
ಬೆಂಗಳೂರು (ಫೆ.20): ಶತ್ರು ರಾಷ್ಟ್ರಗಳೂ ಸೇರಿದಂತೆ ಯುದ್ಧಾಸ್ತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಅಮೆರಿಕದಂತಹ ರಾಷ್ಟ್ರವನ್ನೂ ನಿಬ್ಬೆರಗಾಗಿಸಿದ ‘ಬ್ರಹ್ಮೋಸ್’ ಸಂಪೂರ್ಣ ಸ್ವದೇಶಿ ನಿರ್ಮಿತ ಕ್ಷಿಪಣಿಗೆ ಬೆಂಗಳೂರಿನಲ್ಲೇ ಮೂತಿ ತಯಾರಿಸುವ ಕೆಲಸ ಆರಂಭವಾಗಿದೆ. ಸೀಕರ್ ಎಂದು ಕರೆಯಲ್ಪಡುವ ಈ ಮೂತಿ ಕ್ಷಿಪಣಿಯ ಗುರಿ ನಿಗದಿ ಸೇರಿದಂತೆ ಶತ್ರು ಪಾಳಯದ ಕ್ಷಿಪಣಿಗಳು, ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಿವೆ. ಇದುವರೆಗೆ ಕೇವಲ ಅಮೆರಿಕ,ರಷ್ಯಾ,ಫ್ರಾನ್ಸ್,ಚೀನಾ,ಇಸ್ರೇಲ್‌ಗಳು ಮಾತ್ರ ಉತ್ಪಾದಿಸುತ್ತಿರುವ ಈ ಆರ್‌ಎಸ್ ಸೀಕರ್ಸ್ ಸಂಪೂರ್ಣ ಸ್ವದೇಶಿ ಎನಿಸಿಕೊಳ್ಳಲಿದೆ.
ಭಾರತದ ರಕ್ಷಣಾ ಉತ್ಪನ್ನಗಳಲ್ಲಿ ಅತ್ಯಂತ ಪ್ರಮುಖ ಮೈಲಿಗಲ್ಲು ಎಂದೇ ಪರಿಗಣಿತವಾಗಿರುವ ಬ್ರಹ್ಮೋಸ್ ಯಶಸ್ಸು ಸಮಸ್ತ ವಿಶ್ವವೇ ಭಾರತವನ್ನು ನೋಡುವಂತೆ ಮಾಡಿತ್ತು. ನೆರೆಯ ಚೀನಾ, ಪಾಕಿಸ್ತಾನಗಳಿಗಂತೂ ಸಿಂಹಸ್ವಪ್ನವಾಗಿ ಕಾಡಿತ್ತು. ಇದೀಗ ಈ ರಾಷ್ಟ್ರಗಳ ಇನ್ನಷ್ಟು ನಿದ್ದೆಗೆಡಿಸುವ ಸುಖೊಯ್ ಜತೆಗಿನ ಪರೀಕ್ಷಾರ್ಥ ಉಡಾವಣೆ ಮಾರ್ಚ್ ಎರಡನೇ ವಾರದಲ್ಲಿ ನಡೆಯಲಿದ್ದು ಯಶಸ್ವಿಯಾದಲ್ಲಿ ಬೆಂಗಳೂರಿನಲ್ಲೇ ಸೀಕರ್ ತಯಾರಿಗೆ ಈಗ ನಡೆಯುತ್ತಿರುವ ಸಿದ್ಧತೆಗಳಿಗೆ ಇನ್ನಷ್ಟು ಉತ್ತೇಜನಕಾರಿಯಾಗಲಿದೆ.
