16ನೇ ಲೋಕಸಭೆ ವಿಸರ್ಜನೆಗೆ ಕೇಂದ್ರ ಸಚಿವ ಸಂಪುಟ ಶಿಫಾರಸು

By Web DeskFirst Published May 25, 2019, 9:50 AM IST
Highlights

16ನೇ ಲೋಕಸಭೆ ವಿಸರ್ಜನೆಗೆ ಕೇಂದ್ರ ಸಚಿವ ಸಂಪುಟ ಶಿಫಾರಸು| ಮೋದಿ ಮಂತ್ರಿ ಮಂಡಲದಿಂದ ಸಾಮೂಹಿಕ ರಾಜೀನಾಮೆ| ಹೊಸ ಸರ್ಕಾರ ರಚನೆಗೆ ಹಾದಿ ಸುಗಮ

ನವದೆಹಲಿ[ಮೇ.25]: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ನೂತನ ಲೋಕಸಭೆ ಹಾಗೂ ಸರ್ಕಾರ ರಚನೆಗೆ ಹಾದಿ ಸುಗಮಗೊಳಿಸಲು 16ನೇ ಲೋಕಸಭೆ ವಿಸರ್ಜನೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಕೇಂದ್ರ ಮಂತ್ರಿ ಮಂಡಲದ ಎಲ್ಲ ಸದಸ್ಯರೂ ರಾಜೀನಾಮೆ ಸಲ್ಲಿಸಿದ್ದಾರೆ.

16ನೇ ಲೋಕಸಭೆ ಅವಧಿ ಜೂ.3ರವರೆಗೂ ಇದೆ. ಅದನ್ನು ವಿಸರ್ಜಿಸಿದರೆ ಮಾತ್ರ ಜೂ.3ರೊಳಗೆ ಹೊಸ ಲೋಕಸಭೆ ಅಸ್ತಿತ್ವಕ್ಕೆ ಬರಲಿದೆ. ಅವಧಿ ಪೂರೈಸಿದ ಒಂದು ಸರ್ಕಾರ ಮತ್ತೊಂದು ಅವಧಿಗೆ ಆಯ್ಕೆಯಾದರೂ ರಾಜೀನಾಮೆ ಕೊಟ್ಟು ಹೊಸದಾಗಿ ಅಧಿಕಾರ ಸ್ವೀಕರಿಸಬೇಕಾಗುತ್ತದೆ. ಹೀಗಾಗಿ ಕೇಂದ್ರ ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ.

ಕೇಂದ್ರ ಮಂತ್ರಿಮಂಡಲದಲ್ಲಿ ಮೋದಿ ಹೊರತುಪಡಿಸಿ ಸಂಪುಟ ದರ್ಜೆ, ಸ್ವತಂತ್ರ ಖಾತೆ ಹಾಗೂ ರಾಜ್ಯ ಸಚಿವರು ಸೇರಿದಂತೆ 60 ಮಂತ್ರಿಗಳು ಇದ್ದಾರೆ. ಈ ನಡುವೆ, ಈ ಎಲ್ಲ ಸಚಿವರಿಗೂ ಶುಕ್ರವಾರ ರಾತ್ರಿ ರಾಷ್ಟ್ರಪತಿಗಳು ಔತಣ ನೀಡಿದ್ದಾರೆ.

ಕೇಂದ್ರ ಸಚಿವ ಸಂಪುಟದ ಶಿಫಾರಸು ಆಧರಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಲೋಕಸಭೆಯನ್ನು ವಿಸರ್ಜಿಸಲಿದ್ದಾರೆ. ಈ ನಡುವೆ ಮೋದಿ ರಾಜೀನಾಮೆ ಅಂಗೀಕರಿಸಿರುವ ರಾಷ್ಟ್ರಪತಿ, ಮುಂದಿನ ಸರ್ಕಾರ ರಚನೆ ಆಗುವವರೆಗೂ ಹಂಗಾಮಿಯಾಗಿ ಮುಂದುವರಿಯಲು ಹಾಲಿ ಸರ್ಕಾರಕ್ಕೆ ಸೂಚಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಮೂವರೂ ಆಯುಕ್ತರು ರಾಷ್ಟ್ರಪತಿಗಳನ್ನು ಭೇಟಿಯಾಗಿ ನೂತನವಾಗಿ ಆಯ್ಕೆಯಾದ ಲೋಕಸಭಾ ಸದಸ್ಯರ ಪಟ್ಟಿಹಸ್ತಾಂತರ ಮಾಡಿದ ಬಳಿಕ ಲೋಕಸಭೆ ರಚನೆಗೆ ಪ್ರಕ್ರಿಯೆ ಪ್ರಾರಂಭವಾಗಲಿದೆ.

click me!