಾಧಿಕರಣ ಹಾಗೂ ನ್ಯಾಯಾಲಯದ ಆದೇಶದ ಅನುಗುಣವಾಗಿ ನೀರು ಬಿಡಲು ನಾವು ಸಿದ್ಧವಿದ್ದೇವೆ. ಮತ್ತು ನೀರು ಲಭ್ಯವಿರುವ ಪ್ರತಿ ಸಮಯದಲ್ಲೂ ನೀರು ಬಿಡುಗಡೆ ಮಾಡಿದ್ದೇವೆ. ಪ್ರಾಧಿಕಾರ ರಚನೆಯಿಂದ ನೀರು ಇಲ್ಲದಿರುವಾಗಲೂ ನೀರು ಬಿಡುಗಡೆಗೆ ಒತ್ತಡ ಹೇರಬಹುದು. ಇದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂದು ವಾದ ಮಂಡಿಸಿತ್ತು. ಆದರೂ, ಪ್ರಾಧಿಕಾರ ರಚನೆಗೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಇದೀಗ ಪ್ರಾಧಿಕಾರ ರಚನೆಯಾಗಿರುವುದರಿಂದ ರಾಜ್ಯಕ್ಕೆ ಅನ್ಯಾಯವಾಗಲಿದೆ ಎಂಬ ಕಾರಣ ನೀಡಿ ಸುಪ್ರೀಂ ಕೋರ್ಟ್‌ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಅಡ್ವೊಕೇಟ್‌ ಜನರಲ್‌ ಸಲಹೆ ನೀಡಿದರು ಎಂದು ತಿಳಿದುಬಂದಿದೆ. ಇದನ್ನು ಉದಯ್‌ ಹೊಳ್ಳ ಅವರೂ ಖಚಿತಪಡಿಸಿದ್ದಾರೆ. ಆದರೆ, ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

ಪುನರ್‌ಪರಿಶೀಲನಾ ಅರ್ಜಿ ಸಲ್ಲಿಕೆ ಬಗ್ಗೆ ಚರ್ಚೆ

ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಸಮಿತಿ ರಚನೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪುನರ್‌ ಪರಿಶೀಲನೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದು, ಈ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ.

- ಉದಯ್‌ಹೊಳ್ಳ, ರಾಜ್ಯ ಅಡ್ವೊಕೇಟ್‌ ಜನರಲ್‌

click me!