ಕಪ್ಪ ಪ್ರಕರಣ; ಸಿಡಿಯಲ್ಲಿನ ಬಿಎಸ್'ವೈ, ಅನಂತ್ ಧ್ವನಿ ಅಸಲಿ: ಫೋರೆನ್ಸಿಕ್ ವರದಿ

By Suvarna Web DeskFirst Published Oct 8, 2017, 5:07 PM IST
Highlights

ಹೈಕಮಾಂಡ್'​ಗೆ ಕಪ್ಪ ವಿಚಾರ ಬಿಎಸ್​​ ಯಡಿಯೂರಪ್ಪ ಹಾಗು ಅನಂತ್​ ಕುಮಾರ್​ ಅವರಿಗೆ ಮುಳುವಾಗುವ ಸಾಧ್ಯತೆ ಕಾಣುತ್ತಿದೆ. ಕಾರ್ಯಕ್ರಮವೊಂದರಲ್ಲಿ ನಡೆದ ಪಿಸುಮಾತು, ದೊಡ್ಡ ವಿವಾದ ಸೃಷ್ಟಿಸಿದ್ದು ಮರೆಯುವ ಮುನ್ನವೇ, ಕಾನೂನು ಅಂಗಕ್ಕೆ ಬಂದಿದೆ. ಇಬ್ಬರು ನಾಯಕರ ಧ್ವನಿ ದೃಢೀಕರಿಸಿರುವ ಎಫ್​ಎಸ್​ಎಲ್​ ವರದಿ, ಇಬ್ಬರಿಗೂ ಸಂಕಷ್ಟ ತಂದೊಡ್ಡಿದೆ.

ಬೆಂಗಳೂರು(ಅ. 08): ಕಾಂಗ್ರೆಸ್​​ ಎಂಎಲ್'​ಸಿ ಗೋವಿಂದರಾಜು ಡೈರಿಯಲ್ಲಿನ ಹೈಕಮಾಂಡ್'​ಗೆ ಕಪ್ಪ ವಿಚಾರದ ಅಸ್ತ್ರ ಬಳಸಿಕೊಳ್ಳಲು ಮುಂದಾಗಿದ್ದ ಬಿಜೆಪಿಗೆ ಈಗ ಅದೇ ವಿಷಯ ತಿರುಗುಬಾಣವಾಗಿದೆ. ಬಿಜೆಪಿ ಕಾರ್ಯಕ್ರಮವೊಂದರಲ್ಲಿ, ಗೋವಿಂದರಾಜ್​ ಡೈರಿ ವಿಷಯ ಚರ್ಚಿಸುತ್ತಿದ್ದ ಯಡಿಯೂರಪ್ಪ- ಅನಂತಕುಮಾರ್​, ತಾವೂ ಸಹ ಹೈಕಮಾಂಡ್​​ಗೆ ಕಪ್ಪ ನೀಡಿರುವ ಬಗ್ಗೆ ಪಿಸುಗುಟ್ಟಿದ್ರು ಅನ್ನೋದು ದೊಡ್ಡ ಸುದ್ದಿಯಾಗಿತ್ತು. ಇವರಿಬ್ಬರ ಸಂಭಾಷಣೆಯ ಸಿಡಿಯನ್ನು ಕಾಂಗ್ರೆಸ್ ಎಂಎಲ್'​ಸಿ ಉಗ್ರಪ್ಪ ಬಿಡುಗಡೆ ಮಾಡಿದ್ದರು. ಬಿಜೆಪಿ ಹೈಕಮಾಂಡ್​ಗೆ ಕಪ್ಪ ಕೊಟ್ಟಿರುವುದಾಗಿ ಅನಂತ್​ಕುಮಾರ್ ಒಪ್ಪಿಕೊಂಡಿದ್ದಾರೆಂದು ಉಗ್ರಪ್ಪ ಆರೋಪಿಸಿದ್ರು. ಈ ಕುರಿತು ಕಾಂಗ್ರೆಸ್ ವಕ್ತಾರ ಐವಾನ್​ ಡಿಸೋಜಾ ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ರು. ನಂತರ ಸೈಬರ್​ ಪೊಲೀಸ್​ ಠಾಣೆಗೆ ಪ್ರಕರಣ ವರ್ಗಾವಣೆಯಾಗಿ, ಸಿಡಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಲಾಗಿತ್ತು. ಇದೀಗ ಎಫ್'​ಎಸ್​ಎಲ್​​ ವರದಿ ಬಂದಿದ್ದು, ಸಿಡಿಯಲ್ಲಿರುವುದು ಯಡಿಯೂರಪ್ಪ ಹಾಗೂ ಅನಂತ್​ ಕುಮಾರ್​ ಅವರ ಧ್ವನಿಯೇ ಎಂದು ಪ್ರಮಾಣಿಕರಿಸಿದೆ. ಈ ವರದಿ ಸುವರ್ಣ ನ್ಯೂಸ್'​ಗೆ ಲಭ್ಯವಾಗಿದೆ.

