
ದಾವಣಗೆರೆ: ರಾಯಣ್ಣ ಬ್ರಿಗೇಡ್ ಚಟುವಟಿಕೆ ನಡೆಸುವ ಕುರಿತಾದ ಪಟ್ಟು ಇನ್ನೂ ಸಡಿಲಿಸದ ಹಿರಿಯ ಬಿಜೆಪಿ ನಾಯಕ, ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು, ಯಡಿಯೂರಪ್ಪನವರಿಗೆ ತಪ್ಪಿನ ಅರಿವಾಗಿದ್ದರೆ ಸಂತೋಷ್ ಅವರ ಕ್ಷಮೆ ಕೇಳಲಿ ಎಂದಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ‘ರಾಜ್ಯದಲ್ಲಿ ಸಂಘಟನೆ ಕಟ್ಟಿಬೆಳೆಸಿದವರಲ್ಲಿ ಸಂತೋಷ್ ಸಹ ಒಬ್ಬರು. ಇಂಥವರ ಬಗ್ಗೆ ಯಡಿಯೂರಪ್ಪ ಹಗುರವಾಗಿ ಮಾತನಾಡಿದ್ದು ತಪ್ಪು' ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅವರಿಗೆ ತಾವು ಆಡಿದ್ದು ತಪ್ಪು ಎನಿಸಿದರೆ ಸಂತೋಷ್ ಬಳಿ ಕ್ಷಮೆ ಕೋರುವಂತೆ ಪ್ರಾರ್ಥಿಸುವೆ ಎಂದೂ ಅವರು ಹೇಳಿದ್ದಾರೆ.
ಹರಿಹರ ತಾಲೂಕು ಬೆಳ್ಳೂಡಿ ಕನಕ ಗುರುಪೀಠದ ಶಾಖಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂಘ ಪರಿವಾರದ ಹಿರಿಯ ಪ್ರಚಾರಕ ಬಿ.ಎಲ್.ಸಂತೋಷ್ ಒಬ್ಬ ವ್ಯಕ್ತಿಯಲ್ಲ. ಸಂಘದ ಪ್ರತಿನಿಧಿಯಾಗಿ ಬಿಜೆಪಿ ರಾಷ್ಟ್ರೀಯ ನಾಯಕನಾಗಿ ಬೆಳೆದವರ ಬಗ್ಗೆ ಯಡಿಯೂರಪ್ಪ ಹಗುರವಾಗಿ ಮಾತನಾಡಿದ್ದು ಲಕ್ಷಾಂತರ ಕಾರ್ಯಕರ್ತರಿಗೆ ನೋವನ್ನುಂಟು ಮಾಡಿದೆ. ಸಂತೋಷ್ ಬಳಿ ಕ್ಷಮೆ ಕೋರಿ ಕಾರ್ಯಕರ್ತರ ನೋವನ್ನೂ ರಾಜ್ಯಾಧ್ಯಕ್ಷರು ನಿವಾರಣೆ ಮಾಡಲಿ ಎಂದು ಮನವಿ ಮಾಡಿದರು.
ಕಾಂಗ್ರೆಸ್-ಜೆಡಿಎಸ್ ಮುಸುಕಿನ ಗುದ್ದಾಟ ನಡೆದಿದೆ. ಬಿಜೆಪಿಯ ಆಂತರಿಕ ವಿಚಾರ ಬಹಿರಂಗ ವಾಗಬಾರದಿತ್ತು. ಇದು ಒಂದು ಕುಟುಂಬದ ಸಮಸ್ಯೆ ಯಾಗಿದ್ದು, ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.