ಮುಖ ನೋಡದವರು ಈಗ ತಬ್ಬಿಕೊಳ್ಳುತ್ತಿದ್ದಾರೆ

By Web DeskFirst Published Oct 22, 2018, 9:08 PM IST
Highlights

 ಜಾತಿಯ ವಿಷ ಬೀಜ ಬಿತ್ತಲು ಸೊರಬದಲ್ಲಿ ಸೋತ ವ್ಯಕ್ತಿಯನ್ನು ನಿಲ್ಲಿಸಲಾಗಿದೆ. ಚುನಾವಣೆ ಎದುರಿಸಲು 12 ವರ್ಷದಿಂದ ಪರಸ್ಪರ ಮುಖ ನೋಡದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಬಾಚಿ ತಬ್ಬಿಕೊಳ್ಳುತ್ತಿದ್ದಾರೆ.

ಶಿವಮೊಗ್ಗ(ಅ.22): ಹಣ, ಹೆಂಡ, ತೋಳ್ಬಲ, ಜಾತಿಯ ವಿಷಬೀಜ ಬಿತ್ತಿ ಈ ಬಾರಿಯ ಲೋಕಸಭಾ ಉಪ ಚುನಾವಣೆಯಲ್ಲಿ ಗೆಲ್ಲುವ ಕುತಂತ್ರವನ್ನು ಕಾಂಗ್ರೆಸ್-ಜೆಡಿಎಸ್‌ನ ಅಭ್ಯರ್ಥಿ ಮಾಡುತ್ತಿದ್ದು, ಅದಕ್ಕೆ ಮನ್ನಣೆ ನೀಡದೆ ತಕ್ಕ ಪಾಠ ಕಲಿಸಬೇಕು ಎಂದು ವಿಪಕ್ಷ ನಾಯಕ ಶಾಸಕ ಬಿ.ಎಸ್ . ಯಡಿಯೂರಪ್ಪ ಹೇಳಿದರು.

ತಾಲೂಕಿನ ಈಸೂರು ಗ್ರಾಮದಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿಯ ವಿಷ ಬೀಜ ಬಿತ್ತಲು ಸೊರಬದಲ್ಲಿ ಸೋತ ವ್ಯಕ್ತಿಯನ್ನು ನಿಲ್ಲಿಸಲಾಗಿದೆ. ಚುನಾವಣೆ ಎದುರಿಸಲು 12 ವರ್ಷದಿಂದ ಪರಸ್ಪರ ಮುಖ ನೋಡದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಬಾಚಿ ತಬ್ಬಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಜನರ ವಿಶ್ವಾಸ ಗಳಿಸಿ ರಾಘವೇಂದ್ರಗೆ ಶೇ. 85ಕ್ಕೂ ಅಧಿಕ ಮತಗಳನ್ನು ತಂದುಕೊಡ ಬೇಕೆಂದರು.

ಶಿವಮೊಗ್ಗ ಶಾಸಕ ಕೆ.ಎಸ್ ಈಶ್ವರಪ್ಪ ಮಾತನಾಡಿ, ಚುನಾವಣೆಗೂ ಮುನ್ನ ನಿಮ್ಮಪ್ಪನಾಣೆಗೂ ಸಿಎಂ ಆಗಲ್ಲ ಎಂದಿದ್ದ ಸಿದ್ದರಾಮಯ್ಯ ಅವರೇ ಕುಮಾರಸ್ವಾಮಿ ಅವರ ನ್ನು ಸಿಎಂ ಮಾಡಿದರು. ಬಿಜೆಪಿ ಕೋಮುವಾದಿ ಪಕ್ಷ ಎನ್ನುವ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಕುರುಬ ಸಮಾಜಕ್ಕೆ ನೀಡಿದ ಕೊಡುಗೆ ಏನು? ಕಾಗಿನೆಲೆ  ಅಭಿವೃದ್ಧಿಗಾಗಿ ಯಡಿಯೂರಪ್ಪ ಅವರೇ ಕನಕದಾಸರ ಜಯಂತಿ ಆಚರಣೆ ಜಾರಿಗೊಳಿಸಿದರು. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಕರೆತಂದ ವಿಶ್ವನಾಥ್, ರೇವಣ್ಣ ಎಲ್ಲರನ್ನೂ ದೂರವಿಟ್ಟು ತುಳಿದಿದ್ದಾರೆ. ಇದೀಗ ಈಡಿಗರನ್ನು ಒಗ್ಗೂಡಿಸುತ್ತೇವೆಂದು ಜಾತಿ ರಾಜಕಾರಣ ಮಾಡುತ್ತಿದ್ದಾರೆ.

ಇದಕ್ಕಾಗಿಯೇ ಅವಳಿ-ಜವಳಿಗಳಾದ ಕುಮಾರಸ್ವಾಮಿ-ಸಿದ್ದರಾಮಯ್ಯ ಜಿಲ್ಲೆಗೆ ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಅಭ್ಯರ್ಥಿ ರಾಘವೇಂದ್ರ ಮಾತನಾಡಿ, ಈ ಬಾರಿ ಮತ್ತೆ ನನ್ನನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು. ಶಾಸಕರಾದ ರುದ್ರೇಗೌಡ, ಮುಖಂಡ ಗುರುಮೂರ್ತಿ, ಜಿಪಂ ಸದಸ್ಯರಾದ ಆರುಂಧತಿ, ರೇಣುಕಾ, ಮಾಜಿ ಸದಸ್ಯ ಈಸೂರು ಬಸವರಾಜ, ತಾಪಂ ಸದಸ್ಯ ಸುರೇಶನಾಯ್ಕ, ನಾಗರಾಜ ಕೊರಲಹಳ್ಳಿ ಇದ್ದರು.

click me!