ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಪಟ್ಟಿ ಶುಕ್ರವಾರ ಫೈನಲ್ | ಅಭ್ಯರ್ಥಿಗಳ ಆಯ್ಕೆ ಕಸರತ್ತು ಶುರು | ಗೆಲ್ಲಬಲ್ಲ ಅಭ್ಯರ್ಥಿಗಳ ವರದಿ ಪರಾಮರ್ಶೆ
ಬೆಂಗಳೂರು (ಸೆ. 24): ಉಪ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಖೈರುಗೊಳಿಸಲು ಪ್ರಾಥಮಿಕ ಹಂತದ ಪರಿಶೀಲನೆ ಕಾರ್ಯವನ್ನು ಕಾಂಗ್ರೆಸ್ ಮುಖಂಡರು ಸೋಮವಾರ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ಸಭೆ ನಡೆಸಿದ ಕಾಂಗ್ರೆಸ್ ನಾಯಕರು, ಈ ಎಲ್ಲಾ 15 ಕ್ಷೇತ್ರಗಳಲ್ಲಿ ಗೆಲ್ಲಬಲ್ಲ ಅಭ್ಯರ್ಥಿಗಳ ಬಗ್ಗೆ ಪಕ್ಷದ ವೀಕ್ಷಕರು ನೀಡಿದ ವರದಿಯ ಪರಾಮರ್ಶೆಯನ್ನು ನಡೆಸಿದರು.
ಈ ಸಭೆಯಲ್ಲಿ ಪ್ರತಿ ಕ್ಷೇತ್ರಕ್ಕೆ ನಾಲ್ಕು ಹೆಸರುಗಳನ್ನು ಆಯ್ಕೆ ಮಾಡಲಾಗಿದ್ದು, ಈ ಪಟ್ಟಿಯನ್ನು ಸೆ.25 ರಂದು ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಚುನಾವಣಾ ಸಮಿತಿಯ ಮುಂದಿಡಲಿದ್ದಾರೆ. ಬಹುತೇಕ ಚುನಾವಣಾ ಸಮಿತಿ ಸಭೆಯಲ್ಲಿ ಸಂಭಾವ್ಯರ ಪಟ್ಟಿ ಅಖೈರುಗೊಳ್ಳಲಿದೆ. ಅನಂತರ ಸದರಿ ಪಟ್ಟಿಯನ್ನು ಒಪ್ಪಿಗೆಗಾಗಿ ಹೈಕಮಾಂಡ್‌ಗೆ ರವಾನಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸೋಮವಾರ ನಡೆದ ಸಭೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ ಜಿ.ಪರಮೇಶ್ವರ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಟಿ.ಬಿ.ಜಯಚಂದ್ರ, ಆರ್.ವಿ.ಸುದರ್ಶನ್ ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.