
ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ ಕಂಡ ಬಗ್ಗೆ ಕಾಂಗ್ರೆಸ್ನ ಸಚಿವ ಸ್ಥಾನಾಕಾಂಕ್ಷಿಗಳಲ್ಲಿ ಅಸಮಾಧಾನ ಮಡುಗಟ್ಟಿದೆ. ಈ ಅತೃಪ್ತಿಗೆ ಪ್ರಮುಖ ನಾಯಕ ಹಾಗೂ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಮತ್ತು ಕಂಪ್ಲಿ ಶಾಸಕ ಗಣೇಶ್ ಅವರು ಧ್ವನಿಯಾಗಿದ್ದಾರೆ. ಸಮನ್ವಯ ಸಮಿತಿ ಡಿ. 22ಕ್ಕೆ ಸಂಪುಟ ವಿಸ್ತರಣೆಯ ಮಹೂರ್ತ ನಿಗದಿ ಪಡಿಸಿರುವುದು ಕೇವಲ ಕಣ್ಣೊರೆಸುವ ತಂತ್ರ. ಲೋಕಸಭಾ ಚುನಾವಣೆವರೆಗೂ ಸಂಪುಟ ವಿಸ್ತರಣೆಯಾಗುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಹಾಗೂ ಗಣೇಶ್ ಭವಿಷ್ಯ ನುಡಿದಿದ್ದು, ಅಚ್ಚರಿ ಮೂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಡಿ.22ರಂದು ಸಂಪುಟ ವಿಸ್ತರಣೆ ಸಾಧ್ಯವೇ ಇಲ್ಲ. ಶೂನ್ಯ ಮಾಸದಲ್ಲಿ ವಿಸ್ತರಣೆ ನಡೆಯುವುದಿಲ್ಲ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದುವರೆಗೂ 10ಕ್ಕೂ ಹೆಚ್ಚಿನ ಬಾರಿ ಸಂಪುಟ ವಿಸ್ತರಣೆಯನ್ನು ಮುಂದೂಡಲಾಗಿದೆ. ನೇರವಾಗಿ ಸಂಸತ್ ಚುನಾವಣೆವರೆಗೂ ಸಂಪುಟ ವಿಸ್ತರಣೆ ಮಾಡುವುದಿಲ್ಲ ಎಂದಾದರೂ ಹೇಳಿದರೆ, ಶಾಸಕರು ತಮ್ಮ ಕ್ಷೇತ್ರಗಳ ಕೆಲಸವನ್ನಾದರೂ ನೋಡಬಹುದು ಎಂದರು.
ಏತನ್ಮಧ್ಯೆ ಸಂಪುಟ ವಿಸ್ತರಣೆ ಮುಂದೂಡಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಂಪ್ಲಿ ಶಾಸಕ ಗಣೇಶ ಅವರು, ‘22ಕ್ಕೆ ಮಹೂರ್ತ ಎಂಬುದೆಲ್ಲ ಕಣ್ಣೊರೆಸುವ ತಂತ್ರ. ನನ್ನ ಪ್ರಕಾರ ಲೋಕಸಭಾ ಚುನಾವಣೆ ಮುಗಿಯುವವರೆಗೂ ಸಂಪುಟ ವಿಸ್ತರಣೆಯಾಗುವುದಿಲ್ಲ’ ಎಂದರು.
