
ಬೆಂಗಳೂರು : ಸಚಿವ ಸಂಪುಟ ವಿಸ್ತರಣೆಯ ಕಾಂಗ್ರೆಸ್ ಪಾಲಿನ ಕಸರತ್ತು ಕೊನೆಗೂ ಪೂರ್ಣಗೊಂಡು ಎಚ್.ಡಿ.ಕುಮಾರಸ್ವಾಮಿ ಅವರ ಸಚಿವ ಸಂಪುಟಕ್ಕೆ 8 ಮಂದಿ ಹೊಸ ಸಚಿವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿ ಸೇರ್ಪಡೆಯಾದ ಬೆನ್ನಲ್ಲೇ ಖಾತೆಗಾಗಿ ಕ್ಯಾತೆ ಆರಂಭಗೊಂಡಿದೆ.
ಎರಡು ಅಥವಾ ಎರಡಕ್ಕೂ ಹೆಚ್ಚು ಪ್ರಮುಖ ಖಾತೆಗಳನ್ನು ಹೊಂದಿರುವ ಕಾಂಗ್ರೆಸ್‌ನ ಪ್ರಭಾವಿ ಸಚಿವರು ತಮ್ಮ ಖಾತೆಗಳನ್ನು ಬಿಟ್ಟುಕೊಡಲು ಹಿಂದೇಟು ಹಾಕುತ್ತಿರುವುದು ಮತ್ತು ಹೊಸ ಸಚಿವರು ಪ್ರಮುಖ ಖಾತೆಗಳಿಗೆ ಬೇಡಿಕೆಯಿಟ್ಟಿರುವ ಕಾರಣ ಖಾತೆ ಹಂಚಿಕೆಯ ಕಗ್ಗಂಟು ನಿರ್ಮಾಣವಾಗಿದೆ.
ಈ ಕಗ್ಗಂಟು ನಿವಾರಿಸಲು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮಧ್ಯಸ್ಥಿಕೆಯನ್ನು ರಾಜ್ಯ ನಾಯಕತ್ವ ಕೋರಿದ್ದು, ಸೋಮವಾರದ ವೇಳೆಗೆ ವೇಣುಗೋಪಾಲ್ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಇದು ಇತ್ಯರ್ಥವಾಗಲಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಹೈಕಮಾಂಡ್ನೊಂದಿಗಿನ ಸಮಾಲೋಚನೆ ವೇಳೆ ಯಾರಾರಯರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದಾರೋ ಅವರೆಲ್ಲ ತಮ್ಮ ಹೆಚ್ಚುವರಿ ಖಾತೆಗಳನ್ನು ಬಿಟ್ಟುಕೊಡಬೇಕು. ಅದನ್ನು ಹೊಸ ಸಚಿವರಿಗೆ ಹಂಚುವುದು ಎಂದು ತೀರ್ಮಾನವಾಗಿತ್ತು ಎನ್ನಲಾಗುತ್ತಿದೆ. ಆದರೆ, ಕಾಂಗ್ರೆಸ್‌ನ ಸಚಿವರ ಬಳಿ ಇರುವ ಹೆಚ್ಚುವರಿ ಖಾತೆಗಳ ಸಂಖ್ಯೆ 12 ಇದೆ. ಇದನ್ನು 8 ಸಚಿವರಿಗೆ ಹಂಚಬೇಕಿದೆ. ಹೀಗಾಗಿ ತಮ್ಮ ಹೆಚ್ಚುವರಿ ಖಾತೆಗಳನ್ನು ಉಳಿಸಿಕೊಳ್ಳಲು ಪರಮೇಶ್ವರ್, ಶಿವಕುಮಾರ್, ದೇಶಪಾಂಡೆ, ಕೃಷ್ಣಬೈರೇಗೌಡ ಮೊದಲಾದವರು ಪ್ರಯತ್ನ ನಡೆಸಿದ್ದಾರೆ.
