
ಬೆಂಗಳೂರು(ಏ.14): ಬಿಎಸ್-3 ಮಾದರಿಯ 7 ಲಕ್ಷ ಕಿ.ಮೀ. ಕ್ರಮಿಸಿದ 1,650 ಬಿಎಂಟಿಸಿ ಬಸ್‌ಗಳ ಸಂಚಾರವನ್ನು ಹಂತ ಹಂತವಾಗಿ ಸ್ಥಗಿತಗೊಳಿಸಲು ಬಿಎಂಟಿಸಿ ನಿರ್ಧರಿಸಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧ್ಯಕ್ಷ ನಾಗರಾಜ್ ಯಾದವ್ ತಿಳಿಸಿದ್ದಾರೆ.
ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಗರದಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಬಿಎಸ್-3 ಮಾದರಿಯ 7 ಲಕ್ಷ ಕಿಲೋ ಮೀಟರ್ ಓಡಿ ರುವ 1,650 ಬಿಎಂಟಿಸಿ ಬಸ್‌ಗಳ ಸಂಚಾರ ಸ್ಥಗಿತ ಗೊಳಿಸಿ, ಬಿಎಸ್-4 ಮಾದರಿಯ ಪರಿಸರ ಸ್ನೇಹಿಯಾದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 1,650 ಬಸ್‌ಗಳ ಖರೀದಿಗೆ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.
ನಿಗಮದ ನೌಕರರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿ ಸುವ ನಿಟ್ಟಿನಲ್ಲಿ ನಗರದಲ್ಲಿ ಎರಡು ಕ್ಲಿನಿಕ್ ಆರಂಭಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆ ಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮೆಜೆಸ್ಟಿಕ್ ಮತ್ತು ಯಶವಂತಪುರದಲ್ಲಿ ಕ್ಲಿನಿಕ್ ಆರಂಭಿಸಲು ಈಗಾಗಲೇ ಸ್ಥಳ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು. ಬಿಎಂಟಿಸಿಗೆ ಮಾಸಿಕ 20 ರೂ ಕೋಟಿ ನಷ್ಟಉಂಟಾಗುತ್ತಿದೆ. ಟೋಲ್ ಶುಲ್ಕ ಮತ್ತು ಮೋಟಾರು ವಾಹನ ತೆರಿಗೆಯಿಂದ ವಾರ್ಷಿಕ 120 ರೂ. ಕೋಟಿ ಹೊರೆ ಯಾಗುತ್ತಿದೆ. ರಾಜ್ಯ ಸರ್ಕಾರ ಈ ಎರಡು ತೆರಿಗೆಗೆ ವಿನಾಯಿತಿ ನೀಡಿದರೆ, ಸಂಸ್ಥೆಯನ್ನು ಆದಾಯದ ಹಳಿಗೆ ತೆಗೆದುಕೊಂಡು ಹೋಗಬಹುದು ಎಂದು ಹೇಳಿದರು.
ಗ್ರೂಪ್ ಪ್ಯಾಕೇಜ್
ಚಿಲ್ಲರೆ ಸಮಸ್ಯೆ, ಪ್ರಯಾಣಿಕರ ಸುರಕ್ಷತೆ ಹಾಗೂ ಗುಣಮಟ್ಟದ ಸೇವೆ ನೀಡುವ ನಿಟ್ಟಿನಲ್ಲಿ ಟಿಕೆಟ್ ದರ ಪರಿಷ್ಕರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ವಾಯು ವಜ್ರ ಹವಾನಿಯಂತ್ರಿತ ಬಸ್‌ಗಳ ಟಿಕೆಟ್ ದರ ಪರಿಷ್ಕರಿಸುವ ಚಿಂತನೆಯಿದೆ.
