
ನವದೆಹಲಿ(ಅ.08): ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸಿಕ್ಕಿಂನಲ್ಲಿ ಭಾರತ-ಚೀನಾ ಗಡಿಗೆ ಭೇಟಿ ನೀಡಿದ ವೇಳೆ ಚೀನೀ ಸೈನಿಕರಿಗೆ 'ನಮಸ್ತೇ' ಎಂದು ಹೇಳಲು ಕಲಿಸಿದರು. ರಕ್ಷಣಾ ಸಚಿವಾಲಯದ ಟ್ವಿಟರ್ ಹ್ಯಾಂಡಲ್ ಮೂಲಕ ಪ್ರಕಟಿಸಲಾದ ವೀಡಿಯೋ ಒಂದರಲ್ಲಿ, ನಿರ್ಮಲಾ ಸೀತಾರಾಮನ್ ಚೀನೀ ಅಧಿಕಾರಿಯ ಜತೆ ಸಂವಾದ ನಡೆಸುತ್ತಿರುವುದು ಕಾಣಿಸುತ್ತಿದೆ.
ಆ ಚೀನೀ ಅಧಿಕಾರಿ ತಮ್ಮ ಬಳಗದ ಸೈನಿಕರನ್ನು ಸಚಿವೆಗೆ ಪರಿಚಯಿಸಿದರು. ಈ ಸಂದರ್ಭದಲ್ಲಿ ಚೀನೀ ಅಧಿಕಾರಿಗಳಿಗೆ ಸಚಿವೆ ಎರಡೂ ಕೈಗಳನ್ನು ಜೋಡಿಸಿ 'ನಮಸ್ತೇ' ಎಂದು ಅಭಿನಂದಿಸಿದರು. ಅನಂತರ ಗಡಿಯಾಚೆಗಿನ ಯೋಧರ ಜತೆ 'ನಮಸ್ತೇ' ಎಂಬ ಅಭಿವಾದನದ ಅರ್ಥವನ್ನು ತಿಳಿಸಿಕೊಟ್ಟರು. 'ನಮಸ್ತೇ' ಎಂದರೇನು ನಿಮಗೆ ಗೊತ್ತೇ ಎಂದು ಸಚಿವೆ ಪ್ರಶ್ನಿಸಿದರು. ಭಾರತೀಯ ಸೈನಿಕರು ಅರ್ಥ ತಿಳಿಸಲು ಹೊರಟಾಗ 'ನೀವು ಸುಮ್ಮನಿರಿ' ಎಂದು ಸಚಿವೆ ಸೂಚಿಸಿದರು.
ಬಳಿಕ ಚೀನೀ ಅಧಿಕಾರಿ 'ನಿಮ್ಮನ್ನು ಭೇಟಿಯಿಂದ ಖುಷಿಯಾಗಿದೆ' ಎಂದು ಅರ್ಥವನ್ನು ಊಹಿಸಿ ನುಡಿದರು. ಚೀನೀ ಭಾಷೆಯಲ್ಲಿ ನಮಸ್ಕಾರ ಸೂಚಿಸುವುದನ್ನು ತಮಗೆ ಕಲಿಸುವಂತೆ ಸಚಿವೆ ಚೀನೀ ಅಧಿಕಾರಿಗೆ ಕೇಳಿದರು. ಆಗ ಆ ಅಧಿಕಾರಿ 'ನಿ ಹೋ' ಎಂದು ಉತ್ತರಿಸಿದರು. ಇಂಗ್ಲಿಷ್ ಬಲ್ಲ ಹಿರಿಯ ಚೀನೀ ಅಧಿಕಾರಿಯನ್ನು ಅಭಿನಂದಿಸಿದ ಸಚಿವೆ, ನಿಮ್ಮ ಭಾಷೆ ಚೆನ್ನಾಗಿದೆ ಎಂದರು.
ಡೋಕ್ಲಾಂನಿಂದ 10 ಕಿ.ಮೀ ದೂರದ ಚುಂಬಿ ಕಣಿವೆಯಲ್ಲಿ ಚೀನಾದ ಪಿಎಲ್‌ಎ ರಸ್ತೆ ನಿರ್ಮಾಣ ಆರಂಭಿಸಿದೆ ಎಂಬ ವರದಿಗಳ ಪ್ರಕಟವಾದ ಕೆಲವೇ ದಿನಗಳಲ್ಲಿ ಈ ಸ್ನೇಹಯುತ ಸಂಭಾಷಣೆ ನಡೆದಿದೆ. ಹಾಗಿದ್ದರೂ ಡೋಕ್ಲಾಂ ಪ್ರದೇಶದಲ್ಲಿ ಯಥಾಸ್ಥಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಭಾರತ ಸರಕಾರ ಸ್ಪಷ್ಟಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.