ಆದರೆ, ಹೊಸ ಸಚಿವರಿಗೆ ಈ ಪ್ರಮುಖ ಸಚಿವರ ಬಳಿ ಇರುವ ಹೆಚ್ಚುವರಿ ಖಾತೆಗಳ ಮೇಲೆ ಕಣ್ಣಿದೆ. ಉದಾಹರಣೆಗೆ ಡಾ.ಜಿ. ಪರಮೇಶ್ವರ್ ಬಳಿ ಗೃಹ, ಬೆಂಗಳೂರು ಅಭಿವೃದ್ಧಿ ಹಾಗೂ ಯೋಜನಾ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಂಬ ಮೂರು ಖಾತೆಗಳಿವೆ. ಈ ಪೈಕಿ ಪರಮೇಶ್ವರ್ ಅವರು ಯೋಜನಾ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯನ್ನು ಬಿಟ್ಟುಕೊಡಲು ಸಿದ್ಧರಿದ್ದಾರೆ. ಆದರೆ, ಗೃಹ ಹಾಗೂ ಬೆಂಗಳೂರು ಅಭಿವೃದ್ಧಿ ತಮಗೆ ಇರಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಆದರೆ, ಪರಮೇಶ್ವರ್ ಬಳಿ ಇರುವ ಗೃಹ ಅಥವಾ ಬೆಂಗಳೂರು ಅಭಿವೃದ್ಧಿ ಈ ಎರಡರ ಪೈಕಿ ಒಂದನ್ನು ತಮಗೆ ಬಿಟ್ಟುಕೊಡಬೇಕು ಎಂಬುದು ಹೊಸ ಸಚಿವರ ಆಗ್ರಹ. ಅದೇ ರೀತಿ ಡಿ.ಕೆ.ಶಿವಕುಮಾರ್ ಅವರ ಬಳಿ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಗಳಿವೆ. ಈ ಎರಡರಲ್ಲಿ ಒಂದು ಬಿಟ್ಟುಕೊಡಲಿ ಎಂಬ ಆಗ್ರಹವಿದ್ದರೆ, ಡಿ.ಕೆ. ಶಿವಕುಮಾರ್ ಈ ಖಾತೆಗಳನ್ನು ಬಿಟ್ಟುಕೊಡಲು ಸುತರಾಂ ಒಪ್ಪುತ್ತಿಲ್ಲ. ಇದೇ ರೀತಿ ದೇಶಪಾಂಡೆ ಹಾಗೂ ಕೃಷ್ಣಬೈರೇಗೌಡ ಮೊದಲಾದವರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಈ ಸಚಿವರ ವಾದ- ಕಾಂಗ್ರೆಸ್ ಬಳಿ 12 ಹೆಚ್ಚುವರಿ ಖಾತೆಗಳಿವೆ. ಕಿರಿಯ ಸಚಿವರ ಬಳಿ ಹೆಚ್ಚುವರಿಯಾಗಿರುವ ಒಂದೊಂದು ಖಾತೆಗಳನ್ನು ಪಡೆದರೂ ಎಲ್ಲಾ ಎಂಟು ಸಚಿವರಿಗೆ ಖಾತೆಗಳನ್ನು ನೀಡಬಹುದು. ಪಕ್ಷಕ್ಕೆ ನೀಡಿದ ಕೊಡುಗೆ ಹಾಗೂ ಹಿರಿತನವನ್ನು ಮನ್ನಿಸಿ ತಮಗೆ ಎರಡು ಖಾತೆಗಳನ್ನು ಉಳಿಸಬೇಕು ಎಂಬುದು.
ಹೀಗಾಗಿ ಖಾತೆ ಕಗ್ಗಂಟು ಬಗೆಹರಿಸಲು ರಾಜ್ಯ ನಾಯಕತ್ವ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಮಧ್ಯಸ್ಥಿಕೆ ಅನಿವಾರ್ಯವಾಗಿದ್ದು, ಸೋಮವಾರದ ವೇಳೆಗೆ ಈ ಪ್ರಕ್ರಿಯೆ ನಡೆಯಬೇಕಿದೆ. ಇದಾದ ನಂತರವೇ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
9 ಸಂಸದೀಯ ಕಾರ್ಯದರ್ಶಿಗಳು
ಎ.ಅಬ್ದುಲ್ ಜಬ್ಬಾರ್ (ವಿಧಾನಪರಿಷತ್ ಸದಸ್ಯ), ಅಂಜಲಿ ನಿಂಬಾಳ್ಕರ್ (ಖಾನಾಪುರ ಶಾಸಕಿ), ಐವಾನ್ ಡಿಸೋಜಾ (ವಿಧಾನಪರಿಷತ್ ಸದಸ್ಯ), ಮಹಾಂತೇಶ್.ಎಸ್.ಕೌಜಲಗಿ (ಬೈಲಹೊಂಗಲ ಶಾಸಕ), ರೂಪಾ ಶಶಿಧರ್ (ಕೆಜಿಎಫ್ ಶಾಸಕಿ), ಕೆ. ಗೋವಿಂದರಾಜು (ವಿಧಾನಪರಿಷತ್ ಸದಸ್ಯ), ರಾಘವೇಂದ್ರ ಹಿಟ್ನಾಳ್ (ಕೊಪ್ಪಳ), ಎಂ.ಎ. ಗೋಪಾಲಸ್ವಾಮಿ (ವಿಧಾನಪರಿಷತ್ ಸದಸ್ಯ) ಮತ್ತು ದುರ್ಗಪ್ಪ ಹಲಗೇರಿ (ಲಿಂಗಸುಗೂರು ಶಾಸಕ)
- ಶರಣಬಸಪ್ಪ ದರ್ಶನಾಪುರ (ಶಹಾಪುರ ಶಾಸಕ): ಯೋಜನಾ ಆಯೋಗದ ಉಪಾಧ್ಯಕ್ಷ
- ಅಜಯ್ ಸಿಂಗ್ (ಜೇವರ್ಗಿ ಶಾಸಕ): ದೆಹಲಿ ವಿಶೇಷ ಪ್ರತಿನಿಧಿ
