
ನವದೆಹಲಿ(ಮೇ.09): ನ್ಯಾಯಾಂಗ ನಿಂದನೆ ಆರೋಪದ ಮೇಲೆ ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರಿಗೆ ಸುಪ್ರಿಂಕೋರ್ಟ್ 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆ ಪ್ರಕಟವಾಗಿರುವ ಕಾರಣದಿಂದ ಕರ್ಣನ್ ಶೀಘ್ರದಲ್ಲಿಯೇ ಬಂಧನ ಸಾಧ್ಯತೆಯಿದೆ.ಹಾಲಿ ನ್ಯಾಯಮೂರ್ತಿಯೊಬ್ಬರಿಗೆ ಸುಪ್ರಿಂ ಕೋರ್ಟ್ ಜೈಲು ಶಿಕ್ಷೆ ವಿಧಿಸಿದ್ದು ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿಯಾಗಿದೆ.
ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಕಲ್ಕತಾ ಹೈಕೋರ್ಟ್‌ನ ನ್ಯಾಯ ಮೂರ್ತಿ ಸಿ.ಎಸ್. ಕರ್ಣನ್, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೇರಿದಂತೆ 8 ನ್ಯಾಯಾಧೀಶರಿಗೆ ತಲಾ 5 ವರ್ಷ ಜೈಲು ಮತ್ತು ತಲಾ 3 ಲಕ್ಷ ರು. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದ್ದರು.
ತಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಾಂವಿಧಾನಿಕ ಪೀಠದ ಸದಸ್ಯರಾದ ಸಿಜೆಐ ಜೆ.ಎಸ್. ಖೇಹರ್, ನ್ಯಾ.ದೀಪಕ್ ಮಿಶ್ರಾ, ನ್ಯಾ. ಚಲಮೇಶ್ವರ್, ನ್ಯಾ. ರಂಜನ್ ಗೊಗೋಯ್, ನ್ಯಾ. ಮದನ್ ಬಿ.ಲೋಕೂರ್, ನ್ಯಾ. ಪಿಂಕಿ ಚಂದ್ರ ಘೋಸೆ ಮತ್ತು ನ್ಯಾ. ಕುರಿಯನ್ ಜೋಸೆಫ್ ಮತ್ತು ತಾವು ನ್ಯಾಯಾಲಯದಲ್ಲಿ ಯಾವುದೇ ಕಾರ್ಯಭಾರ ನಡೆಸದಂತೆ ಇತ್ತೀಚೆಗೆ ಆದೇಶ ಹೊರಡಿಸಿದ್ದರು.
ಕರ್ಣನ್ ತಮ್ಮ ಮನೆಯಲ್ಲೇ ಪ್ರಕರಣದ ವಿಚಾರಣೆ ನಡೆಸಿ ಆದೇಶ ಹೊರಡಿಸಿರುವುದಾಗಿ ನ್ಯಾ.ಕರ್ಣನ್ ಹೇಳಿದ್ದರು. ಮೇಲ್ಕಂಡ ಎಲ್ಲಾ ನ್ಯಾಯಾಧೀಶರು, ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಗ್ರಹ ಕಾಯ್ದೆ ಮತ್ತು 2015ರ ತಿದ್ದುಪಡಿ ಕಾಯ್ದೆಯ ಅನ್ವಯ ಜಂಟಿಯಾಗಿ ತಪ್ಪು ಎಸಗಿದ್ದಾರೆ ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದರು. ಆದರೆ ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್, ನ್ಯಾ. ಕರ್ಣನ್ ಅವರಿಗೆ ನ್ಯಾಯಾಲಯದಲ್ಲಿ ಯಾವುದೇ ಕಲಾಪ ನಡೆಸದಂತೆ ಸೂಚಿಸಿತ್ತು ಮತ್ತು ಅವರ ಯಾವುದೇ ಆದೇಶಗಳನ್ನು ಪಾಲಿಸದಂತೆ ಅಧಿಕಾರಿಗಳಿಗೆ ಸೂಚಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.