ಬಾಂಬೆ ಡೈಯಿಂಗ್‌ ಮಾಲೀಕರ ಪುತ್ರ ಡ್ರಗ್ಸ್‌ ಕೇಸಲ್ಲಿ ಅರೆಸ್ಟ್‌!

By Web DeskFirst Published May 1, 2019, 9:45 AM IST
Highlights

ಬಾಂಬೆ ಡೈಯಿಂಗ್‌ ಮಾಲೀಕರ ಪುತ್ರ ಡ್ರಗ್ಸ್‌ ಕೇಸಲ್ಲಿ ಅರೆಸ್ಟ್‌! ಗಾಂಜಾ ಸಿಕ್ಕಿದ ಕಾರಣಕ್ಕೆ ಜಪಾನ್‌ ಏರ್‌ಪೋರ್ಟ್‌ಲ್ಲಿ ನೆಸ್‌ ಬಂಧನ |  2 ವರ್ಷ ಶಿಕ್ಷೆ ವಿಧಿಸಿ, ಶಿಕ್ಷೆ ಅಮಾನತಿನಲ್ಲಿಟ್ಟಸಪೊರೋ ಕೋರ್ಟ್‌

ನವದೆಹಲಿ (ಮೇ. 01): ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಸಹ ಮಾಲೀಕ ನೆಸ್‌ ವಾಡಿಯಾ ಗಾಂಜಾ ಇಟ್ಟುಕೊಂಡ ಪ್ರಕರಣದಲ್ಲಿ ಜಪಾನ್‌ನಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ನೆಸ್‌ ಜಪಾನ್‌ನಲ್ಲಿ ಸಣ್ಣಪ್ರಮಾಣದ ಜೈಲುವಾಸವನ್ನೂ ಅನುಭವಿಸಿದ್ದಾರೆ. ಬಳಿಕ ಅವರಿಗೆ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿದೆಯಾದರೂ, ಶಿಕ್ಷೆಯನ್ನು ಅಮಾನತ್ತಿನಲ್ಲಿ ಇಟ್ಟಿದೆ. ಹೀಗಾಗಿ ಅವರು ಭಾರತಕ್ಕೆ ಮರಳಿದ್ದಾರೆ. ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಮಾಚ್‌ರ್‍ನಲ್ಲಿ ನೆಸ್‌ ಪ್ರವಾಸಕ್ಕೆಂದು ಜಪಾನ್‌ಗೆ ತೆರಳಿದ್ದ ವೇಳೆ ತಮ್ಮ ಬಳಿ 25 ಗ್ರಾಂ ಗಾಂಜಾ ಇಟ್ಟುಕೊಂಡಿದ್ದರು. ಆದರೆ ನ್ಯೂ ಚಿಟೋಸ್‌ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಶ್ವಾನಗಳು ಗಾಂಜಾ ಪತ್ತೆ ಹಚ್ಚಿದ್ದವು. ಹೀಗಾಗಿ ಅವರನ್ನು ಬಂಧಿಸಿ, ವಿಚಾರಣೆಗೆ ಗುರಿಪಡಿಸಲಾಗಿತ್ತು.

ವಿಚಾರಣೆ ವೇಳೆ ತಾವು ಸ್ವಂತ ಬಳಕೆಗಾಗಿ ಗಾಂಜಾ ಇಟ್ಟುಕೊಂಡಿದ್ದೆ ಎಂದು ನೆಸ್‌ ಒಪ್ಪಿದ್ದರು. ಇದನ್ನು ಮಾನ್ಯ ಮಾಡಿದ ಕೋರ್ಟ್‌ ನೆಸ್‌ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತಾದರೂ, ನಿಯಮಗಳ ಅನ್ವಯ ಅವರ ಶಿಕ್ಷೆಯನ್ನು ಅಮಾನತ್ತಿನಲ್ಲಿ ಇಟ್ಟಿತ್ತು. ಹೀಗಾಗಿ ಅವರು ಜೈಲು ಶಿಕ್ಷೆ ಅನುಭವಿಸಬೇಕಾದ ಅಪಾಯದಿಂದ ಪಾರಾಗಿ ಭಾರತಕ್ಕೆ ಮರಳಿದ್ದಾರೆ.

ಬಾಂಬೆ ಡೈಯಿಂಗ್‌ ಮಾಲೀಕನ ಪುತ್ರ

ಭಾರತದ ಖ್ಯಾತನಾಮ ಕಂಪನಿಗಳಾದ ಬಾಂಬೆ ಡೈಯಿಂಗ್‌, ಬ್ರಿಟಾನಿಯಾ, ಗೋ ಏರ್‌ ಮೊದಲಾದ ಕಂಪನಿಗಳ ಮಾಲೀಕತ್ವವನ್ನು ವಾಡಿಯಾ ಸಮೂಹ ಹೊಂದಿದೆ. ಇದರ ಅಧ್ಯಕ್ಷರಾದ ನುಸ್ಲಿ ವಾಡೀಯಾರ ಪುತ್ರನೇ ಈ ನೆಸ್‌ ವಾಡಿಯಾ. ಇವರು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ನ ಸಹ ಮಾಲೀಕರು ಕೂಡಾ ಹೌದು. ಈ ಹಿಂದೆ ಇವರ ವಿರುದ್ಧ ನಟಿ ಪ್ರೀತಿ ಜಿಂಟಾ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

ಶಿಕ್ಷೆ ಅಮಾನತು ಎಂದರೇನು?

ನೆಸ್‌ಗೆ 2 ವರ್ಷ ಜೈಲು ಶಿಕ್ಷೆ ಕೊಟ್ಟರೂ, ಅದನ್ನು 5 ವರ್ಷ ಅಮಾನತ್ತಿಲ್ಲಿಡಲಾಗಿದೆ. ಅಂದರೆ ಮುಂದಿನ 5 ವರ್ಷಗಳ ಅವಧಿಯಲ್ಲಿ ನೆಸ್‌ ಜಪಾನ್‌ನಲ್ಲಿ ಮತ್ತೆ ಇದೇ ರೀತಿಯ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ಅವರು 2 ವರ್ಷ ಜೈಲು ಅನುಭವಿಸಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಜೈಲು ಸೇರುವ ಅಪಾಯವಿಲ್ಲ.

click me!