ಬಿಎಸ್‌ವೈಗೆ ಡಬಲ್‌ ಚಿಂತೆ : ಸರ್ಕಾರವನ್ನು ಉಳಿಸೋದು ಹೇಗೆ?

By Kannadaprabha NewsFirst Published Sep 22, 2019, 7:27 AM IST
Highlights

ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ಈ ನಿಟ್ಟಿನಲ್ಲಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಚಿಂತೆ ಎದುರಾಗಿದೆ. 

ಬೆಂಗಳೂರು [ಸೆ.22]:  ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಆತಂಕ ಉಂಟುಮಾಡಿದ್ದು, ಒಂದು ಕಡೆ ಅನರ್ಹರ ಹಿತ ಕಾಪಾಡಲು ಕಾನೂನು ಹೋರಾಟ ಬಲಗೊಳಿಸಲು ನೆರವಾಗುವುದರ ಜೊತೆಗೆ ಸರ್ಕಾರ ಉಳಿಸಿಕೊಳ್ಳುವಷ್ಟು ಸ್ಥಾನಗಳನ್ನು ಗೆಲ್ಲುವುದು ಹೇಗೆ ಎಂಬ ಸವಾಲು ಎದುರಾಗಿದೆ.

ಉಪಚುನಾವಣೆ ಈಗಲ್ಲದಿದ್ದರೂ ಮುಂದೆ ನಡೆಯಲೇಬೇಕಾಗಿತ್ತು. ಅದು ಅನಿವಾರ್ಯ ಕೂಡ. ಉಪಚುನಾವಣೆ ನಡೆಸುವುದಕ್ಕೆ ಜನವರಿ ಮೂರನೇ ವಾರದವರೆಗೂ ಸಮಯಾವಕಾಶವಿತ್ತು. ಹೀಗಾಗಿ, ಇನ್ನೂ ವಿಳಂಬವಾಗಬಹುದು ಎಂಬ ಎಣಿಕೆಯಲ್ಲೇ ಯಡಿಯೂರಪ್ಪ ಅವರಿದ್ದರು.

ಅನರ್ಹ ಶಾಸಕರಿಗೆ ಸಚಿವ ಅಥವಾ ನಿಗಮ ಮಂಡಳಿಗಳ ಅಧ್ಯಕ್ಷಗಿರಿಯಂಥ ಸ್ಥಾನಮಾನ ನೀಡಿದ ಬಳಿಕ ಚುನಾವಣೆ ಎದುರಿಸುವುದು ಸುಲಭವಾಗುತ್ತದೆ ಎಂಬ ಲೆಕ್ಕಾಚಾರ ಇತ್ತು. ಹೀಗಾಗಿಯೇ ಸುಪ್ರೀಂಕೋರ್ಟ್‌ನಿಂದ ಶೀಘ್ರದಲ್ಲಿಯೇ ಅನರ್ಹರಿಗೆ ಪರಿಹಾರ ಸಿಗಲಿದೆ ಎಂದು ಕಾಯುತ್ತಿದ್ದರು. ಆದರೆ, ಈ ಲೆಕ್ಕಾಚಾರ ಇದೀಗ ತಲೆಕೆಳಗಾಗಿರುವುದರಿಂದ ಯಡಿಯೂರಪ್ಪ ಮತ್ತವರ ಆಪ್ತರ ಪಾಳೆಯದಲ್ಲಿ ಆತಂಕದ ಛಾಯೆ ಕಾಣಿಸಿಕೊಂಡಿದೆ.

ಹೀಗಾಗಿ, ಇದೀಗ ಸೋಮವಾರ ಸುಪ್ರೀಂಕೋರ್ಟ್‌ನತ್ತ ಚಿತ್ತ ನೆಟ್ಟಿರುವ ಯಡಿಯೂರಪ್ಪ ಅವರು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುವ ಸಂಬಂಧ ದೆಹಲಿಗೆ ತೆರಳಿದ್ದಾರೆ.

ಉಪಚುನಾವಣೆ ನಡೆದ ಬಳಿಕ ಸರ್ಕಾರದ ಬೆಂಬಲಕ್ಕೆ ಬೇಕಾದ ಅಗತ್ಯ ಸಂಖ್ಯೆಯ ಸ್ಥಾನಗಳು ಲಭ್ಯವಾಗದಿದ್ದರೆ ಸರ್ಕಾರಕ್ಕೆ ಕುತ್ತು ಬರುವ ಅಪಾಯವಿದೆ. ಸದ್ಯ ಬಿಜೆಪಿ ಸಂಖ್ಯಾಬಲ ಪಕ್ಷೇತರ ಶಾಸಕರೊಬ್ಬರನ್ನೂ ಸೇರಿ 106. ಹೀಗಾಗಿ, ನಿರೀಕ್ಷಿತ ಮಟ್ಟದ ಸಂಖ್ಯೆಯಷ್ಟುಸ್ಥಾನಗಳನ್ನು ಗೆಲ್ಲದಿದ್ದರೆ ಸರ್ಕಾರ ಬಹುಮತ ಸಾಬೀತುಪಡಿಸಲು ವಿಫಲವಾಗಬಹುದು. ಆಗ ಯಡಿಯೂರಪ್ಪ ನೇತೃತ್ವದ ಅಧಿಕಾರ ಕಳೆದುಕೊಳ್ಳಲಿದೆ.

ಒಂದು ವೇಳೆ ಸುಪ್ರೀಂಕೋರ್ಟ್‌ನಿಂದಲೂ ಸೋಮವಾರ ಪರಿಹಾರ ಸಿಗದೆ ಉಪಚುನಾವಣೆ ನಡೆಯುವುದು ಪಕ್ಕಾ ಆದಲ್ಲಿ ಆಗ ಈ ಅನರ್ಹ ಶಾಸಕರ ಕುಟುಂಬದ ಸದಸ್ಯರಿಗೆ ಅಥವಾ ಅವರು ಹೇಳಿದವರಿಗೆ ಟಿಕೆಟ್‌ ನೀಡಬಹುದು. ಆದರೆ, ಆಗ ಗೆಲ್ಲಿಸಿಕೊಂಡು ಬರುವುದು ಸುಲಭವಾಗಿರುವುದಿಲ್ಲ ಎಂಬ ಚಿಂತೆಯೂ ಯಡಿಯೂರಪ್ಪ ಅವರನ್ನು ಕಾಡುತ್ತಿದೆ.

click me!