ನಂಜನಗೂಡು, ಗುಂಡ್ಲುಪೇಟೆ ಸೇರಿ ದೇಶಾದ್ಯಂತ 10 ಕ್ಷೇತ್ರಗಳಲ್ಲಿ ಮತ ಎಣಿಕೆ

By Suvarna Web DeskFirst Published Apr 12, 2017, 3:49 PM IST
Highlights

ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ನಡೆದಿದೆ. ಶಾಂತಿಯುತ ಮತ್ತು ಸುಗಮ ಮತ ಎಣಿಕೆಗೆ ಚುನಾವಣಾ ಆಯೋಗ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದು, ಗುರುವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ.

ಬೆಂಗಳೂರು: ನಂಜನಗೂಡು.. ಗುಂಡ್ಲುಪೇಟೆ.. ಉಪಸಮರದ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಗುರುವಾರ ಉಭಯ ಕ್ಷೇತ್ರಗಳ ಫಲಿತಾಂಶ ಹೊರ ಬಿಳುತ್ತಿದ್ದು ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಇತ್ತ ಜಿಲ್ಲಾಡಳಿತ ಕೂಡ ಮತ ಎಣಿಕೆಗೆ ಸಕಲ ರೀತಿಯಲ್ಲೂ ಸಜ್ಜಾಗಿದೆ.

ಸುಗಮ ಮತದಾನಕ್ಕಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಡಳಿತದಿಂದ ಎಲ್ಲಾ ವ್ಯವಸ್ಥೆ ಪೂರ್ಣಗೊಂಡಿದೆ. ನಾಳೆ ಬೆಳಗ್ಗೆ 7:45ಕ್ಕೆ ಸ್ಟ್ರಾಂಗ್ ರೂಂ ತೆರೆಯಲಾಗುತ್ತೆ. 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ.  ನಂಜನಗೂಡು ಕ್ಷೇತ್ರದ ಮತ ಎಣಿಕೆ  ಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಒಂದೇ ಕೊಠಡಿಯಲ್ಲಿ 14 ಟೇಬಲ್ ಗಳಲ್ಲಿ 17 ಸುತ್ತುಗಳು ಕೌಂಟಿಂಗ್ ನಡೆಯಲಿದೆ. ಇನ್ನೂ ಗುಂಡ್ಲುಪೇಟೆ ಕ್ಷೇತ್ರದ ಮತ ಎಣಿಕೆ ಸೇಂಟ್ ಜಾನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ. 16 ಟೇಬಲ್ ಗಳಲ್ಲಿ 16 ಸುತ್ತು ಮತ ಎಣಿಕೆ ನಡೆಯಲಿದೆ.

ಪ್ರತಿ ಟೇಬಲ್'ಗೆ ಓರ್ವ ಮತ ಎಣಿಕೆ ಅಧಿಕಾರಿ, ಓರ್ವ ಎಣಿಕೆ ಮೇಲ್ವಿಚಾರಕ, ಓರ್ವ ಮೈಕ್ರೋ ಅಬ್ಸರ್ವರ್, ಓರ್ವ ವೀಡಿಯೋಗ್ರಾಫರ್ ಮತ್ತು  ಓರ್ವ ಸಹಾಯಕರನ್ನು ನೇಮಕ ಮಾಡಲಾಗಿದೆ. ಎಣಿಕೆ ಕೇಂದ್ರದ ಹೊರಗೆ ಎಲ್'ಇಡಿ ಪರದೆಗಳಲ್ಲಿ ಎಣಿಕೆ ಕಾರ್ಯದ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತೀ ಟೇಬಲ್'ಗೆ ಅಭ್ಯರ್ಥಿಗಳ ಪರ ಏಜಂಟ್ ನಿಯೋಜನೆಗೆ ಅವಕಾಶ ನೀಡಲಾಗಿದೆ.