ಎಫ್'​ಎಸ್'​ಎಲ್​​ ಅಧಿಕಾರಿಗಳು ಸಿಡಿಯಲ್ಲಿರುವ ಧ್ವನಿಯನ್ನು ಯಡಿಯೂರಪ್ಪ ಹಾಗೂ ಅನಂತಕುಮಾರ್ ಅವರಿಂದ ಪಡೆದ ಮಾದರಿಯನ್ನು ಪ್ರಯೋಗಾಲಯದಲ್ಲಿ ಹೋಲಿಕೆ ಮಾಡಿದೆ. ಪರೀಕ್ಷೆಯ ನಂತರ ಸಿಡಿಯಲ್ಲಿನ ಧ್ವನಿ ಬಿಎಸ್​ವೈ ಹಾಗೂ ಅನಂತ್​​ ಕುಮಾರ್​  ಅವರದ್ದೇ ಎಂದು ಎಫ್​​ಎಸ್​ಎಲ್​ ಸಹಾಯಕ ನಿರ್ದೇಶಕಿ ಸಿ.ಶ್ರೀವಿದ್ಯಾ ಅವರು ಸೈಬರ್​ ಪೊಲೀಸರಿಗೆ ವರದಿ ನೀಡಿದ್ದಾರೆ.

ಬಿಎಸ್'ವೈ- ಅನಂತ್ ವಿರುದ್ಧ ಎಫ್​ಐಆರ್​?
ಈ ವರದಿಯನ್ನು ಪರಿಶೀಲಿಸಿರುವ ಸೈಬರ್ ಪೊಲೀಸರು, ಇದು ಭ್ರಷ್ಟಾಚಾರ ವಿಚಾರವಾಗಿರುವುದರಿಂದ ಪ್ರಕರಣವನ್ನು ಎಸಿಬಿಗೆ ವರ್ಗಾವಣೆ ಮಾಡಿದ್ದಾರೆ. ಎಫ್​ಎಸ್​ಎಲ್ ವರದಿ ಆಧರಿಸಿ, ಇಬ್ಬರೂ ನಾಯಕರ ಮೇಲೆ ಎಫ್​ಐಆರ್ ದಾಖಲಿಸಲು ಎಸಿಬಿ ಚಿಂತನೆ ನಡೆಸಿದೆ ಎನ್ನಲಾಗಿದೆ.

ಸಿಎಂ ವಿನಾಶಕಾಲೇ ವಿಪರೀತ ಬುದ್ಧಿ:
ಇದೇ ವೇಳೆ ಈ ಕುರಿತು, ಪ್ರತಿಕ್ರಿಯಿಸಿರುವ  ಯಡಿಯೂರಪ್ಪ, ಇಂತಹ ನೂರು ಕೇಸ್​ ದಾಖಲಿಸಲಿ, ಹೆದರೋದಿಲ್ಲ ಅಂತ ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲ, ಸಿದ್ದರಾಮಯ್ಯನವರದ್ದು ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತಾಗಿದೆ ಎಂದೂ ಬಿಎಸ್'ವೈ ಟೀಕಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸರಕಾರದ ಏಜೆಂಟ್'ನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷರು, "ಸಿಎಂ ವಿರುದ್ಧ ಯಾವುದೇ ದೂರು ನೀಡಿದರೂ ಯಾಕೆ ಎಫ್'ಐಆರ್ ದಾಖಲಾಗೋದಿಲ್ಲ? ನಮಗೊಂದು ನ್ಯಾಯ ಇವರಿಗೊಂದು ನ್ಯಾಯನಾ?" ಎಂದು ಪ್ರಶ್ನಿಸಿದ್ದಾರೆ.

ಶಿವರಾಮ ಕಾರಂತ್​ ಡಿನೋಟಿಫಿಕೇಷನ್​ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಯತ್ನಿಸಿದ ಸರ್ಕಾರಕ್ಕೆ ಹಿನ್ನಡೆಯಾಗಿತ್ತು. ಹೀಗಾಗಿ ಕಪ್ಪ ವಿಚಾರದಲ್ಲಿ ಎಫ್​'ಎಸ್​ಎಲ್​ ವರದಿ ಆಧರಿಸಿ ಮತ್ತೆ ಯಡಿಯೂರಪ್ಪರನ್ನು ಕಾನೂನಿನ ಕುಣಿಕೆಗೆ ಸಿಲುಕಿಸಲು ಸರ್ಕಾರ ತಂತ್ರ ಎಣೆಯುತ್ತಿದೆ ಅನ್ನೋ ಮಾತು ಕೇಳಿಬರುತ್ತಿದೆ. ಒಟ್ನಿನಲ್ಲಿ ಹೈಕಮಾಂಡ್​​'ಗೆ ಕಪ್ಪ ನೀಡುವ ವಿಚಾರದಲ್ಲಿ ಕಾಂಗ್ರೆಸ್- ಬಿಜೆಪಿ ನಡುವಿನ ಸೇಡಿನ ರಾಜಕೀಯ ಮತ್ತೊಂದು ತಿರುವು ಪಡೆದುಕೊಂಡಿದೆ.

- ರಮೇಶ್​ ಕೆ.ಹೆಚ್., ಕ್ರೈಂ ಬ್ಯೂರೋ, ಸುವರ್ಣ ನ್ಯೂಸ್​​

click me!