
ಫೆ.೧೩ರಿಂದ ಮೇಕ್ ಇನ್ ಇಂಡಿಯಾ-ಕರ್ನಾಟಕ ಸಮಾವೇಶ
ಕಿಕ್ಕರ್:೫೫ ವಿಶ್ವದರ್ಜೆ ಕಂಪನಿಗಳು; ೨೫ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು
ಬೆಂಗಳೂರು (ಫೆ.10): ಕರ್ನಾಟಕವನ್ನು ದೇಶದ ಅತ್ಯುತ್ತಮ ಹೂಡಿಕೆ ತಾಣವಾಗಿ ಪ್ರಚುರಪಡಿಸುವುದು ಸೇರಿದಂತೆ ರಾಜ್ಯದ ಕೌಶಲ್ಯಭರಿತ ಮಾನವ ಸಂಪನ್ಮೂಲ, ಉತ್ಪಾದನಾ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಮೇಕ್ ಇನ್ ಇಂಡಿಯಾ-ಕರ್ನಾಟಕ ಸಮಾವೇಶ ಫೆ. 13 ರಿಂದ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ. 25 ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳು ತಮ್ಮ ನಿಯೋಗಗಳೊಂದಿಗೆ ಭಾಗವಹಿಸಲಿದ್ದು 4 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು, 55 ವಿಶ್ವದರ್ಜೆ ಕಂಪನಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿವೆ ಎಂದು ಭಾರಿ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದೇಶಪಾಂಡೆ ಸಮಾವೇಶದ ವಿವರ ನೀಡಿದರು. ಕೇಂದ್ರ ಸರ್ಕಾರದ ಡಿಐಪಿಪಿ (ಡಿಪಾರ್ಟ್‌ಮೆಂಟ್ ಆಫ್ ಇಂಡಸ್ಟ್ರಿಯಲ್ ಪಾಲಿಸಿ ಅಂಡ್ ಪ್ರಮೋಶನ್) ಸಹಯೋಗದೊಂದಿಗೆ ನಡೆಯಲಿರುವ ಸಮಾವೇಶದಲ್ಲಿ ರಾಜ್ಯದ ಉತ್ಪಾದನಾ ಕ್ಷೇತ್ರವನ್ನು ಪ್ರಮುಖವಾಗಿ ಬಿಂಬಿಸಲಾಗುತ್ತಿದೆ. ರಾಜ್ಯದಲ್ಲಿ ವಿಪುಲ ಅವಕಾಶಗಳಿದ್ದರೂ ಪ್ರಮುಖವಾಗಿ ಆಟೋಮೇಶನ್, ಏರೋಸ್ಪೇಸ್,ಟೆಕ್ಸ್‌ಟೈಲ್ಸ್ ,ಬಯೋಟೆಕ್ನಾಲಜಿ. ಫಾರ್ಮಾ, ಕೃಷಿ ಮತ್ತು ಆಹಾರ ಸಂಸ್ಕರಣೆ, ಪ್ಲಾಸ್ಟಿಕ್ಸ್ ಮತ್ತು ಕೆಮಿಕಲ್ಸ್ ಮೊದಲಾದ ಭಾರಿ ಪ್ರಮಾಣದ ಉದ್ಯೋಗಾವಕಾಶ ಸೃಷ್ಟಿಸಬಲ್ಲ ಉತ್ಪಾದನಾ ವಲಯ ನಿರೀಕ್ಷಿತ ಬೆಳವಣಿಗೆ ಸಾಧಿಸಿಲ್ಲ. ಈ ನಿಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಮುಖವಾಗಿದೆ. ಈ ವಲಯದ ಮುಂದಿರುವ ಸವಾಲುಗಳನ್ನು ಎದುರಿಸಬೇಕಿದ್ದು ಈ ವಲಯಗಳಲ್ಲಿ ಹತ್ತು ತಾಂತ್ರಿಕ ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದರು.