ರಷ್ಯಾದಿಂದ ಆಮದು
ಬ್ರಹ್ಮೋಸ್ ನಿರ್ಮಾಣಕ್ಕೆ ಮುಂದಡಿ ಇಟ್ಟಾಗ ಕ್ಷಿಪಣಿಯ ಬಹುಮುಖ್ಯ ಅಂಗವಾದ ಮತ್ತು ಮೂತಿಯಲ್ಲಿರುವ ಹೆಡ್ ಸೀಕರ್ ರಷ್ಯಾದಿಂದ ಆಮದು ಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು. ಇದಕ್ಕಾಗಿ ರಷ್ಯಾಗೆ ಸೀಕರ್ ಪೂರೈಕೆಗೆ ಆರ್ಡರ್ ನೀಡಲಾಗಿತ್ತು. ಆದರೆ ಬ್ರಹ್ಮೋಸ್ ಉತ್ಪಾದನೆಯ ಅಂದಿನ ಮುಖ್ಯಸ್ಥರಾಗಿದ್ದ ಡಾ.ಪಿಳ್ಳ್ತ್ರೈ ೨೫ ವರ್ಷಗಳಷ್ಟು ಹಳೆಯ ಈ ರಷ್ಯನ್ ತಂತ್ರಜ್ಞಾನದ ಸೀಕರ್‌ಗಳಲ್ಲಿ ಏನಾದರೂ ಸಮಸ್ಯೆ ತಲೆದೋರಿದರೆ ಮತ್ತೆ ರಷ್ಯಾದತ್ತ ಮುಖ ಮಾಡಬೇಕಿದೆ. ಮಾತ್ರವಲ್ಲ ರಷ್ಯಾ ಉತ್ಪಾದಿಸಿದ್ದ ಸೀಕರ್‌ಗಳ ಕೆಲ ಬಿಡಿ ಭಾಗಗಳು ರಷ್ಯಾದಲ್ಲೇ ದೊರೆಯುವ ಸಾಧ್ಯತೆಗಳು ಕ್ಷೀಣಿಸಿದ್ದ ಹಿನ್ನೆಲೆಯಲ್ಲಿ ಈ ಸೀಕರ್‌ಗಳ ತಯಾರಿ ಸಾಧ್ಯವೇ ಎಂದು ಭಾರತ್ ಎಲೆಕ್ಟ್ರಾನಿಕ್ಸ್‌ನ(ಬಿಇಎಲ್) ನಿವತ್ತ ಅಧ್ಯಕ್ಷರಾಗಿ ತಮ್ಮದೇ ಸಂಸ್ಥೆ ಆಲ್ಫಾ ಡಿಸೈನ್‌ನ ಟೆಕ್ನಾಲಜೀಸ್ ಆರಂಭ ಮಾಡಿದ್ದ ಕರ್ನಲ್ ಎಚ್.ಎಸ್.ಶಂಕರ್‌ರನ್ನು ಕೇಳಿದಾಗ ಹಿಂದು ಮುಂದು ನೋಡದೇ ಒಪ್ಪಿಕೊಂಡಿದ್ದಾಗಿ ಕ.ಶಂಕರ್ ’’ಕನ್ನಡಪ್ರಭ’’ಕ್ಕೆ ತಿಳಿಸಿದರು. ತಕ್ಷಣ ತಿಳುವಳಿಕೆ ಒಪ್ಪಂದಕ್ಕೆ ಬ್ರಹ್ಮೋಸ್‌ನೊಂದಿಗೆ ಸಹಿ ಹಾಕಿದ್ದಾಗಿ ಹೇಳಿದರು.
ಪರೀಕ್ಷೆಗೆ ಸಿದ್ಧ
ಮೂರು ವರ್ಷದ ಹಿಂದಿನ ಈ ಮಾತು ಇದೀಗ ಸಾಕಾರಗೊಂಡಿದ್ದು ಬೆಂಗಳೂರು ನಿರ್ಮಿತ ಸೀಕರ್‌ಗಳು ಬ್ರಹ್ಮೋಸ್ ಕ್ಷಿಪಣಿಯ ಮೂತಿಯಾಗಲು ಬಹುತೇಕ ಅಂತಿಮ ಕ್ಷಣಗಣನೆ ಆರಂಭಿಸಿದೆ. ರಷ್ಯಾದ ಯುದ್ಧ ವಿಮಾನ ಸುಖೊಯ್‌ನ ಹೊಟ್ಟೆಯಡಿಯಲ್ಲಿ ಕುಳಿತಿರುವ ಬ್ರಹ್ಮೋಸ್‌ನ (ಏರ್‌ಬೋರ್ನ್ ವರ್ಸನ್) ಮೂತಿಗೆ ಸೀಕರ್‌ಗಳ ಪಡಿಯಚ್ಚು ಸಿದ್ಧಗೊಂಡಿದ್ದು ಶನಿವಾರ ತೆರೆಕಂಡ ಏರೋ ಇಂಡಿಯಾ ಪ್ರದರ್ಶನದಲ್ಲಿ ಪ್ರದರ್ಶಿತವಾಗಿತ್ತು.
ಕೇವಲ ಬೆಂಗಳೂರಿನ ಆಲಾ ಡಿಸೈನ್ ಮಾತ್ರವಲ್ಲದೇ ಚೆನ್ನ್ತ್ರೈನ ಡಾಟಾ ಪೇಟ್ರನ್ ಮತ್ತು ಹೈದರಾಬಾದ್‌ನ ಇಸಿಐಎಲ್ ಸಂಸ್ಥೆಗೂ ಸೀಕರ್ ನಿರ್ಮಾಣ ಮಾಡುವ ಒಪ್ಪಂದ ಮಾಡಲಾಗಿತ್ತು. ಆದರೆ ಆಲಾ ಡಿಸೈನ್ ಈ ನಿಟ್ಟಿನಲ್ಲಿ ಬಹಳಷ್ಟು ದೂರ ಸಾಗಿ ಬಂದಿದ್ದು ಶೀಘ್ರದಲ್ಲೇ ಬ್ರಹ್ಮೋಸ್‌ಗೆ ಸರಬರಾಜು ಮಾಡಲು ಸಿದ್ಧವಾಗಿದೆ. ಈ ತಂತ್ರಜ್ಞಾನ ಇನ್ನು ೨೦ ವರ್ಷಗಳಿಗೂ ಹೆಚ್ಚು ಕಾಲದವರೆಗೆ ಬಳಕೆ ಮಾಡಬಹುದಾಗಿದೆ. ರಷ್ಯಾಕ್ಕೂ ತಂತ್ರಜ್ಞಾನ ಒದಗಿಸಬಹುದಾಗಿದೆ. ಭೂ, ನೌಕಾ ಹಾಗೂ ವಾಯು ಸೇನೆಗಳ ಬಳಕೆಯ ಎಲ್ಲ ಬ್ರಹ್ಮೋಸ್‌ಗೂ ಈ ಸೀಕರ್ ಬಳಕೆ ಯೋಗ್ಯವಾಗಲಿದೆ ಎಂದು ಶಂಕರ್ ವಿವರಿಸಿದರು. ರಷ್ಯಾ ನಿರ್ಮಿತ ಈ ಸೀಕರ್ ಬೆಲೆ 10 ರಿಂದ 12 ಕೋಟಿ ರುಗಳಾದರೆ ಬೆಂಗಳೂರು ನಿರ್ಮಿತ ಸೀಕರ್ ಕೇವಲ ಆರು ಕೋಟಿ ರುಗೆ ಲಭ್ಯವಾಗಲಿದೆ ಎಂದರು.