ವೋಲ್ವೋ ಬಸ್‌ಗಳಿಗೆ ಹೆಚ್ಚಿನ ಪ್ರಯಾಣಿಕರನ್ನು ಸೆಳೆ ಯುವ ಉದ್ದೇಶದಿಂದ ವಾರಾಂತ್ಯ ದಿನಗಳಲ್ಲಿ ಗ್ರೂಪ್ ಪ್ಯಾಕೇಜ್ ನೀಡುವ ನಿಟ್ಟಿನಲ್ಲೂ ಆಲೋಚಿಸಲಾಗಿದೆ ಎಂದು ನಾಗರಾಜ್ ಯಾದವ್ ತಿಳಿಸಿದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೂರು ವರ್ಷಗಳ ಬಳಿಕ ಬಸ್ ಟಿಕೆಟ್ ದರ ಪರಿಷ್ಕರಣೆ ಮಾಡಿದೆ. ಸಾಮಾನ್ಯ ಹಾಗೂ ಹವಾನಿಯಂತ್ರಿತ ಬಸ್‌ಗಳ ಟಿಕೆಟ್ ದರಗಳಲ್ಲಿ ಕೆಲ ಹಂತಗಳಿಗೆ ಕಡಿತವನ್ನೂ, ಕೆಲ ಹಂತಗಳಲ್ಲಿ ಹೆಚ್ಚಳವನ್ನೂ ಮಾಡಿದೆ. ಏ.15ರಿಂದ ಪರಿಷ್ಕೃತ ಟಿಕೆಟ್ ದರ ಜಾರಿಯಾಗಲಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಗುರುವಾರ ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸುವ ಸಲುವಾಗಿ ಸಂಸ್ಥೆಯ ಸಾಮಾನ್ಯ ಬಸ್ ಹಾಗೂ ಹವಾನಿಯಂತ್ರಿತ ಬಸ್‌ಗಳ ಟಿಕೆಟ್ ದರದ ಪರಿಷ್ಕರಿಸಲಾಗಿದೆ. ದರ ಪರಿಷ್ಕರಣೆಯಿಂದ ಸಂಸ್ಥೆಗೆ ಸಾಮಾನ್ಯ ಬಸ್‌ಗಳಿಂದ ದಿನಕ್ಕೆ .1.50 ಲಕ್ಷ ರೂ. ಹಾಗೂ ಹವಾ ನಿಯಂತ್ರಿತ ಬಸ್‌ಗಳಿಂದ .3 ಲಕ್ಷ ರೂ ನಷ್ಟ ಉಂಟಾಗಲಿದೆ ಎಂದು ವಿವರಣೆ ನೀಡಿದರು.
ಸಾಮಾನ್ಯ ಬಸ್‌ಗಳ ಎರಡನೇ ಹಂತದ (ಸ್ಟೇಜ್) ಸದ್ಯದ ಟಿಕೆಟ್ ದರ .12 ಇದ್ದು, ಇದನ್ನು .10ಕ್ಕೆ ಇಳಿಸಿರುವುದರಿಂದ ಸದ್ಯದ ಅತಿ ಹೆಚ್ಚು ಪ್ರಯಾಣಿಕರನ್ನು ಹೊಂದಿದ ಈ ವರ್ಗದಲ್ಲಿ ಶೇ.50ರಷ್ಟುಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇನ್ನು 3, 6 ಮತ್ತು 8ನೇ ಹಂತದಲ್ಲಿ ಚಿಲ್ಲರೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ .1 ರೂ. ಹೆಚ್ಚಳ ಮಾಡಲಾಗಿದೆ. ಈ ಹಂತಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಶೇಕಡಾವಾರು ಕಡಿಮೆ ಇರುವುದರಿಂದ ಸಾರ್ವಜನಿಕರ ಮೇಲೆ ಅಷ್ಟಾಗಿ ಹೊರೆಯಾಗುವುದಿಲ್ಲ ಎಂದು ಸಮರ್ಥಿಸಿಕೊಂಡರು.
ಹವಾನಿಯಂತ್ರಿತ ಬಸ್‌ಗಳಲ್ಲಿ 1ನೇ ಹಂತದ ಟಿಕೆಟ್ ದರ .15ರಿಂದ .10 ರೂ., 3ನೇ ಹಂತದ . 35 ರಿಂದ . 30 ರೂ., 4ನೇ ಹಂತದ ದರ .45 ರಿಂದ . 40 ರೂ. 14ನೇ ಹಂತದ ದರ . 95ರಿಂದ . 90ಕ್ಕೆ ಕಡಿತಗೊಳಿಸಲಾಗಿದೆ. ಪ್ರಾರಂಭದ ಹಂತದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ದರ ಕಡಿತದಿಂದ ಶೇ.30ರಷ್ಟುಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಅಂತೆಯೆ 10ನೇ ಹಂತದ ಟಿಕೆಟ್ ದರ . 70 ರಿಂದ . 75 ರೂ., 16ನೇ ಹಂತದ ದರ 95ರಿಂದ . 100 ರೂ., 18ನೇ ಹಂತದ ದರ . 105 ರಿಂದ . 110 ರೂ., 19ನೇ ಹಂತದ ದರ . 105 ರಿಂದ 110 ರೂ. ಮತ್ತು 22ನೇ ಹಂತದ ದರ . 115 ರಿಂದ . 120ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ವಿವರಿಸಿದರು.