ಉಭಯ ಕ್ಷೇತ್ರಗಳಲ್ಲೂ ಮತ ಎಣಿಕೆ ಕೇಂದ್ರದ 200 ಮೀಟರ್ ಸುತ್ತ ನಿಷೇಧಾಜ್ಞೆ ವಿಧಿಸಲಾಗಿದ್ದು, ಕ್ಷೇತ್ರದಾದ್ಯಂತ  ವಿಜಯೋತ್ಸವ ಮತ್ತು ಪಟಾಕಿ ಸಿಡಿಸಲು ಅವಕಾಶ ಇಲ್ಲ. ಬುಧವಾರ ಮಧ್ಯರಾತ್ರಿಯಿಂದ ಗುರುವಾರ ಮಧ್ಯರಾತ್ರಿವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಹೆಚ್ಚುವರಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ದೇಶಾದ್ಯಂತ ಒಟ್ಟು 10 ಕ್ಷೇತ್ರಗಳಲ್ಲಿ ಮತ ಎಣಿಕೆ:
ಗುಂಡ್ಲುಪೇಟೆ, ನಂಜನಗೂಡು ಅಷ್ಟೇ ಅಲ್ಲ, ಏಪ್ರಿಲ್ 9ರಂದು ದೇಶದ ವಿವಿಧೆಡೆ ಒಟ್ಟು 11 ಕಡೆ ಉಪಚುನಾವಣೆಗಳು ನಡೆದಿದ್ದವು. ಅದರಲ್ಲಿ ಶ್ರೀನಗರ ಲೋಕಸಭೆ ಕ್ಷೇತ್ರವೂ ಒಂದು. ಆದರೆ, ಶ್ರೀನಗರ ಲೋಕಸಭಾ ಕ್ಷೇತ್ರದ ಹಲವು ವಾರ್ಡ್'ಗಳಲ್ಲಿ ಗುರುವಾರ ಮರುಮತದಾನ ನಡೆಯುತ್ತಿದೆ..

ವಿಧಾನಸಭೆ ಉಪಚುನಾವಣೆ:
1) ನಂಜನಗೂಡು, ಕರ್ನಾಟಕ
2) ಗುಂಡ್ಲುಪೇಟೆ, ಕರ್ನಾಟಕ
3) ಲಿಟಿಪಾರಾ, ಜಾರ್ಖಂಡ್
4) ಧೋಲಪುರ್, ರಾಜಸ್ಥಾನ್
5) ಧೆಮಜಿ, ಅಸ್ಸಾಮ್
6) ಕಾಂತಿ ದಕ್ಷಿಣ್, ಪಶ್ಚಿಮ ಬಂಗಾಳ
7) ಭೋರಾಂಜ್, ಹಿಮಾಚಲ ಪ್ರದೇಶ
8) ಬಾಂಧವ್'ಗಡ್, ಮಧ್ಯಪ್ರದೇಶ
9) ಆತೆರ್, ಮಧ್ಯಪ್ರದೇಶ
10) ರಜೋರಿ ಗಾರ್ಡನ್, ದೆಹಲಿ

ಇವುಗಳ ಪೈಕಿ ಕರ್ನಾಟಕದ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಮೇಲೆ ಸಾಕಷ್ಟು ಕುತೂಹಲವಿದೆ. ಅಂತೆಯೇ, ದೆಹಲಿಯ ರಜೋರಿ ಗಾರ್ಡನ್ ವಿಧಾನಸಭಾ ಕ್ಷೇತ್ರವು ಆಮ್ ಆದ್ಮಿ ಮತ್ತು ಬಿಜೆಪಿಗೆ ಅಗ್ನಿಪರೀಕ್ಷೆಯಾಗಿದೆ. ಇದೇ ಕಾರಣಕ್ಕೆ ಈ ಕ್ಷೇತ್ರದ ಮೇಲೆ ಇಡೀ ದೇಶದ ಗಮನ ಇದೆ. ಪಂಜಾಬ್'ನಲ್ಲಿ ನಿರಾಶೆ ಅನುಭವಿಸಿದ್ದ ಆಪ್ ಪಕ್ಷಕ್ಕೆ ರಜೋರಿ ಗಾರ್ಡನ್ ಕ್ಷೇತ್ರ ತೀರಾ ಪ್ರತಿಷ್ಠೆಯ ವಿಷಯವಾಗಿದೆ.

ಒಟ್ಟಾರೆ, ಗುರುವಾರ ಮಧ್ಯಾಹ್ನದ ವೇಳೆಗೆ ಎಲ್ಲಾ ಕ್ಷೇತ್ರಗಳ ಫಲಿತಾಂಶ ದೊರೆಯುವ ನಿರೀಕ್ಷೆ ಇದೆ.

ಮಾಹಿತಿ ನೆರವು: ಶಶಿಧರ್/ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್

click me!