ಈಗಾಗಲೇ ಮೂತಿ ರೆಡಿ!
ಬ್ರಹ್ಮೋಸ್‌ಗೆ ಜೋಡಿಸಲ್ಪಡುವ ಮೂತಿಗಳು ವಿವಿಧ ಹಂತದ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು ಈ ವರದಿ ಇದೀಗ ಬ್ರಹ್ಮೋಸ್‌ಗೂ ಕಳುಹಿಸಿಕೊಡಲಾಗಿದೆ. ೨ ಹಂತದ ಉಢಾವಣೆ ಪರೀಕ್ಷೆ ಬಳಿಕ ಒಂದೊಮ್ಮೆ ಒಪ್ಪಿತವಾದರೆ ಸೀಕರ್ ಉತ್ಪಾದನೆಯ ಆರ್ಡರ್ ಬೆಂಗಳೂರಿನ ಆಲ್ಫಾ ಡಿಸೈನ್ ಕೈ ಸೇರಲಿದೆ. ಕ್ಷಿಪಣಿಯು ತನ್ನ ಗುರಿಯನ್ನು ಗುರುತಿಸಬೇಕಾದ ದೂರ (ಸುಮಾರು ೭೦ಕಿಮೀ)ಕ್ಕೂ ಹೆಚ್ಚಿನ ದೂರದ ಶತ್ರು ಗುರಿಗಳನ್ನು ಗುರುತಿಸಬಲ್ಲ ಹಾಗೂ ಎಲ್ಲ ಹವಮಾನ ಸ್ಥಿತಿಯಲ್ಲೂ ಬಳಸಬಲ್ಲ ಸಾಮರ್ಥ್ಯ ಈ ಸೀಕರ್‌ಗಿದೆ. ಎಲ್ಲವೂ ಯಶಸ್ವಿಯಾದಲ್ಲಿ ಇನ್ನು ಕೇವಲ ಎರಡೇ ವರ್ಷದಲ್ಲಿ ಬೆಂಗಳೂರಿನಲ್ಲಿ ನಿರ್ಮಾಣಗೊಂಡ ಕ್ಷಿಪಣಿಯ ಮೂತಿ(ಸೀಕರ್ಸ್) ಬ್ರಹ್ಮೋಸ್‌ಗೆ ಜೋಡಣೆಯಾಗಲಿದೆ.
ಏನಿದು ಸೀಕರ್ಸ್?
ಕ್ಷಿಪಣಿಗಳ ಮೂತಿಯಲ್ಲಿರುವ ಈ ಸಾಧನಗಳು ಶತ್ರು ವಿಮಾನ ಅಥವಾ ಇನ್ನಿತರ ಯುದ್ಧಾಸ್ತ್ರಗಳ ಮೇಲೆ ಗುರಿ ನಿಗದಿ ಮಾಡುತ್ತದೆ. ನೈಜ ಗುರಿ ಗುರುತಿಸುವಲ್ಲಿ ಸೀಕರ್ಸ್ ಪಾತ್ರ ಮಹತ್ತರವಾಗಿದೆ. ಶತ್ರು ವಿಮಾನಗಳು ಅಥವಾ ಕ್ಷಿಪಣಿಗಳನ್ನು ಹೊಡೆದುರುಳಿಸುವಲ್ಲಿ ಸೀಕರ್ಸ್ ನಿರ್ಣಾಯಕ. ಕೇವಲ ಕ್ಷಿಪಣಿ ಮಾತ್ರವಲ್ಲ ರಾಕೆಟ್‌ಗಳಲ್ಲೂ ಈ ತಂತ್ರಜ್ಞಾನ ಬಳಕೆ ಆಗಲಿದೆ.
-ವರದಿ: ಪ್ರಶಾಂತ್ ಕುಮಾರ್ ಎಂ.ಎನ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.