
ಬಾಗಲಕೋಟೆ(ಮೇ.22): ದಲಿತರ ಮನೆಯಲ್ಲಿನ ಊಟಕ್ಕೆ ಸಂಬಂಧಿಸಿದ ವಿವಾದಕ್ಕೆ ಯಡಿಯೂರಪ್ಪ ಇಂದು ಅಂತ್ಯ ಹಾಡಿದ್ದಾರೆ. ದಲಿತರ ಮನೆಯಲ್ಲೇ ತಯಾರಿಸಿದ ತಿಂಡಿ, ಊಟ ಮಾಡಿ ಪ್ರತಿಪಕ್ಷಗಳ ಬಾಯಿ ಮುಚ್ಚಿಸಿದ್ದಾರೆ.
ದಲಿತರ ಓಲೈಕೆಗೆ ಯಡಿಯೂರಪ್ಪ ನಾಟಕವಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಹಿಗ್ಗಾಮುಗ್ಗಾ ಜಾಡಿಸಿದ್ದವು. ಹೋಟೆಲ್ ತಿಂಡಿ ಸೇವಿಸಿ ದಲಿತರ ಮನೆ ಊಟ ಎಂದು ಸುಳ್ಳು ಹೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಎಲ್ಲಾ ವಿವಾದಗಳಿಗೆ ಯಡಿಯೂರಪ್ಪ ಇಂದು ತೆರೆ ಎಳೆದಿದ್ದಾರೆ.
ಬರ ಅಧ್ಯಯನ ಮತ್ತು ಜನಸಂಪರ್ಕ ಅಭಿಯಾನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರೋ ಯಡಿಯೂರಪ್ಪ ಮತ್ತು ಅವರ ತಂಡ ಇಂದು ಬಾಗಲಕೋಟೆಗೆ ಭೇಟಿ ನೀಡಿತ್ತು. ಈ ವೇಳೆ ಕುಂದರಗಿ ಎಂಬ ದಲಿತ ಕುಟುಂಬದ ಮನೆಯಲ್ಲಿ ದಲಿತ ಮಹಿಳೆಯರೇ ತಯಾರಿಸಿದ ಮಂಡಕ್ಕಿಯ ಸೂಸಲ, ಗಟ್ಟಿಮೊಸರು, ಚಟ್ನಿ, ಸೇವ್, ಕಾರದಾನಿ, ಪೇಡ ಹೀಗೆ ವಿವಿಧ ಬಗೆಯ ಖಾದ್ಯಗಳನ್ನ ಸೇವಿಸಿದರು.
ಮಧ್ಯಾಹ್ನ ಬಾದಾಮಿ ತಾಲೂಕಿನ ಅನಂತಗಿರಿ ಗ್ರಾಮದ ದಲಿತ ಪಕೀರಪ್ಪ ಹಿರೇಮನಿಯವರ ಮನೆಯಲ್ಲಿ ಚಪಾತಿ, ರೊಟ್ಟಿ, ಬದನೆಕಾಯಿ ಪಲ್ಲೆ, ಅನ್ನ ಸಾಂಬಾರ್ ಊಟ ಮಾಡಿದ ಬಿಎಸ್ ವೈ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ರು. ಈ ವೇಳೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಒಟ್ಟಿನಲ್ಲಿ ವಿಪಕ್ಷಗಳ ವಾಗ್ವಾದಕ್ಕೆ ಕಾರಣವಾಗಿದ್ದ ದಲಿತರ ಮನೆಯಲ್ಲಿನ ಊಟದ ಪ್ರಕರಣಕ್ಕೆ ಬಿಎಸ್ ವೈ ಇಂದು ತಿಲಾಂಜಲಿ ಹಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.