ಬ್ರಾಹ್ಮಣರಿಗೇ ಹೆಚ್ಚು ಅಧಿಕಾರ- ಅತೃಪ್ತಿ:
ಕಾಂಗ್ರೆಸ್ನ ಹಿರಿಯ ಶಾಸಕರನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಾಮಲಿಂಗಾರೆಡ್ಡಿ ಅವರು, ಮಂತ್ರಿ ಸ್ಥಾನವನ್ನು ಜಾತಿ ಆಧಾರದ ಮೇಲೆ ಪರಿಗಣಿಸಬಾರದು. ಹಿರಿತನ, ಅರ್ಹತೆ ನೋಡಿ ನೀಡಬೇಕು ಎಂಬುದನ್ನು ಮೊದಲಿನಿಂದಲೂ ಹೇಳಿಕೊಂಡಿಯೇ ಬಂದಿದ್ದೇನೆ. ಆದರೆ, ಸಚಿವ ಸ್ಥಾನ ನೀಡುವಾಗ ಜಾತಿಗೆ ಇಂತಿಷ್ಟೇ ಎಂದು ಕೆಲ ಜಾತಿಯ ಹಿರಿಯರನ್ನು ಪಕ್ಕಕ್ಕೆ ಸರಿಸಲಾಗುತ್ತದೆ. ಆದರೆ, ಬ್ರಾಹ್ಮಣ ಜನಾಂಗದ ನಾಲ್ವರು ಶಾಸಕರ ಪೈಕಿ ಕೆ.ಆರ್. ರಮೇಶ್‌ಕುಮಾರ್ ಸ್ಪೀಕರ್ ಆಗಿದ್ದಾರೆ. ದಿನೇಶ್ ಗುಂಡೂರಾವ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಆರ್.ವಿ. ದೇಶಪಾಂಡೆ ಸಚಿವರಾಗಿದ್ದಾರೆ. ಅಂದರೆ, ನಾಲ್ವರಲ್ಲಿ ಮೂವರು ಅಧಿಕಾರ ಪಡೆದಿದ್ದಾರೆ. ಈ ನೀತಿ ಉಳಿದ ಜಾತಿಯವರಿಗೆ ಏಕೆ ಅನುಸರಿಸುವುದಿಲ್ಲ ಎಂದು ಪ್ರಶ್ನಿಸಿದರು.
ಇನ್ನು ಹೊಸಬರಿಗೆ ಅವಕಾಶ ಕಲ್ಪಿಸಬೇಕು ಎಂಬ ಕಾರಣಕ್ಕೆ ಕೆಲವು ಹಿರಿಯ ನಾಯಕರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಸಬೂಬು ನೀಡಲಾಗುತ್ತಿದೆ. ಆದರೆ, ಈ ಸರ್ಕಾರದಲ್ಲಿ ದೇಶಪಾಂಡೆ, ಜಾಜ್‌ರ್ ಹಾಗೂ ಪರಮೇಶ್ವರ್ರಂತಹ ಹಿರಿಯ ನಾಯಕರು ಸಚಿವರಾಗಿಲ್ಲವೇ ಎಂದು ಅವರು ಪ್ರಶ್ನಿಸಿದರು.
1973ರಲ್ಲಿ ಪಕ್ಷ ಸೇರಿದ್ದು, ಕಾಲೇಜು ದಿನಗಳಿಂದಲೂ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ. ನಾನು 7 ಬಾರಿ ಶಾಸಕನಾಗಿದ್ದೇನೆ. ಎಂದಿಗೂ ಸಚಿವರಾಗಿ ಮಾಡಿ ಎಂದು ಕೇಳಿಕೊಂಡಿಲ್ಲ. ವೀರಪ್ಪ ಮೊಯ್ಲಿ, ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ ಸೇರಿದಂತೆ ಯಾರನ್ನೂ ಕೇಳಿಲ್ಲ. ಈಗಲೂ ಕೇಳುವುದಿಲ್ಲ. ಸಚಿವ ಸ್ಥಾನ ನೀಡಿದರೆ ಕೆಲಸ ಮಾಡುತ್ತೇನೆ. ಇಲ್ಲದಿದ್ದರೆ, ನನ್ನ ಕ್ಷೇತ್ರವನ್ನು ನೋಡಿಕೊಂಡು ಹೋಗುತ್ತೇನೆ. ಆದರೆ, ತಾರತಮ್ಯ ನೀತಿ ಹಾಗೂ ಹಿರಿಯರನ್ನು ಕಡೆಗಣಿಸುವ ಧೋರಣೆ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.