2 ವರ್ಷದಿಂದ ಪ್ರಯತ್ನಪಟ್ಟರೂ ಆಧಾರ್‌ ಕಾರ್ಡ್‌ ಸಿಗುತ್ತಿಲ್ಲ!

First Published Apr 26, 2018, 7:13 AM IST
Highlights

ವಿದ್ಯಾರ್ಥಿವೇತನ, ಬ್ಯಾಂಕ್‌ ಖಾತೆ ಸೇರಿದಂತೆ ಪ್ರತಿಯೊಂದಕ್ಕೂ ಸಾರ್ವಜನಿಕರಿಗೆ ಸರ್ಕಾರ ಆಧಾರ್‌ ಸಂಖ್ಯೆ ಕಡ್ಡಾಯ ಮಾಡಿದೆ. ಅದರಂತೆ ಆಧಾರ್‌ಗಾಗಿ ಇಲ್ಲೊಬ್ಬ ಬಾಲಕ ಎರಡು ವರ್ಷಗಳಿಂದ ನೋಂದಣಿ ಮಾಡಿಸಿಕೊಳ್ಳುತ್ತಲೇ ಇದ್ದಾನೆ. ಪ್ರತಿ ಬಾರಿಯೂ ಆಧಾರ್‌ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಸಿಕೊಂಡದ್ದೇ ಬಂತು. ಈವರೆಗೂ ಆಧಾರ್‌ ಕಾರ್ಡ್‌ ಮಾತ್ರ ಕೈಸೇರಿಲ್ಲ!

ಕುಕನೂರು: ವಿದ್ಯಾರ್ಥಿವೇತನ, ಬ್ಯಾಂಕ್‌ ಖಾತೆ ಸೇರಿದಂತೆ ಪ್ರತಿಯೊಂದಕ್ಕೂ ಸಾರ್ವಜನಿಕರಿಗೆ ಸರ್ಕಾರ ಆಧಾರ್‌ ಸಂಖ್ಯೆ ಕಡ್ಡಾಯ ಮಾಡಿದೆ. ಅದರಂತೆ ಆಧಾರ್‌ಗಾಗಿ ಇಲ್ಲೊಬ್ಬ ಬಾಲಕ ಎರಡು ವರ್ಷಗಳಿಂದ ನೋಂದಣಿ ಮಾಡಿಸಿಕೊಳ್ಳುತ್ತಲೇ ಇದ್ದಾನೆ. ಪ್ರತಿ ಬಾರಿಯೂ ಆಧಾರ್‌ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಸಿಕೊಂಡದ್ದೇ ಬಂತು. ಈವರೆಗೂ ಆಧಾರ್‌ ಕಾರ್ಡ್‌ ಮಾತ್ರ ಕೈಸೇರಿಲ್ಲ!

ಹೌದು, ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮನ್ನಾಪುರ ಗ್ರಾಮದ ವಿದ್ಯಾರ್ಥಿ ಕನಕಪ್ಪ ಶೇಖಪ್ಪ ಹರಿಜನ ಎಂಬಾತ 10 ಬಾರಿ ಆಧಾರ್‌ ಕಾರ್ಡ್‌ಗಾಗಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾನೆ. ಆದರೆ, ಈವರೆಗೂ ಆಧಾರ್‌ ಕಾರ್ಡ್‌ ಕೈಸೇರಿಲ್ಲ. ಆಧಾರ್‌ ಕಾರ್ಡ್‌ಗಾಗಿ ರಾಜಧಾನಿ ಬೆಂಗಳೂರಿಗೆ ಅಲೆದದ್ದೂ ಆಗಿದೆ. ಇಷ್ಟಾದರೂ ಕಾರ್ಡ್‌ ಕೈಸೇರುತ್ತಿಲ್ಲ.

