
ನವದೆಹಲಿ[ಡಿ.07]: ತನ್ನ ನೌಕರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರಿ ನೌಕರರ ರಾಷ್ಟ್ರೀಯ ಪಿಂಚಣಿ (ಎನ್‌ಪಿಎಸ್) ಯೋಜನೆಯಲ್ಲಿನ ತನ್ನ ಪಾಲನ್ನು ಶೇ.14ಕ್ಕೆ ಹೆಚ್ಚಿಸಲು ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಆದರೆ ನೌಕರರ ಪಾಲು ಈ ಹಿಂದಿನಂತೆ ಶೇ.10ರಷ್ಟೇ ಇರಲಿದೆ. ಸದ್ಯ ಪಂಚ ರಾಜ್ಯಗಳ ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿರುವ ಕಾರಣ, ಸರ್ಕಾರ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಮೂಲಗಳ ಪ್ರಕಾರ 2019ರ ಜ.1ರಿಂದ ಹೊಸ ಯೋಜನೆ ಜಾರಿಗೆ ಬರಲಿದೆ.
ಇದೇ ವೇಳೆ ನಿವೃತ್ತಿಯ ವೇಳೆಗೆ ಎನ್‌ಪಿಎಸ್‌ನಲ್ಲಿ ಸಂಗ್ರಹವಾಗಿರುವ ಒಟ್ಟು ಹಣದ ಪೈಕಿ ಶೇ.60ರಷ್ಟುಹಿಂದಕ್ಕೆ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. ಇದುವರೆಗೆ ಈ ಪ್ರಮಾಣ ಶೇ.40ರಷ್ಟಿತ್ತು. ಒಂದು ವೇಳೆ ಉದ್ಯೋಗಿಯೊಬ್ಬರು ತನ್ನ ನಿವೃತ್ತಿ ಬಳಿಕವೂ ಪೂರ್ತಿ ಹಣವನ್ನು ಪಿಂಚಣಿ ನಿಧಿಯಲ್ಲಿಯೇ ಉಳಿಸಿದ್ದರೆ, ಆತ ನಿವೃತ್ತಿ ವೇಳೆ ಪಡೆದ ವೇತನದ ಅರ್ಧಕ್ಕಿಂತಲೂ ಹೆಚ್ಚು ಹಣವನ್ನು ಆತ ಪಿಂಚಣಿ ರೂಪದಲ್ಲಿ ಪಡೆಯಲಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಇನ್ನೊಂದೆಡೆ ಉದ್ಯೋಗಿಯೊಬ್ಬ ಎನ್‌ಪಿಎಸ್‌ಗೆ ತಾನು ಪಾವತಿಸುವ ಶೇ.10ರಷ್ಟುಪಾಲಿಗೆ ಇನ್ನು ಮುಂದೆ 80ಸಿ ಕಾಯ್ದೆಯಡಿ ತೆರಿಗೆ ರಿಯಾಯಿತಿ ಪಡೆಯುವ ಅವಕಾಶವನ್ನೂ ಸರ್ಕಾರ ಕಲ್ಪಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