
ತುಮಕೂರು[ಮಾ.25]: ಹಲವು ವರ್ಷಗಳಿಂದ ಪರಸ್ಪರ ಮುನಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಕಡೆಗೂ ರಾಜಿಯಾಗಿದ್ದಾರೆ.
ಖುದ್ದು ಯಡಿಯೂರಪ್ಪನವರೇ ಸೊಗಡು ಶಿವಣ್ಣ ಅವರಿಗೆ ಕರೆ ಮಾಡಿ ಮನೆಗೆ ಬರುವುದಾಗಿ ತಿಳಿಸಿದ್ದರು. ಅದರಂತೆ ಭಾನುವಾರ ಸಂಜೆ ಸೊಗಡು ಶಿವಣ್ಣ ಅವರ ಮನೆಗೆ ತೆರಳಿ ಸುಮಾರು ಅರ್ಧ ಗಂಟೆಗಳ ಕಾಲ ಚರ್ಚೆ ನಡೆಸಿದರು. ಬಳಿಕ ಹೊರ ಬಂದ ಯಡಿಯೂರಪ್ಪನವರು ಸೊಗಡು ಶಿವಣ್ಣ ಅವರಿಗೆ ಈ ಹಿಂದೆ ಅನ್ಯಾಯ ಆಗಿದೆ. ಚುನಾವಣೆ ನಂತರ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಅವರಿಗೆ ಏನು ಸ್ಥಾನಮಾನ ಕೊಡಬೇಕೋ ಅದನ್ನು ಕೊಡುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಸಿದ್ಧಗಂಗೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡುತ್ತೇವೆ. ಈ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು. ಕರ್ನಾಟಕದಲ್ಲಿ 22 ಕ್ಕೂ ಹೆಚ್ಚು ಕ್ಷೇತ್ರವನ್ನು ಗೆಲ್ಲುವುದಾಗಿ ತಿಳಿಸಿದರು.
ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡು ಕೆ.ಎಸ್.ಈಶ್ವರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಹಲವು ಬಾರಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು. ಯಡಿಯೂರಪ್ಪ ವಿರುದ್ಧ ಬಂಡಾಯವೆದ್ದಾಗ ಎಲ್ಲ ಅತೃಪ್ತರ ಸಭೆ ನಡೆಯುತ್ತಿದ್ದದ್ದು ತುಮಕೂರು ಹೊರವಲಯದ ಸೊಗಡು ಶಿವಣ್ಣ ಅವರ ತೋಟದ ಮನೆಯಲ್ಲಿ.
ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ತುಮಕೂರು ಕ್ಷೇತ್ರಕ್ಕೆ ಸೊಗಡು ಶಿವಣ್ಣ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಯಡಿಯೂರಪ್ಪ ಟಿಕೆಟ್ ನಿರಾಕರಿಸಿದ್ದರು. ಅದಕ್ಕೂ ಮುನ್ನ ಜಿಲ್ಲಾ ಬಿಜೆಪಿ ಅಧ್ಯಕ್ಷಗಾದಿ ಸಿಗುತ್ತದೆ ಎಂದು ನಿರೀಕ್ಷಿಸಿದ್ದರು. ಅದೂ ಕೂಡಾ ಹುಸಿಯಾಯಿತು. ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಳೆದ ಚುನಾವಣೆಯಲ್ಲಿ ತಟಸ್ಥವಾಗಿದ್ದರು. ಮಾಜಿ ಸಚಿವ ಜಿ.ಎಸ್. ಬಸವರಾಜ್ ಟಿಕೆಟ್ ಘೋಷಣೆಯಾದಾಗಲಂತೂ ಪಕ್ಷ ಬಿಡದೆ ತಟಸ್ಥವಾಗಿ ಉಳಿಯಲು ನಿರ್ಧರಿಸಿದ್ದರು
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.