ಬಿಎಂಟಿಸಿ ದರ ಹೆಚ್ಚಳದ ಕುರಿತು ಸಾರಿಗೆ ಸಚಿವ ಹೇಳಿದ್ದೇನು?

First Published Jul 11, 2018, 4:25 PM IST
Highlights

ಬಿಎಂಟಿಸಿ ದರ ಹೆಚ್ಚಳ ಮಾಡಲ್ಲ ಎಂದ ಸಾರಿಗೆ ಸಚಿವ

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಡಿ.ಸಿ. ತಮ್ಮಣ್ಣ ಸುದ್ದಿಗೋಷ್ಠಿ

ಡೀಸೆಲ್ ದರ ಹೆಚ್ಚಳವಾಗಿದ್ದರೂ ದರ ಹೆಚ್ಚಳ ಇಲ್ಲ ಎಂದ ಸಚಿವ

100 ಕೋಟಿ ರೂ. ಅನುದಾನ ಸಾಲದು ಎಂದ ಸಚಿವ

1000 ಕೋಟಿ ರೂ ಅನುದಾನಕ್ಕೆ ಸಿಎಂಗೆ ಮನವಿ

ಉಚಿತ ವಿದ್ಯಾರ್ಥಿ ಬಸ್ ಪಾಸ್ ಕುರಿತು ಚರ್ಚೆ

ಬೆಂಗಳೂರು(ಜು.11): ಯಾವುದೇ ಕಾರಣಕ್ಕೂ ಬಿಎಂಟಿಸಿ ಟಿಕೆಟ್ ದರ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ. ಇಂದು ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಟಿಕೆಟ್ ದರ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾವನೆ ಇಲಾಖೆ ಮುಮದೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಡೀಸೆಲ್ ದರ ಹೆಚ್ಚಳವಾಗಿರುವುದು ಖಂಡಿತ ಸಾರಿಗೆ ನಿಗಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ತೈಲ ದರ ಏರಿಕೆ ಕಾರಣ ನೀಡಿ ಟಿಕೆಟ್ ದರ ಏರಿಸುವುದು ಸಾಧುವಲ್ಲ ಎಂದು ಡಿ.ಸಿ. ತಮ್ಮಣ್ಣ ಹೇಳಿದರು. ಇದೇ ವೆಳೆ ಪ್ರಸಕ್ತ ಬಜೆಟ್ ನಲ್ಲಿ ಬಿಎಂಟಿಸಿಗೆ ಸರ್ಕಾರ ೧೦೦ ಕೋಟಿ ರೂ. ಅನುದಾನ ನೀಡಿದ್ದು, ಇದು ಸಾರಿಗೆ ನಿಗಮದ ಅಭಿವೃದ್ಧಿಗೆ ಸಾಲುವುದಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಎಂಟಿಸಿಗೆ ಕನಿಷ್ಠ 1000 ಕೋಟಿ ರೂ. ಅನುದಾನ ನೀಡಿ ಎಂದು ಸರ್ಕಾರವನ್ನು ಕೇಳಿದ್ದೇವು. ಆದರೆ ಕೇವಲ 100 ಕೋಟಿ ಅನುದಾನವಷ್ಟೇ ಮಂಜೂರಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ 1000 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ನಷ್ಟದಲ್ಲಿರುವ ಬಿಎಂಟಿಸಿಯನ್ನು ಮೇಲೆತ್ತಲು ಹಲವು ಹೊಸ ಯೋಜನೆಗಳನ್ನು ಸಿದ್ದಪಡಿಸಿದ್ದು, ಪರ್ಯಾಯ ಆದಾಯ ಮೂಲದ ಮೂಲಕ ಲಾಭ ಗಳಿಸಲು ಚಿಂತಿಸಲಾಗುವುದು ಎಂದು ತಮ್ಮಣ್ಣ ಹೇಳಿದರು. ನಗರದಲ್ಲಿ ಬಿಎಂಟಿಸಿಗೆ ಸೇರಿದ ಸುಮಾರು ೭೦೦ ಎಕರೆ ಜಾಗವಿದ್ದು, ಇದರಲ್ಲಿ ವಾಣಿಜ್ಯ ಕಟ್ಟಡಗಳು, ಮಲ್ಟಿಪ್ಲೆಕ್ಸ್ ಗಳನ್ನು ನಿರ್ಮಿಸಲು ಚಿಂತಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಅಲ್ಲದೇ ಎಲ್ಲಾ ಡಿಪೋಗಳಲ್ಲಿ ಸೋಲಾರ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಮ್ಮಣ್ಣ ಹೇಳಿದ್ದು, ಪಿಪಿಪಿ ಮಾದರಿಯಲ್ಲಿ ಸೋಲಾರ್ ಅಳವಡಿಸಿ ವಿದ್ಯುತ್ ಬಿಲ್ ಕಡಿಮೆ ಮಾಡಲು ಮುಂದಾಗುವುದಾಗಿ ಭರವಸೆ ನೀಡಿದ್ದಾರೆ.

ಇನ್ನು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಮನಸ್ಸು ತಮಗೂ ಇದ್ದು, ಈ ಕುರಿತು ಸಿಎಂ ಕುಮಾರಸ್ವಾಮಿ ಜೊತೆ ಮಾತನಾಡುವುದಾಗಿ ಭರವಸೆ ನೀಡಿದರು.

click me!