ಪ್ರಸ್ತುತ ಬಿಎಂಟಿಸಿ ಸಂಸ್ಥೆ ನಷ್ಟದಲ್ಲಿ ಮುಂದುವರಿದಿದೆ. ಈ ಹಿಂದೆ ಆಡಳಿತ ನಡೆಸಿದವರು .650 ಕೋಟಿ ಸಾಲ ಮಾಡಿದ್ದರು. ಈಗಲೂ ಅಷ್ಟೇ ಸಾಲವಿದೆ. ನಾವು ಹೊಸ ಸಾಲ ಮಾಡಿಲ್ಲ. 2015-16ನೇ ಸಾಲಿನಲ್ಲಿ ಸಂಸ್ಥೆ ಸುಮಾರು 10 ಕೋಟಿ ಆದಾಯ ಗಳಿಸಿತ್ತು. 2016-17ನೇ ಸಾಲಿನಲ್ಲಿ ನೋಟ್ ಬ್ಯಾನ್, ನೌಕರರ ಮುಷ್ಕರ, ಮಹಾದಾಯಿ, ಕಾವೇರಿ ಹೋರಾಟದ ಬಂದ್‌ಗಳಿಂದ ಸಂಸ್ಥೆಗೆ ನಷ್ಟಉಂಟಾಗಿದೆ ಎಂದು ಹೇಳಿದರು.
ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸಿದ್ಧತೆ
ಬಿಎಂಟಿಸಿಯಿಂದ ನಗರದಲ್ಲಿ 150 ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಆರಂಭಿಸಲು ಸಿದ್ಧತೆ ನಡೆಸಿದ್ದು, ಬಸ್‌ಗಳ ಖರೀದಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಇನ್ನು ರಾಜ್ಯ ಸರ್ಕಾರ 1,500 ಹೊಸ ಬಸ್‌ಗಳನ್ನು ಸಂಸ್ಥೆಗೆ ನೀಡುತ್ತಿದ್ದು, ಜತೆಗೆ 1500 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳುತ್ತೇವೆ. ಇದರಿಂದ ಈಗಿನ 6200 ಬಸ್‌ಗಳ ಸಂಖ್ಯೆಗೆ 9 ಸಾವಿರಕ್ಕೆ ಏರಿಕೆಯಾಗಲಿದೆ. ಪ್ರಯಾಣಿಕರ ಸ್ನೇಹಿಯಾದ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಬಸ್‌ಗಳನ್ನೇ ಖರೀದಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಶೀಘ್ರ ಸ್ಮಾರ್ಟ್ ಕಾರ್ಡ್
ಪ್ರಯಾಣಿಕರ ಅನುಕೂಲಕ್ಕಾಗಿ ಸ್ಮಾರ್ಟ್ ಕಾರ್ಡ್ ಪರಿಚಯಿಸಲಾಗುತ್ತಿದೆ. ಈಗಾಗಲೇ ಈ ಸಂಬಂಧ ಕೆಲಸ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಪೈಲಟ್ ಯೋಜನೆ ಜಾರಿಗೊಳಿಸಲಾ ಗುವುದು. ಸಾರ್ವಜನಿಕರು ಬಸ್‌ಗಳಲ್ಲಿ ಪ್ರಯಾಣಿಸುವುದರ ಜತೆಗೆ ಮೆಟ್ರೋ ರೈಲು ಪ್ರಯಾಣಕ್ಕೂ ಅನುಕೂಲವಾಗುವಂತೆ ಸ್ಮಾರ್ಟ್ ಕಾರ್ಡ್‌ಅನ್ನು ಮೆಟ್ರೋ ರೈಲಿನೊಂದಿಗೆ ಲಿಂಕ್ ಮಾಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್‌ರೂಪ್ ಕೌರ್, ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ಮತ್ತಿತರರಿದ್ದರು.
ಮಾರ್ಕೊಪೋಲೋ ಬಸ್ 1 ಲಕ್ಷಕ್ಕೂ ಯಾರೂ ಕೇಳಲಿಲ್ಲ: ಮಾರ್ಕೊ ಪೋಲೋ ಬಸ್ ಸಂಚಾರದಿಂದ ಸಂಸ್ಥೆಗೆ ನಷ್ಟಉಂಟಾದ ಹಿನ್ನೆಲೆಯಲ್ಲಿ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಬಸ್‌ಗಳನ್ನು ಹರಾಜಿನಲ್ಲಿ ಒಂದು . ಲಕ್ಷಕ್ಕೂ ಖರೀದಿಸಲು ಯಾರೂ ಮುಂದೆ ಬರಲಿಲ್ಲ. ಹಾಗಾಗಿ ಬಿಡಿ ಭಾಗಗಳನ್ನು ಐದಾರು ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಕೆಎಸ್‌ಆರ್‌ಟಿಸಿಯ 45 ಮತ್ತು ಬಿಎಂಟಿಸಿಯ 93 ಬಸ್‌ಗಳ ಬಿಡಿ ಭಾಗ ಮಾರಾಟ ಮಾಡಿ ವಿಲೇವಾರಿ ಮಾಡಲಾಯಿತು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
(ಕನ್ನಡಪ್ರಭ ವಾ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.