ಪರೀಕ್ಷೆ ಫಾರಂ ತುಂಬಲು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಾರಂ ತುಂಬಲು ಆಧಾರ್‌ ಕಾರ್ಡ್‌ ಸಂಖ್ಯೆ ಕಡ್ಡಾಯವಾಗಿತ್ತು. ಈ ಹಿನ್ನೆಲೆಯಲ್ಲಿ 2016ರ ಮಾರ್ಚ್’ನಿಂದ ಅನೇಕ ಆಧಾರ್‌ ಕೇಂದ್ರಗಳನ್ನು ಕನಕಪ್ಪ ತನ್ನ ತಂದೆಯೊಂದಿಗೆ ಸುತ್ತಿ ಬಂದಿದ್ದಾನೆ. ಪ್ರತಿ ಕೇಂದ್ರಕ್ಕೆ ಭೇಟಿ ನೀಡಿದಾಗ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ. ಆದರೆ ಕಾರ್ಡ್‌ನ ಸುಳಿವೇ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಹತ್ತು ಬಾರಿ ಕನಕಪ್ಪ ತನ್ನ ಹೆಸರು ನೋಂದಣಿ ಮಾಡಿ ನೋಡಿದ್ದಾನೆ. ಕೊನೆಗೆ ಅಧಿಕಾರಿಗಳ ಮಾತು ಕೇಳಿ ಬೆಂಗಳೂರಿನ ಆಧಾರ್‌ ಪ್ರಾದೇಶಿಕ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಅರ್ಜಿಸಲ್ಲಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಹೇಗೋ 10ನೇ ತರಗತಿಯ ಪರೀಕ್ಷೆ ಫಾರಂ ಅನ್ನು ಜಿಲ್ಲಾಧಿಕಾರಿಗಳ ಒಪ್ಪಿಗೆ ಮೇರೆಗೆ ಭರ್ತಿ ಮಾಡಿ ಸದ್ಯ ಪರೀಕ್ಷೆ ಬರೆದಿದ್ದಾನೆ.

ಮೋದಿಗೆ ಪತ್ರ: ಏನಾದರೂ ಮಾಡಿ ಆಧಾರ್‌ ಕಾರ್ಡ್‌ ಪಡೆಯಲೇಬೇಕೆಂದು ನಿರ್ಧರಿಸಿರುವ ಕನಕಪ್ಪ ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದಾನೆ. ಬೆಂಗಳೂರಿನ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೂ ಆಧಾರ್‌ ದೊರಕಿಸಿಕೊಡುವಂತೆ ಡಿಸೆಂಬರ್‌ನಲ್ಲಿ ಮನವಿ ಸಲ್ಲಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ ಜಿಲ್ಲಾ ಹಾಗೂ ಯಲಬುರ್ಗಾ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗೆ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕು ಎಂದು ನಿರ್ದೇಶನ ನೀಡಿದೆ. ಆದರೆ ಪ್ರಯೋಜನ ಮಾತ್ರ ಶೂನ್ಯ.

ಸಾಲ ಮಾಡಿ ಪ್ರಯತ್ನ: ಕಚೇರಿ ಕೆಲಸಗಳಿಗೆ ಆಧಾರ್‌ ನಂಬರ್‌ ಕಡ್ಡಾಯವಿರುವುದರಿಂದ ಕನಕಪ್ಪ ಪ್ರಯತ್ನ ಬಿಟ್ಟಿಲ್ಲ. ಗ್ರಾಮಸ್ಥರ ಬಳಿ ಹಣ ಪಡೆದು ಎರಡು ಸಲ ಕುಟುಂಬದವರೊಂದಿಗೆ ಬೆಂಗಳೂರಿಗೂ ಹೋಗಿ ಬಂದಿದ್ದಾನೆ. ಇಲ್ಲಿವರೆಗೂ ಆಧಾರ್‌ ಕಾರ್ಡ್‌ಗೆಂದೇ ಸಾವಿರಾರು ರುಪಾಯಿ ಖರ್ಚು ಮಾಡಿದ್ದಾಗಿದೆ. ಆಧಾರ್‌ ಕಾರ್ಡ್‌ ಮಾತ್ರ ಕೈಸೇರುವ ಲಕ್ಷಣ ಕಾಣಿಸುತ್ತಿಲ್ಲ.

10 ಬಾರಿ ನೋಂದಣಿ ಮಾಡಿಸಿಕೊಂಡಿದ್ದೇನೆ. ಈವರೆಗೆ ಆಧಾರ್‌ ಕಾರ್ಡ್‌ ಕೈಸೇರಿಲ್ಲ. ಆಧಾರ್‌ ಕೇಂದ್ರಕ್ಕೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇನೆ. ಎಲ್ಲ ಪ್ರಯತ್ನ ವಿಫಲವಾಗಿದೆ. ಏನು ಮಾಡುವುದೆಂದೇ ಗೊತ್ತಾಗುತ್ತಿಲ್ಲ.

- ಕನಕಪ್ಪ ಹರಿಜನ ಮನ್ನಾಪುರ ನಿವಾಸಿ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ ಜಿಲ್ಲಾ ಹಾಗೂ ಯಲಬುರ್ಗಾ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳಿಗೆ ಸೂಕ್ತ ಕ್ರಮ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕು ಎಂದು ನಿರ್ದೇಶನ ಮಾಡಿರುವ ಪ್ರತಿ.

click me!