
ಇಟಾನಗರ: ದೇಶದ ಅತ್ಯಂತ ಹಿಂದುಳಿದ ಈಶಾನ್ಯ ಭಾಗದ ಅರುಣಾಚಲ ಪ್ರದೇಶದ ಒಂದು ಹಳ್ಳಿ. ಇಲ್ಲಿರುವುದು 31 ಮನೆಗಳು. ಎಲ್ಲರೂ ಬಡವರೇ. ಆದರೆ, ಮೊನ್ನೆ ಸೋಮವಾರ ಈ ಎಲ್ಲ ಕುಟುಂಬಗಳೂ ದಿಢೀರನೆ ಕೋಟ್ಯಧಿಪತಿಗಳಾಗಿವೆ!
ಹೌದು, ಭಾರತೀಯ ಸೇನೆಯ ಕೃಪೆಯಿಂದಾಗಿ ಈ ಊರು ಈಗ ಏಷ್ಯಾದ ಅತಿ ಶ್ರೀಮಂತ ಊರುಗಳ ಪೈಕಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಲ್ಲ ಕುಟುಂಬಗಳೂ ಕೋಟ್ಯಧಿಪತಿಗಳಾಗಿರುವ ಭಾರತದ ಏಕೈಕ ಹಳ್ಳಿಯಿದು ಎಂದೂ ಹೇಳಲಾಗುತ್ತಿದೆ. ಇಲ್ಲಿರುವವರೆಲ್ಲ ಇದ್ದಕ್ಕಿದ್ದಂತೆ ಭಾರಿ ಶ್ರೀಮಂತರಾಗಿದ್ದು ಹೇಗೆ ಗೊತ್ತಾ? ತಮ್ಮ ಜಮೀನನ್ನು ಭಾರತೀಯ ಸೇನೆಗೆ ಬಿಟ್ಟುಕೊಟ್ಟು, ಅದಕ್ಕೆ ಪಡೆದ ಪರಿಹಾರದ ಹಣದಿಂದ.
ಕಳೆದ ಸೋಮವಾರ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ರಕ್ಷಣಾ ಇಲಾಖೆಯಿಂದ ಬಂದ ಹಣದಲ್ಲಿ ಬೊಮ್ಜಾದ ಎಲ್ಲ ಮನೆಗಳಿಗೆ ಸರಾಸರಿ ಒಂದು ಕೋಟಿ ರು.ಗಿಂತ ಹೆಚ್ಚಿನ ಪರಿಹಾರ ವಿತರಿಸಿದರು. ಅದರ ಒಟ್ಟು ಮೊತ್ತ .40,80,38,400. ಇದಕ್ಕಾಗಿ ಈ ಊರಿನವರು ಬಿಟ್ಟುಕೊಟ್ಟಭೂಮಿ ಒಟ್ಟು 200 ಎಕರೆ.
ಅರುಣಾಚಲ ಪ್ರದೇಶವು ಚೀನಾದ ಗಡಿಯಲ್ಲಿರುವುದರಿಂದ ಇಲ್ಲಿನ ಬೊಮ್ಜಾ ಊರು ಸೇನಾಪಡೆಗೆ ವ್ಯೂಹಾತ್ಮಕ ಸ್ಥಳವಾಗಿದೆ. ಹೀಗಾಗಿ ಇಲ್ಲಿ ತವಾಂಗ್ ಗ್ಯಾರಿಸನ್‌ನ ತುಕಡಿಗಳನ್ನು ಸ್ಥಾಪಿಸಲು ಭಾರತೀಯ ಸೇನೆಯು ಭೂಮಿ ವಶಪಡಿಸಿಕೊಂಡಿದೆ.
ಊರಿನಲ್ಲಿರುವ 31 ಕುಟುಂಬಗಳಲ್ಲಿ ಒಂದು ಕುಟುಂಬಕ್ಕೆ 6.73 ಕೋಟಿ, ಇನ್ನೊಂದು ಕುಟುಂಬಕ್ಕೆ 2.44 ಕೋಟಿ ಹಾಗೂ ಇನ್ನುಳಿದ 29 ಕುಟುಂಬಗಳಿಗೆ ಸರಾಸರಿ 1.09 ಕೋಟಿ ರು. ಪರಿಹಾರ ಲಭಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.