ವಿರಳ ಸಂಚಾರ ದಿನ ಬಿಎಂಟಿಸಿ ಟಿಕೆಟಲ್ಲಿ ರಿಯಾಯಿತಿ

By Suvarna Web DeskFirst Published Dec 14, 2017, 9:58 AM IST
Highlights

ಸಾರಿಗೆ ಇಲಾಖೆ ಬೆಂಗಳೂರು ನಗರದಲ್ಲಿ ಪ್ರತಿ ತಿಂಗಳು ಎರಡನೇ ಭಾನುವಾರ ಆಚರಿಸಲಿರುವ ವಿರಳ ಸಂಚಾರ ದಿನ (ಲೆಸ್ ಟ್ರಾಫಿಕ್ ಡೇ)ದ ರಾಯಭಾರಿಗಳನ್ನಾಗಿ ಚಿತ್ರನಟ ಪುನೀತ್ ರಾಜ್ ಕುಮಾರ್ ಹಾಗೂ ಯಶ್ ಅವರನ್ನು ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಿದೆ.

ಬೆಂಗಳೂರು (ಡಿ.14): ಸಾರಿಗೆ ಇಲಾಖೆ ಬೆಂಗಳೂರು ನಗರದಲ್ಲಿ ಪ್ರತಿ ತಿಂಗಳು ಎರಡನೇ ಭಾನುವಾರ ಆಚರಿಸಲಿರುವ ವಿರಳ ಸಂಚಾರ ದಿನ (ಲೆಸ್ ಟ್ರಾಫಿಕ್ ಡೇ)ದ ರಾಯಭಾರಿಗಳನ್ನಾಗಿ ಚಿತ್ರನಟ ಪುನೀತ್ ರಾಜ್ ಕುಮಾರ್ ಹಾಗೂ ಯಶ್ ಅವರನ್ನು ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಿದೆ.

ವಿಕಾಸಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಈ ವಿಷಯ ತಿಳಿಸಿದರು. ವಿರಳ ಸಂಚಾರ ದಿನದಂದು ನಾಗರಿಕರು ಖಾಸಗಿ ವಾಹನಗಳನ್ನು ಬಳಸಬಾರದು ಎಂಬುದು ಕಾನೂನಿನ ಕ್ರಮವಲ್ಲ, ಪರಿಸರ ಸಂರಕ್ಷಣೆ ಹಾಗೂ ಸಮೂಹ ಸಾರಿಗೆ ಬಳಕೆ ಉತ್ತೇಜಿಸುವ ದೃಷ್ಟಿಯಿಂದ ನಾಗರಿಕರ ಸಹಯೋಗದಲ್ಲಿ ನಡೆಸುವ ಯೋಜನೆ. ಹೀಗಾಗಿ ಜನರನ್ನು ಈ ಬಗ್ಗೆ ಜಾಗೃತಗೊಳಿಸಿ, ಪ್ರೇರೇಪಣೆ ಗೊಳಿಸುವ ಸಲುವಾಗಿ ಚಿತ್ರನಟರನ್ನು ರಾಯಭಾರಿಗಳನ್ನಾಗಿ ನೇಮಕ ಮಾಡಿಕೊಳ್ಳುವ ಚಿಂತನೆ ನಡೆದಿದೆ.

ಶೀಘ್ರವೇ ನಟರೊಂದಿಗೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು. ವಿರಳ ಸಂಚಾರ ದಿನದಂದು ಸಾರ್ವಜನಿಕರು ತಮ್ಮ ಸ್ವಂತ ವಾಹನಗಳಾದ ಬೈಕ್, ಕಾರು ಮತ್ತಿತರ ವಾಹನಗಳನ್ನು ಬಳಸದೇ ಸಮೂಹ ಸಾರಿಗೆಗಳಾದ ಬಿಎಂಟಿಸಿ, ಮೆಟ್ರೊ, ಆ್ಯಪ್ ಆಧಾರಿತ ಆಟೋ, ಟ್ಯಾಕ್ಸಿ ಮತ್ತಿತರ ವಾಹನಗಳನ್ನು ಬಳಸಬೇಕು.

