
ವಾಷಿಂಗ್ಟನ್(ಸೆ.21): ಜಮ್ಮು ಮತ್ತು ಕಾಶ್ಮೀರ ಪ್ರಗತಿ ಮತ್ತು ಸಮೃದ್ಧಿಯ ಹಾದಿಯಲ್ಲಿದ್ದು, ಇದನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಪ್ಪುತ್ತಿಲ್ಲ ಎಂದು ಅಮೆರಿಕಕ್ಕೆ ಭಾರತೀಯ ರಾಯಭಾರಿ ಹರ್ಷವರ್ಧನ್ ಶ್ರೀಂಗ್ಲಾ ಅಭಿಪ್ರಾಯಪಟ್ಟಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ರದ್ದತಿ ಕುರಿತು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಲೇಖನ ಬರೆದಿರುವ ಹರ್ಷವರ್ಧನ್, ಈ ಮೊದಲಿಗಿಂತ ಹೆಚ್ಚು ಶ್ರೀಮಂತವಾದ ಕಾಶ್ಮೀರವನ್ನು ನಿರ್ಮಿಸಲು ಭಾರತ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಕಾಶ್ಮೀರ ಅಭಿವೃದ್ಧಿಗೆ ಅಡ್ಡಿಯಾಗಿರುವ ನಿಯಮಗಳನ್ನು ಭಾರತ ಸರ್ಕಾರ ರದ್ದುಗೊಳಿಸಿದ್ದು, ಇದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹರ್ಷವರ್ಧನ ತಮ್ಮ ಲೇಖನದಲ್ಲಿ ಕಿಡಿಕಾರಿದ್ದಾರೆ.
ಇಮ್ರಾನ್ ಆಡಳಿತಾವಧಿಯಲ್ಲಿ ಪಾಕ್ ಜನತೆ ಆರ್ಥಿಕ ಕುಸಿತದ ಆತಂಕ ಎದುರಿಸುತ್ತಿದ್ದು, ಪಾಕಿಸ್ತಾನದಲ್ಲಿ ಹಣದುಬ್ಬರ ಐದು ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ರಾಷ್ಟ್ರೀಯ ಸಾಲ ಒಟ್ಟು ದೇಶೀಯ ಉತ್ಪನ್ನವನ್ನು ಮೀರಿದ್ದು, ಇಂತಹ ಪರಿಸ್ಥಿತಿಯಲ್ಲಿ ಜನರ ಗಮನ ಬೇರೆಡೆ ಸೆಳೆಯಲು ಇಮ್ರಾನ್ ಖಾನ್ ಕಾಶ್ಮೀರ ನಾಟಕವಾಡುತ್ತಿದ್ದಾರೆ ಎಂದು ಶ್ರೀಂಗ್ಲಾ ಹರಿಹಾಯ್ದಿದ್ದಾರೆ.
ಸಂವಿಧಾನದ 370ನೇ ವಿಧಿ, ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರಗಳು ಮತ್ತು ಸಂವಹನ ವಿಷಯಗಳ ಹೊರತಾಗಿ ಜಮ್ಮು ಮತ್ತು ಕಾಶ್ಮೀರದ ವ್ಯವಹಾರಗಳಲ್ಲಿ ಭಾರತ ಸರ್ಕಾರದ ಪ್ರವೇಶ ತಡೆಯುತ್ತಿತ್ತು. ಇದರಿಂದ ಭಾರತದ ಉಳಿದ ಭಾಗ ಬಲವಾದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಹೊಂದಿದ್ದರೆ, ಆರ್ಥಿಕ ಬೆಳವಣಿಗೆ ಸೇರಿದಂತೆ ಅನೇಕ ವಿಷಯಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಹಿಂದುಳಿದಿದೆ ಎಂದು ಶ್ರೀಂಗ್ಲಾ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.