ಶಿಬಿರದಲ್ಲಿ ರಕ್ತ ಸಂಗ್ರಹಕ್ಕೆ ಗರಿಷ್ಠ 500 ಯೂನಿಟ್‌ ಮಿತಿ

By Web DeskFirst Published Oct 2, 2018, 9:53 AM IST
Highlights

ಶಿಬಿರದಲ್ಲಿ ರಕ್ತ ಸಂಗ್ರಹಕ್ಕೆ ಗರಿಷ್ಠ 500 ಯೂನಿಟ್‌ ಮಿತಿ | ಸಾಮೂಹಿಕ ಸ್ವಯಂ ರಕ್ತದಾನ ಶಿಬಿರಕ್ಕೆ 100-150 ಯುನಿಟ್‌ ಸಂಗ್ರಹಕ್ಕೆ ಅನುಮತಿ
 

 ಬೆಂಗಳೂರು (ಅ. 02): ಸ್ವಯಂ ರಕ್ತದಾನ ಶಿಬಿರ ಏರ್ಪಡಿಸುವಾಗ ಗರಿಷ್ಠ 500 ಯೂನಿಟ್‌ ರಕ್ತ ಮಾತ್ರ ಸಂಗ್ರಹಿಸಬೇಕು ಹಾಗೂ ಸಂಗ್ರಹಿಸಿರುವ ರಕ್ತವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್ಷನ್‌ ಸೊಸೈಟಿಯು ಎಲ್ಲಾ ರಕ್ತನಿಧಿ ಕೇಂದ್ರಗಳಿಗೆ ಸುತ್ತೋಲೆ ಹೊರಡಿಸಿದೆ.

ರಕ್ತ ಸಂಪೂರ್ಣ ಸದ್ಬಳಕೆ ಮಾಡುವುದು ಹಾಗೂ ರಕ್ತದಾನ ಮಾಡುವ ರೋಗಿಗೆ ಸೂಕ್ತ ಆರೋಗ್ಯಕರ ವ್ಯವಸ್ಥೆ ಮಾಡುವ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸುವಾಗ ಕಟ್ಟುನಿಟ್ಟಿನ ನೀತಿ ಅನುಸರಿಸುವಂತೆ ಸೂಚಿಸಿದೆ.

ರಕ್ತಿನಿಧಿ ಕೇಂದ್ರಗಳು ಸ್ವಯಂ ರಕ್ತದಾನ ಶಿಬಿರ ಏರ್ಪಡಿಸಿದರೆ 500 ಯೂನಿಟ್‌ ಮಾತ್ರ ಸಂಗ್ರಹಿಸಬೇಕು. ವಿವಿಧ ರಕ್ತನಿಧಿಗಳು ಸೇರಿ ಸಾಮೂಹಿಕ ಸ್ವಯಂ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರೆ ವೈಯಕ್ತಿಕ ರಕ್ತನಿಧಿ ಕೇಂದ್ರಗಳು 100ರಿಂದ 150 ಯೂನಿಟ್‌ ಮಾತ್ರವೇ ಸಂಗ್ರಹಿಸಬೇಕು. ಇದು ಅವರ ಬೇಡಿಕೆ ಮತ್ತು ಉಪಯೋಗದ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರಬೇಕು ಎಂದು ಸೂಚನೆ ನೀಡಲಾಗಿದೆ.

ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತದಾನಿಯ ರಕ್ತ ತಪಾಸಣೆ ಹಾಗೂ ಆಪ್ತ ಸಮಾಲೋಚನೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಶಿಬಿರದ ಸ್ಥಳದಲ್ಲಿ ಬೆಳಕು, ಶುದ್ಧಗಾಳಿ ಮತ್ತು ಸ್ವಚ್ಛತೆಯಿರುವಂತೆ ನೋಡಿಕೊಳ್ಳಬೇಕು. ಸಾಕಷ್ಟುಸಿಬ್ಬಂದಿ ಶಿಬಿರದಲ್ಲಿ ಹಾಜರಿರಬೇಕು. ಈ ವೇಳೆ ತುರ್ತು ಚಿಕಿತ್ಸಾ ಘಟಕ ಅಥವಾ ತುರ್ತು ಚಿಕಿತ್ಸೆ ವಾಹನದ ವ್ಯವಸ್ಥೆ ಕಡ್ಡಾಯವಾಗಿ ಮಾಡಿರಬೇಕು ಎಂದು ಸೂಚಿಸಲಾಗಿದೆ. 

click me!