- ವಿ.ಮುನಿಯಪ್ಪ (ಶಿಡ್ಲಘಟ್ಟ ಶಾಸಕ): ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ
1. ಸಿ.ಎಸ್.ಶಿವಳ್ಳಿ (ಕುಂದಗೋಳ ಶಾಸಕ)
2. ತುಕಾರಾಂ (ಸಂಡೂರು ಶಾಸಕ)
3. ಸತೀಶ್ ಜಾರಕಿಹೊಳಿ (ಯಮಕನಮರಡಿ ಶಾಸಕ)
4. ಎಂ.ಬಿ.ಪಾಟೀಲ್ (ಬಬಲೇಶ್ವರ ಶಾಸಕ)
5. ಪಿ.ಟಿ.ಪರಮೇಶ್ವರ್ ನಾಯ್ಕ್ (ಹೂವಿನ ಹಡಗಲಿ ಶಾಸಕ)
6. ರಹೀಂ ಖಾನ್ (ಬೀದರ್ ಉತ್ತರ ಶಾಸಕ)
7. ಆರ್.ಬಿ.ತಿಮ್ಮಾಪುರ (ಮುಧೋಳ ಶಾಸಕ)
8. ಎಂ.ಟಿ.ಬಿ.ನಾಗರಾಜ್ (ಹೊಸಕೋಟೆ ಶಾಸಕ)
ನಿಗಮ-ಮಂಡಳಿ ಅಧ್ಯಕ್ಷರ ಅಂತಿಮ ಪಟ್ಟಿ
ಡಾ. ಕೆ.ಸುಧಾಕರ್ (ಚಿಕ್ಕಬಳ್ಳಾಪುರ): ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ
ಎಸ್.ಟಿ.ಸೋಮಶೇಖರ್ (ಯಶವಂತಪುರ): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಎನ್.ಎ.ಹ್ಯಾರಿಸ್ (ಶಾಂತಿನಗರ): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಧೆ
ಬೈರತಿ ಸುರೇಶ್ (ಹೆಬ್ಬಾಳ): ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾಗಳ ಅಭಿವೃದ್ಧಿ ನಿಗಮ
ಬೈರತಿ ಬಸವರಾಜು (ಕೆ.ಆರ್.ಪುರ): ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ
ಮುನಿರತ್ನ (ರಾಜರಾಜೇಶ್ವರಿನಗರ): ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ
ಬಿ.ಕೆ. ಸಂಗಮೇಶ್ವರ್ (ಭದ್ರಾವತಿ): ಕರ್ನಾಟಕ ಭೂ ಸೇನಾ ನಿಗಮ
ಆರ್. ನರೇಂದ್ರ (ಹನೂರು): ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ (ಕೆಎಸ್ಎಫ್ಸಿ)
ನಾರಾಯಣ್ ರಾವ್ (ಬಸವಕಲ್ಯಾಣ): ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಟಿ.ವೆಂಕಟರಮಣಯ್ಯ (ದೊಡ್ಡಬಳ್ಳಾಪುರ): ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ
ಡಾ. ಉಮೇಶ್ ಜಾಧವ್ (ಚಿಂಚೋಳಿ): ಕರ್ನಾಟಕ ರಾಜ್ಯ ಉಗ್ರಾಣ ನಿಗಮ
ಟಿ.ರಘುಮೂರ್ತಿ (ಚಳ್ಳಕೆರೆ): ಹಟ್ಟಿಚಿನ್ನದ ಗಣಿ ನಿಯಮಿತ
ಬಿ.ಶಿವಣ್ಣ (ಆನೇಕಲ್): ಕಿಯೋನಿಕ್ಸ್
ಎಸ್.ಎನ್.ನಾರಾಯಣ ಸ್ವಾಮಿ (ಬಂಗಾರಪೇಟೆ): ಡಾ
ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ
ಲಕ್ಷ್ಮೇ ಹೆಬ್ಬಾಳಕರ್ (ಬೆಳಗಾವಿ ಗ್ರಾಮೀಣ)- ಮೈಸೂರು ಮಿನರಲ್ಸ್ ಲಿಮಿಟೆಡ್
ಶಿವರಾಮ್ ಹೆಬ್ಬಾರ್ (ಯಲ್ಲಾಪುರ): ಎನ್ಡಬ್ಲ್ಯುಕೆಆರ್ಟಿಸಿ
ಕೆ.ಎನ್.ಸುಬ್ಬಾರೆಡ್ಡಿ (ಬಾಗೇಪಲ್ಲಿ): ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ
ಯಶವಂತಗೌಡ ಪಾಟೀಲ್ (ಇಂಡಿ): ಕರ್ನಾಟಕ ನಗರ ನೀರು ಪೂರೈಕೆ ಹಾಗೂ ಒಳಚರಂಡಿ ಮಂಡಳಿ
ಟಿ.ಡಿ.ರಾಜೇಗೌಡ (ಶೃಂಗೇರಿ): ಮಲೆನಾಡು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.