ಬೆಂಗಳೂರು ನಗರದಲ್ಲಿ ಒಟ್ಟು 72 ಲಕ್ಷ ವಾಹನಗಳಿದ್ದು, ಆ ಪೈಕಿ 65 ಲಕ್ಷ ವಾಹನಗಳು ಖಾಸಗಿ ನೋಂದಣಿ (ಬಿಳಿ ಸಂಖ್ಯಾ-ವೈಟ್ ಬೋರ್ಡ್) ವಾಹನಗಳಾಗಿವೆ. ಹೀಗಾಗಿ ಖಾಸಗಿ ವಾಹನಗಳ ಬಳಕೆ ನಿಲ್ಲಿಸಿದರೆ ಆ ದಿನ ಸುಮಾರು 65 ಲಕ್ಷ ವಾಹನಗಳ ಬಳಕೆ ತಡೆಯಬಹುದಾಗಿದೆ. ಇದರಿಂದ ಪರಿಸರದ ಮೇಲೆ ಆಗುವ ಪರಿಣಾಮವನ್ನೂ ನಿಯಂತ್ರಿಸಬಹುದಾಗಿದೆ ಎಂದು ವಿವರಿಸಿದರು.

ರಿಯಾಯ್ತಿ: ವಿರಳ ಸಂಚಾರ ದಿನದಂದು ಬಿಎಂಟಿಸಿ ಬಸ್ಗಳಲ್ಲಿ ನಾಗರಿಕರು ಸಂಚರಿಸುವುದನ್ನು ಉತ್ತೇಜಿಸಲು ಎರಡನೇ ಭಾನುವಾರದಂದು ಎಲ್ಲಾ ಬಿಎಂಟಿಸಿ ಬಸ್’ಗಳ ಪ್ರಯಾಣ ದರದಲ್ಲಿ ರಿಯಾಯ್ತಿ ನೀಡಲಾಗುವುದು. ದಿನದ ಬಸ್ ಪಾಸ್ ಬಳಕೆದಾರರಿಗೂ ಈ ಯೋಜನೆಯಿಂದ ರಿಯಾಯ್ತಿ ಸಿಗಲಿದೆ. ಈ ಮೂಲಕ ಸಮೂಹ ಸಾರಿಗೆ ಬಳಕೆಯತ್ತ ನಾಗರಿಕರನ್ನು ಸೆಳೆದಂತಾಗುತ್ತದೆ ಎಂದು ಅವರು ಹೇಳಿದರು.

ವಿರಳ ಸಂಚಾರ ದಿನ ಯಶಸ್ವಿಯಾಗಬೇಕಾದರೆ ಸರ್ಕಾರಿ ಹಾಗೂ ಖಾಸಗಿ ವಲಯದ ಅನೇಕ ಸಂಘ-ಸಂಸ್ಥೆಗಳು ಕೈ ಜೋಡಿಸಬೇಕಾಗುತ್ತದೆ. ಹೀಗಾಗಿ ಬಿಎಂಟಿಸಿ, ನಗರ ಪೊಲೀಸ್, ಎನ್’ಜಿಓಗಳು, ಐಟಿ-ಬಿಟಿ ಸಂಸ್ಥೆಗಳು ಹೀಗೆ ಎಲ್ಲಾ ಭಾಗಿದಾರ ಪ್ರತಿನಿಗಳ ಸಭೆ ನಡೆಸಿ, ಯೋಜನೆಯ ಯಶಸ್ವಿಗೆ ಮನವೊಲಿಸಲಾಗುವುದು.

ಆಯಾ ಪಾಲುದಾರರು ತಮ್ಮ ಕೈಲಾದ ನೆರವು ನೀಡಿದರೆ ಮಾತ್ರ ಈ ಯೋಜನೆ ಯಶಸ್ವಿಯಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಾಗರಿಕರ ಸ್ವಯಂ ಪ್ರೇರಿತರಾಗಿ ವಿರಳ ಸಂಚಾರ ದಿನದ ಯಶಸ್ವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

click me!