ಸಿದ್ದರಾಮಯ್ಯರನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಕಳಿಸುತ್ತೇನೆ : ಯಡಿಯೂರಪ್ಪ

By Suvarna Web DeskFirst Published Feb 22, 2018, 10:45 AM IST
Highlights

‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಕಳುಹಿಸದಿದ್ದಲ್ಲಿ ನಾನು ಯಡಿಯೂರಪ್ಪನೇ ಅಲ್ಲ’’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಶಪಥ ಮಾಡಿದ್ದಾರೆ.

ಉಡುಪಿ : ‘‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಕಳುಹಿಸದಿದ್ದಲ್ಲಿ ನಾನು ಯಡಿಯೂರಪ್ಪನೇ ಅಲ್ಲ’’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಶಪಥ ಮಾಡಿದ್ದಾರೆ.

ನಗರದಲ್ಲಿ ಮಂಗಳವಾರ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಮುಖರ ಮತ್ತು ಶಕ್ತಿ ಕೇಂದ್ರಗಳ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ಕಿಡಿಕಾರಿದರು.

ಇತ್ತೀಚೆಗೆ ಪ್ರಧಾನಿ ಮೋದಿ ಅವರು ಸಿದ್ದರಾಮಯ್ಯ ಸರ್ಕಾರವನ್ನು ‘10 ಪರ್ಸೆಂಟ್‌ ಸರ್ಕಾರ’ ಎಂದು ಕರೆದಾಗ, ಅದಕ್ಕೆ ಪುರಾವೆ ಕೊಡಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದರು. ನಮ್ಮ ಬಳಿ ಪುರಾವೆಗಳಿವೆ, ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಪುರಾವೆಗಳನ್ನು ತೋರಿಸುತ್ತೇವೆ ಮತ್ತು ಅವರನ್ನು ಎಲ್ಲಿಗೆ ಸೇರಿಸಬೇಕೋ ಅಲ್ಲಿಗೆ ಸೇರಿಸುತ್ತೇವೆ. ಸಿದ್ದರಾಮಯ್ಯರನ್ನು ಎಲ್ಲಿಗೆ ಕಳುಹಿಸಬೇಕೋ, ಅಲ್ಲಿಗೆ ಕಳುಹಿಸದಿದ್ದಲ್ಲಿ ನಾನು ಯಡಿಯೂರಪ್ಪನೇ ಅಲ್ಲ ಎಂದು ಬಿಎಸ್‌ವೈ ಗುಡುಗಿದರು.

ರಾಹುಲ್‌, ಸಿದ್ದು ಬಚ್ಚಾ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಒಬ್ಬ ಬಚ್ಚಾ. ರಾಜ್ಯದಲ್ಲೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅವರಿಗೆ ದೇವಾಲಯಗಳ ನೆನಪಾಗುತ್ತಿದೆ. ಅವರು ರಾಜ್ಯಕ್ಕೆ ಇನ್ನೂ ಹೆಚ್ಚು ಸಲ ಬರಲಿ, ನಮಗೆ ಲಾಭವೇ ಆಗುತ್ತದೆ ಎಂದು ಇದೇ ವೇಳೆ ಯಡಿಯೂರಪ್ಪ ಲೇವಡಿ ಮಾಡಿದರು.

ಇದೇ ವೇಳೆ ನೀರವ್‌ ಮೋದಿಗೆ ಸಂಬಂಧಿಸಿ ಸಿಎಂ ಹೇಳಿಕೆಗೂ ಬಿಎಸ್‌ವೈ ಕಿಡಿಕಾರಿದ್ದಾರೆ. ‘ನಾನು ಪ್ರಧಾನಿಯಾಗಿದ್ದರೆ ನೀರವ್‌ ಮೋದಿಯನ್ನು ವಿದೇಶಕ್ಕೆ ಪಲಾಯನ ಮಾಡಲು ಬಿಡುತ್ತಿರಲಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಅವರೊಬ್ಬ ಬಚ್ಚಾ. ನೀರವ್‌ ಮೋದಿಯನ್ನು ಯಾವುದೇ ಕಾರಣಕ್ಕೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ನೀರವ್‌ ಮೇಲೆ ಕಾನೂನು ಕ್ರಮ ನಡೆಯುತ್ತದೆ ಎಂದು ಪ್ರಧಾನಿ ಸ್ಪಷ್ಟವಾಗಿ ಹೇಳಿದ್ದಾರೆ. ನೀರವ್‌ ವಿರುದ್ಧ ತನಿಖೆ ನಡೆಯುತ್ತಿದೆ. .500 ಕೋಟಿ ಆಸ್ತಿ ಮುಟ್ಟುಗೋಲು ಹಾಕಿದ್ದಾರೆ. ನೀರವ್‌ ಬಗ್ಗೆ ಮಾತನಾಡುವ ಇದೇ ಸಿದ್ದರಾಮಯ್ಯ ಅವರು ಸರ್ಕಾರಿ ಕಚೇರಿಗೆ ನುಗ್ಗಿ ಪೆಟ್ರೋಲ್‌ ಸುರಿದ ನಾರಾಯಣಸ್ವಾಮಿಯನ್ನು ರಕ್ಷಿಸುತ್ತಿದ್ದಾರೆ. ಯಾಕೆ ಆತನನ್ನು ಬಂಧಿಸಲು ಆದೇಶ ನೀಡಿಲ್ಲ ಎಂದು ಈ ಸಂದರ್ಭದಲ್ಲಿ ಬಿಎಸ್‌ವೈ ಪ್ರಶ್ನಿಸಿದರು.

ಸಿದ್ದರಾಮಯ್ಯ ಹದ್ದು ಮೀರಿ ಮಾತನಾಡುತ್ತಿದ್ದಾರೆ. ಪ್ರಧಾನಿ ಅವರನ್ನೇ ಟೀಕಿಸುವಂತಹ ದುರಹಂಕಾರ ತೋರಿಸುತ್ತಿದ್ದಾರೆ. ಈಗಲೇ ಮಾತನಾಡುವಷ್ಟುಮಾತನಾಡಲಿ, ಅವರಿಗೆ ಮಾತನಾಡುವುದಕ್ಕೆ ಇನ್ನು ಕೇವಲ ಎರಡು ತಿಂಗಳು ಮಾತ್ರ ಅವಕಾಶ ಇದೆ ಎಂದರು.

 

ಸಿದ್ದರಾಮಯ್ಯ ವಿರುದ್ಧ ನಮ್ಮ ಬಳಿ ಪುರಾವೆಗಳಿವೆ. ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪುರಾವೆಗಳನ್ನು ತೋರಿಸುತ್ತೇವೆ ಮತ್ತು ಅವರನ್ನು ಸೇರಿಸಬೇಕಾಗಿರುವಲ್ಲಿ ಸೇರಿಸುತ್ತೇವೆ. ಅವರನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಕಳುಹಿಸದಿದ್ದಲ್ಲಿ ನಾನು ಯಡಿಯೂರಪ್ಪನೇ ಅಲ್ಲ.

-ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷರು

click me!