ಕೇವಲ ರಾಜ್ಯದ ಕೈಗಾರಿಕೆಗಳು ಪಾಲ್ಗೊಳ್ಳುವ ಸಮಾವೇಶದಲ್ಲಿ ಸುಮಾರು 25-30 ದೇಶಗಳ ರಾಯಭಾರಿಗಳು ತಮ್ಮ ನಿಯೋಗದೊಂದಿಗೆ ಪಾಲ್ಗೊಳ್ಳಲಿದ್ದಾರೆ. 200 ಕ್ಕೂ ಹೆಚ್ಚು ವಾಣಿಜ್ಯ ವ್ಯವಹಾರ ಮಾತುಕತೆಗಳು(ಬಿಟುಬಿ), ಸರ್ಕಾರದ ಮಟ್ಟದಲ್ಲಿ ಮಾತುಕತೆಗಳು ರಾಷ್ಟ್ರೀಯ/ ಅಂತಾರಾಷ್ಟ್ರೀಯ ವಾಣಿಜ್ಯೋದ್ಯಮಿಗಳು, ಸಂಸ್ಥೆಗಳು ಹಾಗೂ ರಾಜ್ಯ/ಕೇಂದ್ರ ಸರ್ಕಾರದ ಅಧಿಕಾರಿ ಮಟ್ಟದ ಮಾತುಕತೆಗಳು ನಡೆಯಲಿವೆ. ವಸ್ತುಪ್ರದರ್ಶನವನ್ನೂ ಆಯೋಜಿಸಲಾಗುತ್ತಿದ್ದು ಸುಮಾರು 55 ವಿಶ್ವದರ್ಜೆ ಕಂಪನಿಗಳು ಪಾಲ್ಗೊಳ್ಳಲಿವೆ. ೪ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು, ವಿಶ್ವದ ವಿವಿಧ ಕಂಪನಿಗಳ ಸಿಇಒಗಳು, ನೀತಿ ನಿರೂಪಕರು ಈಗಾಗಲೇ ನೋಂದಣಿ ಮಾಡಿದ್ದು ಕರ್ನಾಟಕವನ್ನು ಅತ್ಯಂತ ಪ್ರಗತಿಪರ ಮತ್ತು ಕೈಗಾರಿಕಾ ರಾಜ್ಯವನ್ನಾಗಿ ಬಿಂಬಿಸಲು ಮೇಕ್ ಇನ್ ಇಂಡಿಯಾ-ಕರ್ನಾಟಕ ಸಮಾವೇಶ ನೆರವಾಗಲಿದೆ ಎಂದು ಹೇಳಿದರು.
ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಬಂಡವಾಳ ಹೂಡಿಕೆ ಪ್ರಸ್ತಾವನೆಗಳನ್ನು ಪಡೆದಿರುವ ರಾಜ್ಯವಾಗಿದ್ದು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಡಿಐಪಿಪಿ ಅಂಕಿ ಅಂಶಗಳ ಪ್ರಕಾರ ರಾಜ್ಯವು 4.1 ಬಿಲಯನ್ ಅಮೆರಿಕನ್ ಡಾಲರ್ ಮೊತ್ತದ ಹೂಡಿಕೆಯನ್ನು 2015-16 ರಲ್ಲಿ ಆಕರ್ಷಿಸಿದೆ. ಇದು ದೇಶದಲ್ಲೇ ನಾಲ್ಕನೆಯ ಅತಿ ಹೆಚ್ಚು ಹೂಡಿಕೆಯಾಗಿದೆ. ₹1,54,173 ಕೋಟಿ ಹೂಡಿಕೆ ಪ್ರಸ್ತಾವನೆಗಳು ಬಂದಿದ್ದು ಎರಡನೇ ಸ್ಥಾನದಲ್ಲಿರುವ ಗುಜರಾತ್‌ಗಿಂತ ಮೂರು ಪಟ್ಟು ಹೆಚ್ಚಿದೆ. ದೇಶದಲ್ಲೇ ಅತಿ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ಎಂಡ್‌ಡಿ) ಕೇಂದ್ರಗಳು, ತಾಂತ್ರಿಕ ಮತ್ತು ವೈದ್ಯಕೀಯ ಮಹಾವಿದ್ಯಾಲಯಗಳು, ಏಷ್ಯಾದಲೇ ಅತಿ ಹೆಚ್ಚು ಸ್ಟಾರ್ಟಪ್‌ಗಳು ರಾಜ್ಯದಲ್ಲಿವೆ. ದೇಶದ ಅನುಕೂಲಕರ ವಾಣಿಜ್ಯೋದ್ಯಮ ನೀತಿ(ಈಸ್ ಆಫ್ ಡೂಯಿಂಗ್ ಬಿಸಿನೆಸ್) ರಾಜ್ಯದಲ್ಲಿದೆ. ಇಲ್ಲಿನ ಹಿತಕರ ವಾತಾವರಣ, ಉದಾರ ಮನೋಭಾವ(ಕಾಸ್ಮೊಪಾಲಿಟನ್), ಹೂಡಿಕೆ ಸ್ನೇಹಿ ನೀತಿಗಳು ಹಾಗೂ ಶೀಘ್ರ ಸ್ಪಂದನೆಯ ಆಡಳಿತ ವಿಶ್ವದಲ್ಲೇ ಹೂಡಿಕೆಗೆ ನೆಚ್ಚಿನ ತಾಣವೆಂದು ಗುರುತಿಸುವಂತಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ವಿವರಿಸಿದರು.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಮಾವೇಶ ಉದ್ಘಾಟಿಸಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಎಂ.ವೆಂಕಯ್ಯನಾಯ್ಡು, ಸ್ಮತಿ ಇರಾನಿ, ಅನಂತಕುಮಾರ್,ಸುರೇಶ್‌ಪ್ರಭು ಮೊದಲಾದವರು ಭಾಗವಹಿಸುವರು. ಕೇಂದ್ರ ಸಚಿವ(ರಕ್ಷಣೆ) ಮನೋಹರ್ ಪರಿಕ್ಕರ್ , ವಿದೇಶಾಂಗ ವ್ಯವಹಾರ ಸಚಿವ ಎಂ.ಜೆ. ಅಕ್ಬರ್ ಫೆ.14 ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.